ರಾಷ್ಟ್ರಪತಿ ಚುನಾವಣೆ: ಗಾಲಿ ಖುರ್ಚಿಯಲ್ಲಿ ಆಗಮಿಸಿ ಮತ ಚಲಾಯಿಸಿದ ಮನಮೋಹನ್ ಸಿಂಗ್

ಹೊಸದಿಲ್ಲಿ, ಜು. ೧೮: ಸೋಮವಾರ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಗಾಲಿ ಕುರ್ಚಿಯಲ್ಲಿ ಆಗಮಿಸಿದರು.
ನೂತನ ರಾಷ್ಟ್ರಪತಿ ಅವರ ಆಯ್ಕೆಗೆ ಮತದಾನ ಸಂಸತ್ತು ಹಾಗೂ ದೇಶಾದ್ಯಂತದ ವಿಧಾನ ಸಭೆಯಲ್ಲಿ ರಹಸ್ಯ ಬ್ಯಾಲೆಟ್ ಮೂಲಕ ನಡೆಯಿತು.
೮೯ರ ಹರೆಯದ ಮನಮೋಹನ್ ಸಿಂಗ್ ಅವರು ಗಾಲಿ ಕುರ್ಚಿಯಲ್ಲಿ ಮೊದಲ ಬಾರಿಗೆ ಸಂಸತ್ತಿಗೆ ಆಗಮಿಸಿದರು. ನಾಲ್ವರು ಅಧಿಕಾರಿಗಳ ನೆರವಿನಿಂದ ಮತ ಚಲಾಯಿಸುತ್ತಿರುವ ದೃಶ್ಯಗಳು ವ್ಯಾಪಕವಾಗಿ ವೈರಲ್ ಆಗಿವೆ. ಅಲ್ಲದೆ ಕಾಂಗ್ರೆಸ್ ನಾಯಕರು ಹಾಗೂ ಅವರ ಬೆಂಬಲಿಗರು ಈ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಮತದಾನದ ಮೊದಲ ನಾಲ್ಕು ಗಂಟೆಯಲ್ಲಿ ಮತದಾನ ಮಾಡಿದವರಲ್ಲಿ ಮನಮೋಹನ್ ಸಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಂಡು ಬಂದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತಮಗೆ ಸ್ಪೂರ್ತಿ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ‘‘ಅನಾರೋಗ್ಯದ ಹೊರತಾಗಿಯು ಪ್ರಜಾಸತ್ತಾತ್ಮಕ ಜವಾಬ್ದಾರಿಯನ್ನು ಪೂರ್ಣಗೊಳಿಸಲು ಸಂಸತ್ತಿಗೆ ಆಗಮಿಸಿದ ಸರ್ದಾರ್ ಮನಮೋಹನ್ ಸಿಂಗ್ ಅವರು ನಮಗೆಲ್ಲರಿಗೂ ಸ್ಪೂರ್ತಿ. ಅವರಿಗೆ ದೇವರು ಆಯುರಾರೋಗ್ಯ ದಯ ಪಾಲಿಸಲಿ’’ ಎಂದು ಯುವ ಕಾಂಗ್ರೆಸ್ ಮುಖ್ಯಸ್ಥ ಬಿ.ವಿ. ಶ್ರೀನಿವಾಸ್ ಟ್ವೀಟ್ ಮಾಡಿದ್ದಾರೆ.







