ಕಸದ ತಳ್ಳುಗಾಡಿಯಲ್ಲಿ ಆದಿತ್ಯನಾಥ್, ಮೋದಿ ಚಿತ್ರ: ಅಮಾನತುಗೊಂಡಿದ್ದ ಕಾರ್ಮಿಕ ಮತ್ತೆ ಕೆಲಸಕ್ಕೆ ಸೇರ್ಪಡೆ

ಮಥುರಾ: ಕಸದ ತಳ್ಳುಗಾಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ಚಿತ್ರಗಳನ್ನು ಸಾಗಿಸುತ್ತಿದ್ದಾನೆಂಬ ಕಾರಣಕ್ಕೆ ತನ್ನ ಕೆಲಸದಿಂದ ವಜಾಗೊಂಡಿದ್ದ ಮಥುರಾದ ನೈರ್ಮಲ್ಯ ಕಾರ್ಮಿಕನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಸ್ಥಳೀಯಾಡಳಿತದ ಅಧಿಕಾರಿಗಳು ಹೇಳಿದ್ದಾರೆ.
ಕಾರ್ಮಿಕ, 40 ವರ್ಷದ ಬಾಬ್ಬಿ ತನ್ನ ಕೃತ್ಯಕ್ಕೆ ಕ್ಷಮೆಯಾಚಿಸಿದ್ದಾನೆ ಎಂದು ನಗರ ಸ್ವಾಸ್ಥ್ಯ ಅಧಿಕಾರಿಯಾಗಿರುವ ಡಾ ಕರೀಂ ಅಖ್ತರ್ ಖುರೇಶಿ ಹೇಳಿದ್ದಾರೆ.
ಮತ್ತೆ ಇಂತಹ ತಪ್ಪು ಮಾಡುವುದಿಲ್ಲ, ಪ್ರಾಮಾಣಿಕತೆಯಿಂದ ಕೆಲಸ ಮಾಡುವುದಾಗಿಯೂ ಭರವಸೆ ನೀಡಿದ್ದಾನೆಂದು ಅಧಿಕಾರಿಗಳು ತಿಳಿಸಿದ್ದಾರೆ. ತಾನು ತನ್ನ ಮನೆಯ ಏಕೈಕ ದುಡಿಯುವ ವ್ಯಕ್ತಿ ಎಂದು ಆತ ಸ್ಥಳೀಯಾಡಳಿತಕ್ಕೆ ಸಲ್ಲಿಸಿದ್ದ ಅಪೀಲಿನಲ್ಲಿ ತಿಳಿಸಿದ್ದ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಆತನಿಗೇ ಶೋಕಾಸ್ ನೋಟಿಸ್ ಜಾರಿಯಾಗಿತ್ತು ಹಾಗೂ ಅದಕ್ಕೆ ಆತ ಉತ್ತರಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಶನಿವಾರ ಬೆಳಿಗ್ಗೆ ಕೆಲಸ ಮಾಡುತ್ತಿದ್ದಾಗ ಮೂವರು ವ್ಯಕ್ತಿಗಳು ನನ್ನ ಬಳಿ ಬಂದು ಸೀಎಂ ಮತ್ತು ಪ್ರಧಾನಿಯ ಚಿತ್ರಗಳನ್ನೇಕೆ ಕಸದ ಗಾಡಿಯಲ್ಲಿರಿಸಿದ್ದಿ ಎಂದು ಕೇಳಿದರು. ಅದಕ್ಕೆ ನಾನು ನನ್ನ ಕೆಲಸವನ್ನಷ್ಟೇ ಮಾಡುತ್ತಿದ್ದೇನೆ" ಎಂದು ಹೇಳಿದ್ದೆ ಎಂದು ಆತ ಹೇಳಿಕೊಂಡಿದ್ದಾನೆ. ತಾನು ಯಾವುದೇ ದುರುದ್ದೇಶವನ್ನೂ ಹೊಂದಿಲ್ಲ ಎಂದು ಹೇಳಿದ ಬಾಬ್ಬಿ ಕಳೆದ ಎರಡು ದಶಕಗಳಿಂದ ನೈರ್ಮಲ್ಯ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ.





