ಈದ್ ಪ್ರಯುಕ್ತ ಸ್ನೇಹಿತೆ ಮನೆಗೆ ಭೇಟಿ: ಯುವತಿಯರನ್ನು ಹಿಂಬಾಲಿಸಿ ಪೊಲೀಸರಿಗೊಪ್ಪಿಸಿದ ಸಂಘ ಪರಿವಾರ ಕಾರ್ಯಕರ್ತರು

ಮಂಗಳೂರು: ಯುವತಿಯೊಬ್ಬಳು ತನ್ನ ಸ್ನೇಹಿತೆಯ ಮನೆಗೆ ತೆರಳಿದ್ದನ್ನೇ ವಿವಾದವನ್ನಾಗಿಸಿದ ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಪೊಲೀಸರನ್ನು ಕರೆಸಿ ಕೋಲಾಹಲ ಸೃಷ್ಟಿಸಿದ ಘಟನೆ ಕಡಬ ಠಾಣೆ ವ್ಯಾಪ್ತಿಯ ಆತೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕಳೆದ ಕೆಲವು ವರ್ಷಗಳಿಂದ ಸ್ನೇಹಿತರಾಗಿದ್ದ ಉಪ್ಪಿನಂಗಡಿ ರಾಮನಗರ ನಿವಾಸಿ ಕಾವ್ಯ (21) ರನ್ನು ಕೊಯಿಲ ಗ್ರಾಮದ ಕುದ್ಲೂರಿನ ಸಂಶೀನಾ (22) ಬಕ್ರೀದ್ ಹಬ್ಬಕ್ಕೆ ತನ್ನ ಮನೆಗೆ ಆಹ್ವಾನಿಸಿದ್ದರು. ಅದರಂತೆ ಜುಲೈ 13ರಂದು ಕಾವ್ಯರನ್ನು ಆಕೆಯ ಅಣ್ಣ ಉಪ್ಪಿನಂಗಡಿಯವರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿಂದ ಸಂಶೀನಾರ ಜೊತೆ ಕಾವ್ಯ ಬಸ್ಸಿನಲ್ಲಿ ಗೋಳಿತ್ತಡಿಯವರೆಗೆ ಪ್ರಯಾಣ ಬೆಳೆಸಿದ್ದರು.
ಗೋಳಿತ್ತಡಿ ಜಂಕ್ಷನ್ ನಲ್ಲಿ ಇಳಿದು ಕೋಳಿ ಖರೀದಿಸುತ್ತಿದ್ದ ವೇಳೆ ಸ್ಥಳೀಯ ಆಟೋ ಚಾಲಕನೋರ್ವ ಇವರನ್ನು ಗಮನಿಸಿದ್ದು, 'ಸಂಶೀನಾಳ ತಮ್ಮ ಝಿಯಾದ್ ಹಿಂದೂ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾನೆ' ಎಂಬ ಸುಳ್ಳು ಸುದ್ದಿಯನ್ನು ಹಬ್ಬಿದ್ದಾನೆ.
ಈ ನಡುವೆ ಕಾವ್ಯ ಹಾಗೂ ಸಂಶೀನಾ ಆಟೋರಿಕ್ಷಾದಲ್ಲಿ ಸಂಶೀನಾರ ಮನೆಗೆ ತೆರಳಿದ್ದು, ಈ ವೇಳೆ ಕೆಲವರು ಆಟೋ ರಿಕ್ಷಾ ಹಾಗೂ ಬೈಕ್ ಗಳಲ್ಲಿ ಹಿಂಬಾಲಿಸಿದ್ದಾರೆ. ಸಂಶೀನಾ ಮತ್ತು ಕಾವ್ಯ ಅಂಗಡಿಯೊಂದಕ್ಕೆ ತೆರಳಿದ ವೇಳೆ ವ್ಯಕ್ತಿಯೋರ್ವ ವಿಚಿತ್ರವಾಗಿ ನೋಡುವುದನ್ನು ಇವರಿಬ್ಬರು ಗಮನಿಸಿದ್ದಾರೆ ಎನ್ನಲಾಗಿದೆ. ಅವರು ಮನೆಗೆ ತಲುಪಿ ಕೆಲವೇ ಸಮಯದಲ್ಲಿ ಸಂಘಪರಿವಾರದ ಕಾರ್ಯಕರ್ತರು ಮನೆಯ ಕೂಗಳತೆ ದೂರದಲ್ಲಿ ಜಮಾಯಿಸಿದ್ದು, ಆ ಬಳಿಕ ಕಡಬ ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ ಎಂದು ತಿಳಿದು ಬಂದಿದೆ.
ಮನೆಗೆ ಆಗಮಿಸಿದ ಪೊಲೀಸರು ಸಂಶೀನಾರ ಸಹೋದರ ಝಿಯಾದ್ ಬಗ್ಗೆ ವಿಚಾರಿಸಿದ್ದು, ಆತ ಊರಲ್ಲೇ ಇರಲಿಲ್ಲ. ಆತ ಬೆಂಗಳೂರಿನಲ್ಲಿ ಇರುವುದಾಗಿ ತಿಳಿಸಿದಾಗ, ಝಿಯಾದ್ ಯಾವುದೋ ಹಿಂದೂ ಹುಡುಗಿಯನ್ನು ಮನೆಗೆ ಕರೆದುಕೊಂಡು ಬಂದಿರುವುದಾಗಿ ಮಾಹಿತಿ ಬಂದಿದ್ದು, ತಕ್ಷಣವೇ ಅವನನ್ನು ಬರುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ಆತ ಬೆಂಗಳೂರಿನಲ್ಲಿ ಇರುವುದನ್ನು ಖಚಿತಪಡಿಸಿದ ಪೊಲೀಸರು ಕಾವ್ಯಳನ್ನು ಕರೆದೊಯ್ಯಲು ಮುಂದಾದಾಗ ಆಕೆ ತನ್ನ ಅಣ್ಣನ ಜೊತೆ ಹೋಗುವುದಾಗಿ ಹಠ ಹಿಡಿದಿದ್ದಾರೆ. ಈ ವೇಳೆ ಹಿಂದುತ್ವ ಸಂಘಟನೆಯವರ ಒತ್ತಡಕ್ಕೆ ಮಣಿದ ಪೊಲೀಸರು ಆಕೆಯನ್ನು ಉಪ್ಪಿನಂಗಡಿಗೆ ಕರೆದೊಯ್ದಿದ್ದು, ಆಕೆ ಪೊಲೀಸರ ಜೊತೆಗೆ ತೆರಳುವ ವೇಳೆ ಆಕೆಯ ಫೋಟೊ ಹಾಗೂ ವೀಡಿಯೊವನ್ನು ಸಂಘ ಪರಿವಾರದ ಕಾರ್ಯಕರ್ತರು ತೆಗೆದಿದ್ದಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚುವುದಾಗಿ ಬೆದರಿಸಿದ್ದಾರೆ ಎಂದು ಸಂಶೀನಾ ಅವರ ಕುಟುಂಬ ಮೂಲಗಳು ತಿಳಿಸಿವೆ.
ಪೊಲೀಸರು ಆಕೆಯನ್ನು ಆಕೆಯ ಅಣ್ಣನ ಜೊತೆಗೆ ಕಳುಹಿಸಿಕೊಟ್ಟಿದ್ದಾರೆ. ಘಟನೆ ನಡೆದ ಬಳಿಕ ಆಕೆಯ ಫೋನ್ ನಂಬರ್ ಹಲವೆಡೆ ಹರಿದಾಡಿದೆ. ತದನಂತರ ಕಾವ್ಯಾಳಿಗೆ ಮಂಗಳೂರು ಸೇರಿದಂತೆ ವಿವಿಧ ಪ್ರದೇಶಗಳಿಂದ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದೆ.
ಈ ಬಗ್ಗೆ ಸಂಶೀನಾಳ ಮನೆಯವರು ಕಡಬ ಠಾಣೆಗೆ ದೂರು ನೀಡಿದ್ದು, ಠಾಣೆಯಲ್ಲಿ ದೂರು ಸ್ವೀಕರಿಸದೆ ಸಮಾಧಾನ ಮಾಡಿ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆರೋಪಗಳು ಸುಳ್ಳು : ಸಬ್ ಇನ್ಸ್‌ಪೆಕ್ಟರ್
"ಮುಸ್ಲಿಂ ಮನೆಯಲ್ಲಿ ಹಿಂದೂ ಹುಡುಗಿ ಇರುವ ಬಗ್ಗೆ ಮಾಹಿತಿ ಬಂದ ತಕ್ಷಣ ನಮ್ಮ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಗೊಂದಲಕ್ಕೆ ತೆರೆ ಎಳೆಯಲಾಗಿದೆ. ಕಾವ್ಯಾಳನ್ನು ಆಕೆಯ ಅಣ್ಣನ ಜೊತೆಗೆ ಕಳುಹಿಸಿಕೊಡಲಾಗಿದ್ದು, ಆಕೆಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಹಿಂದುತ್ವ ಸಂಘಟನೆಯ ಕಾರ್ಯಕರ್ತರು ಸಂಶೀನಾ ಅವರ ಮನೆಗೆ ಹೋಗದೆ ಸಾರ್ವಜನಿಕ ಸ್ಥಳದಲ್ಲಿ ನಿಂತಿದ್ದರು. ಈ ಬಗ್ಗೆ ಸಂಶೀನಾ ಮನೆಯವರು ಹಿಂದುತ್ವ ಸಂಘಟನೆಯ ಕಾರ್ಯಕರ್ತರ ವಿರುದ್ಧ ದೂರಿದ್ದು, ಹಿಂದುತ್ವದ ಕಾರ್ಯಕರ್ತರು ತಮ್ಮ ಮನೆಗೆ ಬಾರದೆ ಸಾರ್ವಜನಿಕ ಸ್ಥಳದಲ್ಲಿ ಇದ್ದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಮತ್ತು ಮುಂದೆ ಆರೋಪ-ಪ್ರತ್ಯಾರೋಪ ಆಗಬಾರದು ಎಂಬ ಕಾರಣಕ್ಕಾಗಿ ಸಂಶೀನಾ ಅವರ ಕಟುಂಬ ದೂರು ನೀಡದೆ ಹಿಂತಿರುಗಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ" ಎಂದು ಕಡಬ ಠಾಣೆ ಸಬ್ ಇನ್ಸ್‌ಪೆಕ್ಟರ್ ಆಂಜನೇಯ ರೆಡ್ಡಿ ʼವಾರ್ತಾಭಾರತಿʼಗೆ ತಿಳಿಸಿದ್ದಾರೆ.
ನಮಗೆ ಕುಟುಂಬದಿಂದ ಯಾವುದೇ ದೂರು ಬಂದಿಲ್ಲ : ಎಸ್ಪಿ
ಮಾಧ್ಯಮದಿಂದಲೇ ಆ ವಿಷಯ ನನ್ನ ಗಮನಕ್ಕೆ ಬಂದಿದೆಯೇ ಹೊರತು ಬೇರೇನೂ ಗೊತ್ತಿಲ್ಲ. ಸಂಬಂಧಪಟ್ಟವರಿಂದ ಈ ಬಗ್ಗೆ ದೂರು ಬಂದಿಲ್ಲ. ಅವರು ಆರೋಪಿಸುವಂತೆ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಿಲ್ಲ ಎಂದಾದರೆ ಇತರ ಹಿರಿಯ ಅಧಿಕಾರಿಗಳಿಗೆ ದೂರು ನೀಡಬಹುದು, ಕರೆ ಮಾಡಬಹುದು. ನನಗೆ ಆ ಬಗ್ಗೆ ಯಾವುದೇ ದೂರು, ಮಾಹಿತಿ ಈವರೆಗೂ ಬಂದಿಲ್ಲ.
- ಸೊನಾವಣೆ ಋಷಿಕೇಷ್, ಪೊಲೀಸ್ ವರಿಷ್ಠಾಧಿಕಾರಿ, ದ.ಕ.ಜಿಲ್ಲೆ