ಖ್ಯಾತ ಗಾಯಕ, ಸಂಗೀತ ಸಂಯೋಜಕ ಭೂಪಿಂದರ್ ಸಿಂಗ್ ನಿಧನ

ಹೊಸದಿಲ್ಲಿ: 1970 ಹಾಗೂ 80ರ ದಶಕದ ಹಿಂದಿ ಚಿತ್ರರಂಗದ ಅತ್ಯುತ್ತಮ ಗಝಲ್ ಮತ್ತು ನಝ್ಮ್‍ಗಳಿಗೆ ಜೀವ ತುಂಬಿದ್ದ ಖ್ಯಾತ ಗಾಯಕ ಮತ್ತು ಸಂಗೀತ ಸಂಯೋಜಕ ಭೂಪಿಂದರ್ ಸಿಂಗ್ ಸೋಮವಾರ ಸಂಜೆ ಮುಂಬೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.
"ದೊಡ್ಡಕರುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರಿಗೆ ಕೆಲ ವಾರಗಳ ಹಿಂದೆ ಕೋವಿಡ್ ಸೋಂಕು ಕೂಡಾ ಪತ್ತೆಯಾಗಿತ್ತು" ಎಂದು ಅವರ ಬಾಂಗ್ಲಾದೇಶ ಸಂಜಾತೆ ಪತ್ನಿ ಹಾಗೂ ಗಝಲ್ ಸಹ ಗಾಯಕಿ ಮಿತಾಲಿ ಮುಖರ್ಜಿ (ಸಿಂಗ್) ಹೇಳಿದ್ದಾರೆ.
ಅಮೃತಸರದಲ್ಲಿ ಜನಿಸಿದ ಸಿಂಗ್ ಅವರ ಆಳ ಹಾಗೂ ವಿಶಿಷ್ಟ ಗಾಯನ, ಗಝಲ್‍ಗಳ ಭಾವಸ್ಪರ್ಶಿ ಗೀತೆಗಳಿಗೆ ಹೇಳಿ ಮಾಡಿಸಿದಂತಿತ್ತು. ಇವರ ಕಂಠದಿಂದ ಮೂಡಿಬಂದ "ದಿಲ್ ದೂಂದ್‍ತಾ ಹೈ ಫಿರ್ ವೊಹಿ' (ಮೌಸಮ್), 'ಏಕ್ ಅಕೇಲಾ ಇಸ್ ಶೆಹರ್ ಮೈನ್' (ಘರೋವಾಂದ) ಅತ್ಯಂತ ಜನಪ್ರಿಯವಾಗಿದ್ದವು. ಇವರ ಜನಪ್ರಿಯ ಹಾಡುಗಳನ್ನು ಮದನ್ ಮೋಹನ್, ಜೈದೇವ್, ಖಯ್ಯಮ್ ಹಾಗೂ ಆರ್.ಡಿ.ಬರ್ಮನ್ ಸಂಯೋಜಿಸಿದ್ದರು.
"ಇವರು ತಾಜಾ ಹಾಗೂ ಮಾದಕ ಧ್ವನಿಯ ಗಾಯಕ. ಆರ್.ಡಿ.ಬರ್ಮನ್ ಮತ್ತು ಗುಲ್ಜರ್ ಅವರ ಫೇವರಿಟ್ ಗಾಯಕರಾಗಿದ್ದರು" ಎಂದು ಗಝಲ್ ಗಾಯಕ ಅನೂಪ್ ಜಲೋಟಾ ಶೋಕಸಂದೇಶದಲ್ಲಿ ಹೇಳಿದ್ದಾರೆ. ಚಲನಚಿತ್ರ ಗೀತೆಗಳ ಹೊರತಾಗಿ ಇತರ ಗಝಲ್, ಭಜನ್ ಮತ್ತು ಗೀತೆಗಳನ್ನೂ ಸಿಂಗ್ ಸಂಯೋಜಿಸಿದ್ದರು. ಮಧ್ಯಕಾಲೀನ ಕವಿ ಕಬೀರ್ ಅವರ 'ಮೋಕೊ ಕಹನ್ ಧೂಂದೇ ರೇ ಬಂಡೆ' ಮತ್ತು ಆಹತ್ ಸಿ ಕೋಯಿ ಆಯೆ' ಇವರ ಅತ್ಯುತ್ತಮ ಸಂಯೋಜನೆಗಳು.
ಭೂಪಿಂದರ್ ಅವರು ಪ್ರಖ್ಯಾತ ಗಿಟಾರ್ ವಾದಕರೂ ಆಗಿದ್ದರು ಹಾಗೂ ಆರ್.ಡಿ.ಬರ್ಮನ್ ಅವರ ಮೇಳದಲ್ಲಿದ್ದರು. 'ದಮ್ ಮಾರೊ ದಮ್' (ಹರೇ ರಾಮ ಹರೇ ಕೃಷ್ಣ), ಛರಾ ಲಿಯಾ ಹೈ (ಯಾದೊಂ ಕಿ ಬರಾತ್) ಗೀತೆಗಳಿಗೆ ಇವರು ಗಿಟಾರ್ ನುಡಿಸಿ, ಜನಪ್ರಿಯರಾಗಿದ್ದರು.