ಶ್ರೀಲಂಕಾ: ಪೆಟ್ರೋಲ್, ಡೀಸೆಲ್ ದರ ಲೀಟರ್ ಗೆ 20 ರೂ. ಕಡಿತ

ಕೊಲಂಬೊ, ಜು.18: ಅರ್ಥವ್ಯವಸ್ಥೆ ಹದಗೆಟ್ಟಿರುವ ಮಧ್ಯೆಯೂ ಶ್ರೀಲಂಕಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಲೀಟರ್ ಗೆ 20 ರೂ. ಕಡಿತ ಮಾಡಲಾಗಿದ್ದು ಇದು ಜನಾಕ್ರೋಶವನ್ನು ತುಸು ತಣಿಸುವ ಸರಕಾರದ ಪ್ರಯತ್ನವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಸರಕಾರಿ ಸ್ವಾಮ್ಯದ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ (ಸಿಪಿಸಿ) ಮತ್ತು ಲಂಕಾ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಎಲ್ಐಒಸಿ) ಸಂಸ್ಥೆಗಳು ತೈಲ ದರ ಕಡಿತದ ಘೋಷಣೆ ಮಾಡಿವೆ. ದರ ಕಡಿತದ ಬಳಿಕ ಆಕ್ಟೇನ್ 92 ಪೆಟ್ರೋಲ್ನ ಬೆಲೆ ಲೀಟರ್ಗೆ 450 ರೂ. ಆಕ್ಟೇನ್ 95 ಪೆಟ್ರೋಲ್ ದರ ಲೀಟರ್ ಗೆ 540 ರೂ.ಗೆ ಇಳಿಕೆಯಾಗಿದೆ. ಡೀಸೆಲ್ ದರ ಕಡಿತದ ಬಳಿಕ ಲೀಟರ್ಗೆ 440 ರೂ.ಗೆ ಮತ್ತು ಸೂಪರ್ ಡೀಸೆಲ್ ದರ 510 ರೂ.ಗೆ ತಲುಪಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ವಿದೇಶಿ ವಿನಿಮಯದ ಮೀಸಲು ನಿಧಿ ಕನಿಷ್ಟ ಮಟ್ಟಕ್ಕೆ ತಲುಪಿರುವುದರಿಂದ ದೈನಂದಿನ ಬಳಕೆಯ ವಸ್ತುಗಳು, ಔಷಧ, ಆಹಾರ ವಸ್ತುಗಳು ಹಾಗೂ ತೈಲದ ಆಮದಿಗೆ ತೊಡಕಾಗಿದೆ. ಇದರಿಂದ ದೇಶದಲ್ಲಿ ತೈಲದ ಕೊರತೆಯಿದ್ದು ಪೆಟ್ರೋಲ್, ಡೀಸೆಲ್ ಪಡೆಯಲು ಪೆಟ್ರೋಲ್ ಪಂಪ್ಗಳ ಎದುರು ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿಯಿದೆ.
ಈ ಮಧ್ಯೆ, ಎಲ್ಲರಿಗೂ ಸಮಾನವಾಗಿ ತೈಲ ಲಭಿಸುವುದನ್ನು ಖಾತರಿ ಪಡಿಸಲು ಹೊಸ ವ್ಯವಸ್ಥೆಯನ್ನು ಆರಂಭಿಸಿರುವುದಾಗಿ ವಿದ್ಯುತ್ ಮತ್ತು ಇಂಧನ ಸಚಿವಾಲಯ ಕಳೆದ ವಾರ ಘೋಷಿಸಿದೆ.







