ಮಂಗಳೂರು ವಿವಿ ಕಾಲೇಜಿನಿಂದ ‘ಬಂಜರ 2022’ ಆಹಾರೋತ್ಸವ
ವಿದ್ಯಾರ್ಥಿಗಳ ಕ್ರಿಯಾಶೀಲತೆಯ ಅನಾವರಣ

ಮಂಗಳೂರು : ವೈವಿಧ್ಯತೆಗೆ ಹೆಸರುವಾಸಿಯಾಗಿರುವ ಮಂಗಳೂರಿನ ವಿಭಿನ್ನ ತಿಂಡಿ ತಿನಿಸುಗಳು, ರುಚಿಕರ ಖಾದ್ಯಗಳು, ಪ್ರಾಚೀನ ಕಾಲದ ಪಾತ್ರೆಗಳು, ಕಲಾತ್ಮಕ ವಸ್ತುಗಳು, ಕರಾವಳಿಯ ತಿಂಡಿಗಳ ಪರಿಚಯ ಇವು ಇಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾದ ಆಹಾರೋತ್ಸವದಲ್ಲಿ ಕಂಡು ಬಂದ ದೃಶ್ಯಗಳು.
‘ಬಂಜರ 2022’ ಎಂಬ ಹೆಸರಿನಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರವಾಸೋದ್ಯಮ ವಿಭಾಗ ಹಾಗೂ ಬಿಬಿಎ (ಟೂರಿಸಂ ಆ್ಯಂಡ್ ಟ್ರಾವೆಲ್) ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಲಾದ ಆಹಾರೋತ್ಸವ ಕಾಲೇಜು ವಿದ್ಯಾರ್ಥಿಗಳ ಕ್ರಿಯಾಶೀಲತೆಯನ್ನು ಅನಾವರಣಗೊಳಿಸಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂಟ್ವಾಳದ ಬಂಟರ ಸಂಘದ ಅಧ್ಯಕ್ಷ ಚಂದ್ರಶೇಖರ್ ಡಿ.ಶೆಟ್ಟಿ, ತುಳುನಾಡಿನಲ್ಲಿರುವಷ್ಟು ಬಗೆಬಗೆಯ ತಿನಿಸುಗಳು ಇನ್ನೆಲ್ಲೂ ಇಲ್ಲ. ಕೇವಲ ಅಕ್ಕಿಯಿಂದ ಇನ್ನೂರಕ್ಕೂ ಹೆಚ್ಚು ಬಗೆಯ ದೋಸೆ, ಇಪ್ಪತ್ತೈದಕ್ಕೂ ಹೆಚ್ಚು ಬಗೆಯ ಕಡುಬು ಮಾಡಬಲ್ಲವರು ನಾವು. ಎಲ್ಲವೂ ಆರೋಗ್ಯಕ್ಕೆ ಹಾನಿಕರವಲ್ಲದ ಸಮತೋಲಿತ ಆಹಾರಗಳು ಎಂದು ಅಭಿಪ್ರಾಯಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ರಮೇಶ್ ಕೆ. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ಕರಾವಳಿ ಪ್ರವಾಸೋದ್ಯಮದಲ್ಲಿ ಇಲ್ಲಿನ ಆಹಾರ ವೈವಿಧ್ಯವೂ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಸುಮಾರು 50 ಕ್ಕೂ ಹೆಚ್ಚಿನ ಬಗೆಯ ತಿಂಡಿಗಳು, ವಿವಿಧ ಬಗೆಯ ಜ್ಯೂಸ್ ಗಳು ಆಕರ್ಷಿಸಿದವು. ಪ್ರವಾಸೋದ್ಯಮ ವಿಭಾಗ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಡಾ. ಮೀನಾಕ್ಷಿ ಎಂ .ಎಂ, ಬಿಬಿಎ ಮುಖ್ಯಸ್ಥ ಡಾ. ಎ ಸಿದ್ಧಿಕ್ ಸೇರಿದಂತೆ ಹಿರಿಯ ಪ್ರಾಧ್ಯಾಪಕರು ಭಾಗವಹಿಸಿದ್ದರು.
ಉಪನ್ಯಾಸಕ ಶ್ರೀರಾಜ್ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ಪರಿಣಿತಾ ಶೆಟ್ಟಿ ವಂದಿಸಿದರು. ವಿದ್ಯಾರ್ಥಿನಿ ಲಿಖಿತಾ ಜಿ.ಎನ್. ಕಾರ್ಯಕ್ರಮ ನಿರೂಪಿಸಿದರು.






.jpeg)

.jpeg)
.jpeg)

