ಮೋದಿ ಸರಕಾರದ ಆಳ್ವಿಕೆ ಮುಂದುವರಿದರೆ ದೇಶಕ್ಕೆ ಶ್ರೀಲಂಕಾ ಪರಿಸ್ಥಿತಿ ಕಟ್ಟಿಟ್ಟ ಬುತ್ತಿ: ಕಿಮ್ಮನೆ ರತ್ನಾಕರ್
''ಕಾಂಗ್ರೆಸ್ನಲ್ಲಿ ನಾಯಕತ್ವದ ಬಗ್ಗೆ ಗೊಂದಲ ಇಲ್ಲ''

ಕಿಮ್ಮನೆ ರತ್ನಾಕರ್- ಮಾಜಿ ಸಚಿವ
ಚಿಕ್ಕಮಗಳೂರು, ಜು.19: ಕೇಂದ್ರ ಸರಕಾರ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡಜನರನ್ನು ತುಳಿಯುವ ಕೆಲಸ ಮಾಡುತ್ತಿದೆ. ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ದೂಡಿದೆ. ಇದು ಹೀಗೆ ಮುಂದುವರಿದರೆ ಶ್ರೀಲಂಕಾದಂತೆ ನಮ್ಮ ದೇಶದಲ್ಲೂ ಆರ್ಥಿಕ ಬಿಕ್ಕಟ್ಟು ತಲೆದೂರಿ ಜನತೆ ಸರಕಾರದ ವಿರುದ್ಧ ಧಂಗೆ ಏಳುವುದು ನಿಶ್ಚಿತ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರಾಜ್ಯ ಹಾಗೂ ಕೇಂದ್ರ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳವಾರ ನಗರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ಪಕ್ಷ ಇನ್ನೂ ಉಳಿದಿರಲು ಕಾರಣ ಆ ಪಕ್ಷ ಜಾತಿ, ಧರ್ಮ ಮುಂದಿಟ್ಟುಕೊಂಡು ಕೋಮುವಾದವನ್ನು ಹರಡುತ್ತಾ ಅಧಿಕಾರ ನಡೆಸುತ್ತಿರುವುದರಿಂದ. ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಕೋಮುವಾದ ದೇಶದಲ್ಲಿ ಹೆಚ್ಚುತ್ತಿದೆ. ಶ್ರೀಮಂತರ ಪರ ಕಾನೂನು ಜಾರಿ ಮಾಡುತ್ತಾ, ಕಾರ್ಮಿಕರು, ರೈತರ ವಿರುದ್ಧವಾದ ಕಾನೂನುಗಳನ್ನು ಜಾರಿ ಮಾಡುತ್ತಿದೆ. ಬಿಜೆಪಿ ಸರಕಾರದ ಕೆಟ್ಟ ಆಳ್ವಿಕೆ, ಆರ್ಥಿಕ ನೀತಿಗಳಿಂದಾಗಿ ದೇಶ ದಿವಾಳಿಯ ಅಂಚಿನಲ್ಲಿದ್ದು, ಇದೇ ಆಡಳಿತ ಮುಂದುವರಿದಲ್ಲಿ ಶ್ರೀಲಂಕಾದಂತೆ ಭಾರತವೂ ದಿವಾಳಿಯಾಗಲಿದೆ ಎಂದು ಆರೋಪಿಸಿದರು.
ರಾಜ್ಯ ಹಾಗೂ ಕೇಂದ್ರ ಸರಕಾರಗಳು ಬಡಜನರ ಬದುಕನ್ನೂ ನಾಶ ಮಾಡಲು ಮುಂದಾಗಿದೆ. ಬಡವರು ಉಪಯೋಗಿಸುವ ಮೊಸರು, ಮಂಡಕ್ಕಿಯಂತಹ ಅಗತ್ಯ ವಸ್ತುಗಳ ಮೇಲೂ ಜಿಎಸ್ಟಿ ಹೇರಿ ಬೆಲೆ ಏರಿಕೆಯನ್ನು ಉದ್ದೇಶಪೂರ್ವಕವಾಗಿ ಹೇರಲಾಗುತ್ತಿದೆ. ಮೋದಿ ಸರಕಾರ ಉಸಿರಾಡುವ ಗಾಳಿಯೊಂದನ್ನು ಬಿಟ್ಟು ಮತ್ತೆಲ್ಲದಕ್ಕೂ ತೆರಿಗೆ ಹೇರಿ ಬಡ ಜನರ ಬದುಕನ್ನು ಬೀದಿಗೆ ತಳ್ಳುತ್ತಿದೆ. ಮೋದಿ ಆಳ್ವಿಕೆಯಿಂದಾಗಿ ಡಾಲರ್ ಎದುರು ರುಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದೆ. ನಿರುದ್ಯೋಗ, ಹಸಿವು, ಬಡತನದ ಪ್ರಮಾಣವೂ ಹೆಚ್ಚಾಗಿದ್ದು, ಇದರ ವಿರುದ್ಧ ಜನರು ಮಾತನಾಡದಂತೆ ಮಾಡಲು ಅವರು ಜಾತಿ, ಧರ್ಮದ ವಿಚಾರಗಳನ್ನು ಮುನ್ನಲೆಗೆ ತಂದು ಕೋಮುಗಲಭೆಗಳನ್ನು ಸೃಷ್ಟಿಸುತ್ತಿದ್ದಾರೆ. ಧರ್ಮ ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ. ಜನರ ಶಾಂತಿ, ನೆಮ್ಮದಿಯನ್ನು ಹಾಳು ಗೆಡವುತ್ತಿದ್ದಾರೆ. ಬಿಜೆಪಿ ಸರಕಾರಗಳ ಇಂತಹ ಜನವಿರೋಧಿ ಆಡಳಿತ ಬಗ್ಗೆ ಎಲ್ಲೆಡೆ ಜನಾಕ್ರೋಶ ವ್ಯಕ್ತವಾಗುತ್ತಿದೆ ಎಂದು ಕಿಮ್ಮನೆ ಟೀಕಿಸಿದರು.
ಚಿಕ್ಕಮಗಳೂರು ಕ್ಷೇತ್ರದ ಶಾಸಕ ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗಳಿಗೆ ಸ್ಪಂದಿಸುವುದನ್ನು ಬಿಟ್ಟು ದೇಶ ಸುತ್ತುತ್ತ ಮೋಜು ಮಾಡುತ್ತಿದ್ದಾರೆ. ಸುಖಾಸುಮ್ಮನೆ ಕಾಂಗ್ರೆಸ್, ನೆಹರು ವಿರುದ್ಧ ಟೀಕೆ ಮಾಡುತ್ತಾ ಪ್ರಚಾರ ಗಿಟ್ಟಿಸಿಕೊಳ್ಳುವುದರಲ್ಲೇ ಕಾಲಾಹರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಂಬೇಡ್ಕರ್ ಅವರ ವಿರೋಧಿ ಎಂದು ಹೇಳಿಕೆ ನೀಡುವ ಸಿ.ಟಿ.ರವಿ ಅವರು 1956ರಲ್ಲಿ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸುವ ಸಂದರ್ಭದಲ್ಲಿ, "ನಾನು ಹಿಂದುವಾಗಿ ಹುಟ್ಟಿದ್ದೇನೆ, ಹಿಂದುವಾಗಿ ಸಾಯಲಾರೆ" ಎಂದು ಹೇಳಿಕೆ ನೀಡಿದ್ದರು. ಅಂಬೇಡ್ಕರ್ ಅವರು ಹೀಗೆ ಏಕೆ ಹೇಳಿದರು ಎಂಬುದನ್ನು ಸಿ.ಟಿ.ರವಿ ಹೇಳಬೇಕು. ಅಂಬೇಡ್ಕರ್ ಅವರು ಅಂದು ಕಾಂಗ್ರೆಸ್ನಲ್ಲೇ ಇದ್ದರು, ಕಾಂಗ್ರೆಸ್ ಅಂಬೇಡ್ಕರ್ ವಿರೋಧಿಯಾಗಿದ್ದರೇ " ನಾನುನಕಾಂಗ್ರೆಸ್ನಲ್ಲಿದ್ದೇನೆ, ಕಾಂಗ್ರೆಸ್ಸಿಗನಾಗಿ ಸಾಯಲಾರೆ" ಎಂದು ಹೇಳಿಕೆ ನೀಡುತ್ತಿದ್ದರು. ಬಿಜೆಪಿಯವರಿಗೆ ಕಾಂಗ್ರೆಸ್ ಹಾಗೂ ನೆಹರು ಅವರನ್ನು ಟಾರ್ಗೆಟ್ ಮಾಡುವುದನ್ನೇ ಗುರಿಯಾಗಿಸಿಕೊಂಡಿದ್ದಾರೆ. ಆದರೆ ನೆಹರು ಅವರು ಅಲಹಾಬಾದ್ನಲ್ಲಿರುವ ತಮ್ಮ 20 ಸಾವಿರ ಕೋ. ರೂ. ಮೌಲ್ಯದ ಸ್ವರಾಜ್ಯ ಭವನವನ್ನು ದೇಶಕ್ಕೆ ದಾನ ಮಾಡಿದ್ದಾರೆ. ಇದನ್ನು ಬಿಜೆಪಿಯವರು ಎಲ್ಲೂ ಹೇಳುವುದಿಲ್ಲ. ಅಧಿಕಾರಕ್ಕಾಗಿ ಬಿಜೆಪಿಯವರು ಸದಾ ಸುಳ್ಳನ್ನೇ ಹೇಳುತ್ತಾ ಬಂದಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರದ್ದು ಕೋಮುವಾದವನ್ನೇ ಸಿದ್ಧಾಂತವನ್ನಾಗಿಸಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಜಾತ್ಯತೀತ ತತ್ವದ ಮೇಲೆ ನಂಬಿಕೆ ಇಟ್ಟಿರುವ, ಎಲ್ಲ ಜಾತಿ, ಧರ್ಮದವರನ್ನೂ ಒಟ್ಟಿಗೆ ಕೊಂಡೊಯ್ಯುವ ಸಿದ್ಧಾಂತವನ್ನು ಹೊಂದಿದೆ. ಬಿಜೆಪಿಯ ಕೋಮುವಾದ ಇಡೀ ದೇಶಕ್ಕೆ ಮಾರಕ, ಅಂಬೇಡ್ಕರ್ ಅವರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಬಿಜೆಪಿಯವರು ನಾವು ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳುತ್ತಿದ್ದಾರೆ. ಈ ಹೇಳಿಕೆ ಬಾಯಿ ತಪ್ಪಿನಿಂದ ಹೇಳಿದ್ದಲ್ಲ, ಬಿಜೆಪಿ ಬಂದಿರುವುದೇ ಸಂವಿಧಾನ ಬದಲಾಯಿಸಿ ಮನುವಾದವನ್ನು ದೇಶದಲ್ಲಿ ಜಾರಿ ಮಾಡಲು ಎಂದು ವಾಗ್ದಾಳಿ ನಡೆಸಿದ ಕಿಮ್ಮನೆ ರತ್ನಾಕರ್, ಯಾವುದೇ ದೇಶ ಅಭಿವೃದ್ಧಿಯಾಗಬೇಕಾದಲ್ಲಿ ತನ್ನ ನೆರೆಯ ದೇಶಗಳೊಂದಿಗೆ ಉತ್ತಮ ವಿದೇಶಾಂಗ ಸಂಬಂಧ ಹೊಂದಿರುವುದರೊಂದಿಗೆ ಆಂತರಿಕವಾಗಿ ಜನರಲ್ಲಿ ಶಾಂತಿ, ನೆಮ್ಮದಿ ಇರಬೇಕು. ಬಿಜೆಪಿ ಆಳ್ವಿಕೆಯಿಂದಾಗಿ ಜನರ ನೆಮ್ಮದಿ, ಶಾಂತಿಗೆ ಧಕ್ಕೆಯಾಗಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್, ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ರೇಖಾಹುಲಿಯಪ್ಪಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಮೌಳಿ, ಕಲ್ಲೇಶ್, ಹಾಗೂ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ನಲ್ಲಿ ನಾಯಕತ್ವದ ಬಗ್ಗೆ ಗೊಂದಲ ಇಲ್ಲ. ನಾಯಕತ್ವದ ಗೊಂದಲ ಇರುವುದು ಬಿಜೆಪಿಯಲ್ಲಿ ಮಾತ್ರ. ಬಿಜೆಪಿ ಪಕ್ಷದ ಶಾಸಕ ಯತ್ನಾಳ್, ಸಂಸದರಾದ ವರುಣ್ಗಾಂಧಿ, ಸುಬ್ರಹ್ಮಣ್ಯಸ್ವಾಮಿ ಅವರೇ ಈ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ದುರದೃಷ್ಟವೆಂದರೇ ಮಾಧ್ಯಮಗಳು ಇವುಗಳ ಬಗ್ಗೆ ಮೌನವಹಿಸುತ್ತಿವೆ.
- ಕಿಮ್ಮನೆ ರತ್ನಾಕರ್, ಮಾಜಿ ಸಚಿವ







