ಸಿಎಂ ಆಯ್ಕೆ ವಿಚಾರ; ನಾನೇನು ರಾಜಕೀಯ ಸನ್ಯಾಸಿಯಲ್ಲ, ಖಾವಿ ಬಟ್ಟೆಯನ್ನೂ ತೊಟ್ಟಿಲ್ಲ ಎಂದ ಡಿ.ಕೆ ಶಿವಕುಮಾರ್
''ಎಸ್.ಎಂ.ಕೃಷ್ಣರ ನಂತರ ಒಕ್ಕಲಿಗ ಸಮುದಾಯದಲ್ಲಿ ನಾನು...''

ಮೈಸೂರು, ಜು.19: ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ.ಶಿವಕುಮಾರ್ ಅಂತ ಯಾವುದೇ ಬಣಗಳಿಲ್ಲ ನಮ್ಮಲ್ಲಿರುವುದೊಂದೇ ಕಾಂಗ್ರೆಸ್ ಬಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮಲ್ಲಿ ಸಿದ್ದರಾಮಯ್ಯ ಬಣ, ಡಿ.ಕೆ.ಶಿವಕುಮಾರ್ ಬಣ ಎಂಬುದೆಲ್ಲಾ ಇಲ್ಲ, ಇದೆಲ್ಲಾ ಮಾಧ್ಯಮಗಳ ಸೃಷ್ಟಿ, ನಮ್ಮಲ್ಲಿರುವುದು ಕಾಂಗ್ರೆಸ್ ಬಣ ಒಂದೇ ಎಂದು ಹೇಳಿದರು.
ರಾಜ್ಯದ ಮುಖ್ಯಮಂತ್ರಿಯಾರಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ಗೆ ಬಿಟ್ಟಿದ್ದು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೆ ನಮ್ಮ ಗುರಿ. ನಾನೇನು ರಾಜಕೀಯ ಸನ್ಯಾಸಿಯಲ್ಲ, ಖಾವಿ ಬಟ್ಟೆಯನ್ನು ತೊಟ್ಟಿಲ್ಲ ಎಂದು ಹೇಳಿದ್ದಾರೆ.
ಎಸ್ .ಎಂ ಕೃಷ್ಣರ ನಂತರ ಒಕ್ಕಲಿಗ ಸಮುದಾಯದಲ್ಲಿ ನಾನು ಒಂದು ಹಂತ ತಲುಪಿದ್ದೇನೆ. ಹಾಗಾಗಿ ನನ್ನ ಕೈ ಬಲಪಡಿಸಿ ಎಂದು ಒಕ್ಕಲಿಗ ಸಮುದಾಯವನ್ನು ಮನವಿ ಮಾಡಿದ್ದೇನೆ. ಒಕ್ಕಲಿಗ ಸಮುದಾಯದ ಜೊತೆಗೆ ರಾಜ್ಯದ ಎಲ್ಲಾ ಸಮುದಾಯಗಳಿಂದಲೂ ಬೆಂಬಲ ಸಿಗುವ ವಿಶ್ವಾಸವಿದೆ ಎಂದು ಹೇಳಿದರು.
ಮುಂಬರುವ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ಒಬ್ಬ ವ್ಯಕ್ತಿಯನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಪಕ್ಷ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇರಿಸಿದೆ. ಹಾಗಾಗಿ ಎಲ್ಲರನ್ನೊಳಗೊಂಡು ಮುಂದಿನ ಚುನಾವಣೆ ಎದುರಿಸುತ್ತೇವೆ ಎಂದು ಹೇಳಿದರು.
ದಲಿತರು ಯಾಕೆ ಸಿಎಂ ಆಗಬಾರದು: ರಾಜ್ಯದಲ್ಲಿ ದೇವರಾಜ ಅರಸು, ಗುಂಡೂರಾವ್, ಬಂಗಾರಪ್ಪ, ವೀರಪ್ಪ ಮೋಯಿಲಿ, ಧರಂ ಸಿಂಗ್ ಸೇರಿದಂತೆ ಎಲ್ಲಾ ಸಮುದಾಯದವರು ಮುಖ್ಯಮಂತ್ರಿಗಳಾಗಿದ್ದಾರೆ. ಹಾಗಿದ್ದ ಮೇಲೆ ದಲಿತರು ಯಾಕೆ ಮುಖ್ಯಮಂತ್ರಿಯಾಗಬಾರದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್ ಅಲ್ಪಸಂಖ್ಯಾತರನ್ನು ಕಡೆಗಣಿಸಿಲ್ಲ: ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ಎಂದೂ ಕಡೆಗಣಿಸಿಲ್ಲ, ರಾಜ್ಯದಲ್ಲಿ ಹಿಜಾಬ್, ಹಲಾಲ್, ಮುಸ್ಲಿಮರ ವ್ಯಾಪಾರ ನಿಷೇಧ ಸಂದರ್ಭದಲ್ಲಿ ಉಂಟಾದ ಅಶಾಂತಿ ಮತ್ತಷ್ಟು ಹದಗೆಡಬಾರದು ಎಂದು ಹೈಕಮಾಂಡ್ ಸೂಚನೆ ಮೇರೆಗೆ ನಮ್ಮ ಪಕ್ಷದ ಯಾರೂ ಉದ್ರೇಕದ ಹೇಳಿಕೆ ನೀಡಬಾರದು ಎಂದು ಸೂಚಿಸಿದ್ದೆ ಎಂದು ಸ್ಪಷ್ಟಪಡಿಸಿದರು.
ಪಕ್ಷದ ಆಂತರಿಕ ಸಮೀಕ್ಷೆ ಪ್ರಕಾರ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 136 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದು, ಬಿಜೆಪಿ ಆಟಾಟೋಪಗಳಿಂದ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿಯವರು ಮುಚ್ವಿಹಾಕಿರುವ ಎಲ್ಲಾ ಪ್ರಕರಣಗಳನ್ನು ಮರು ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಲಿನಿಂದ ರಾಜ್ಯದ ಶಾಂತಿಯ ತೋಟವನ್ನು ಹಾಳುಗೆಡವಿದ್ದಾರೆ. ಕುವೆಂಪು, ಕನಕದಾಸ, ಸಂತಶಿಶುನಾಳ ಷರೀಫರ ನಾಡನ್ನು ಶಾಂತಿ ಭಂಗಗೊಳಿಸಿ ಜನ ಸಾಮಾನ್ಯರ ಬದುಕಿಗೆ ತೊಂದರೆಯುಂಟು ಮಾಡಿದ್ದಾರೆ ಎಂದು ಕಿಡಿಕಾರಿದರು.
ಬಿಜೆಪಿಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದು ಪ್ರತಿಯೊಂದು ಹುದ್ದೆಗೂ ಹೋಟೆಲ್ ನಲ್ಲಿ ಬೋಡ್೯ ಹಾಕುವ ರೀತಿಯಲ್ಲಿ ಹಣ ಫಿಕ್ಸ್ ಮಾಡಿದ್ದಾರೆ. ಕಾಮಗಾರಿಗಳ ಗುತ್ತಿಗೆಯಲ್ಲೂ 40% ಕಮಿಷನ್ ಪಡೆದು ಲೂಟಿ ಹೊಡೆಯುತ್ತಿದ್ದಾರೆ. ಮುಂದೆ ಮಂತ್ರಿ ಹುದ್ದೆಗೆ ಇಷ್ಟು ಹಣ ಮುಖ್ಯಮಂತ್ರಿ ಹುದ್ದೆಗೆ ಇಂತಿಷ್ಟು ಹಣ ಎಂದು ಫಿಕ್ಸ್ ಮಾಡಲಿದ್ದಾರೆ ಎಂದು ಟೀಕಿಸಿದರು.
ಬಿಜೆಪಿಯಲ್ಲಿನ ಭ್ರಷ್ಟಾಚಾರದ ಕುರಿತು ಅವರ ಪಕ್ಷದ ವಿಶ್ವನಾಥ್, ಬಸನಗೌಡ ಪಾಟೀಲ್ ಯತ್ನಾಳ್ ಬಹಿರಂಗ ಹೇಳಿಕೆ ನೀಡಿದರೆ ಯಾವುದೇ ನೋಟಿಸ್ ನೀಡುವುದಿಲ್ಲ, ಆದರೆ ನಮ್ಮ ಪಕ್ಷದ ಪ್ರಿಯಾಂಕ ಖರ್ಗೆ ಆರೋಪ ಮಾಡಿದರೆ ನೋಟಿಸ್ ನೀಡಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಪಕ್ಷ ಕಾಂಗ್ರೆಸ್ ದುರ್ಬಲವಾಗಿಲ್ಲ. ಸರ್ಕಾರದ ವೈಫಲ್ಯಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದೇವೆ. ಹೋರಾಟದ ಫಲವಾಗಿಯೇ ಸಚಿವರು ರಾಜೀನಾಮೆ ನೀಡುವಂತಾಯಿತು. ಆದರೂ ಇದು ದಪ್ಪ ಚರ್ಮದ ಭ್ರಷ್ಟ ಸರ್ಕಾರವಾಗಿದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಡಿ.ಕೆ.ಶಿವಕುಮಾರ್ ಉತ್ತರಿಸಿದರು.
ಮನುಷ್ಯನ ಬದುಕಿನಲ್ಲಿ ಹಲವು ಮೈಲುಗಲ್ಲುಗಳಿರುತ್ತವೆ. ಒಬ್ಬೊಬ್ಬರು ಒಂದು ವಿಧದಲ್ಲಿ ಆಚರಣೆ ಮಾಡಿಕೊಳ್ಳು ತ್ತಾರೆ. ಅದೇ ರೀತಿ ಸಿದ್ದರಾಮಯ್ಯನವರ ಇದುವರೆಗಿನ ಜೀವನವನ್ನು ಮೆಲುಕು ಹಾಕುವ ಸಲುವಾಗಿ ಸಿದ್ಧರಾಮಯ್ಯ ಅಮೃತಮಹೋತ್ಸವ ಆಯೋಜನೆ ಮಾಡಲಾಗುತ್ತಿದೆ. ಆ ಕಾರ್ಯಕ್ರಮದಲ್ಲಿ ನಾನು ಹಾಗು ರಾಹುಲ್ ಗಾಂಧಿಯವರು ಭಾಗಿಯಾಗುತ್ತೇವೆ. ನನ್ನ ಹುಟ್ಟು ಹಬ್ಬವನ್ನು ಸರಳವಾಗಿ ಆಚರಣೆ ಮಾಡಿಕೊಂಡೆ. ನಾನು ಪತ್ನಿ ಸಮೇತ ಕೇದಾರನಾಥಕ್ಕೆ ಹೋಗಿದ್ದೆ. ಹುಟ್ಟು ಹಬ್ಬ ಆಚರಣೆ ವಿಚಾರದಲ್ಲಿ ಒಬ್ಬೊಬ್ಬರ ಆಯ್ಕೆ ಒಂದೊಂದು ರೀತಿಯಾಗಿರುತ್ತದೆ ಎಂದು ಹೇಳಿದರು.
ಮೈಸೂರು: ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದರೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ರಾಜ್ಯರಾಜಕಾರಣಕ್ಕೆ ಬರಬೇಕಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಕೆಲಸ. ಆ ನಿಟ್ಟಿನಲ್ಲಿ ನಾವು ಪಕ್ಷ ಕಟ್ಟುತ್ತಿದ್ದೇವೆ. ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವ ಉದ್ದೇಶದಿಂದ ರಾಜ್ಯ ರಾಜಕಾರಣಕ್ಕೆ ಬರಬೇಕು ಎಂದು ಹೈಕಮಾಂಡ್ ಸೂಚಿಸಿದರೆ ಧ್ರುವನಾರಾಯಣನೂ ತಲೆ ಬಾಗಬೇಕು, ನಾನೂ ತಲೆ ಬಾಗಬೇಕು ಎಂದು ಹೇಳಿದರು.







