ಪರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಗಂಟೆಗಟ್ಟಲೆ ಟ್ರಾಫಿಕ್ ಜಾಮ್

ಮಣಿಪಾಲ: ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169 ಎರ ಪರ್ಕಳದಲ್ಲಿ ನಡೆಯುತ್ತಿರುವ ಕಾಮಗಾರಿ ಯಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇದರಿಂದ ಪ್ರತಿದಿನ ಕೆಳಪರ್ಕಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಹೆಬ್ರಿ, ಪೆರ್ಡೂರು, ಆತ್ರಾಡಿ, ಹಿರಿಯಡ್ಕ, ಪರ್ಕಳ ಹಾಗೂ ಕಾರ್ಕಳ ಭಾಗ ದಿಂದ ಅತೀ ಹೆಚ್ಚು ಮಂದಿ ದ್ವಿಚಕ್ರ ವಾಹನದಲ್ಲಿ ಮಣಿಪಾಲ ಉದ್ಯೋಗಕ್ಕಾಗಿ ಬರುತ್ತಿದ್ದಾರೆ. ಆದರೆ ಬೆಳಗ್ಗಿನ ಅವಧಿಯಲ್ಲಿ ಕೆಳಪರ್ಕಳದಲ್ಲಿನ ಅವ್ಯವಸ್ಥೆಯಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದರಿಂದ ಸವಾರರು ತೀರ ತೊಂದರೆ ಅನುಭವಿಸುವಂತಾಗಿದೆ.
ಅದೇ ರೀತಿ ಈ ಮಾರ್ಗದಲ್ಲಿ ಅತೀ ಹೆಚ್ಚು ಅಂಬ್ಯುಲೆನ್ಸ್‌ಗಳು ಮಣಿಪಾಲ ಆಸ್ಪತ್ರೆಗೆ ಹೋಗುತ್ತಿರುತ್ತದೆ. ಆದರೆ ಇಲ್ಲಿನ ಗಂಟೆಗಟ್ಟಲೆ ಉಂಟಾಗುತ್ತಿರುವ ಟ್ರಾಫಿಕ್ ಜಾಮ್‌ನಿಂದ ಅಂಬ್ಯುಲೆನ್ಸ್‌ಗಳು ಸಿಲುಕಿಕೊಂಡು ಮುಂದಕ್ಕೆ ಹೋಗದ ಪರಿಸ್ಥಿತಿಯಲ್ಲಿ ಇರುತ್ತದೆ. ಇದರಿಂದ ರೋಗಿಗಳು ಕಷ್ಟ ಪಡುವಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈಗಾಗಲೇ ಜಿಲ್ಲಾಧಿಕಾರಿ ೧೦ ದಿನದೊಳಗಾಗಿ ರಸ್ತೆಗಳೆಲ್ಲವೂ ಸುಸ್ಥಿತಿಯಲ್ಲಿರ ಬೇಕೆಂಬ ಸೂಚನೆಯನ್ನು ಹೆದ್ದಾರಿ ಅಧಿಕಾರಿಗಳಿಗೆ ಗಡುವು ನೀಡಿದ್ದರು. ಆದರೆ ಆ ಗಡುವು ಮುಗಿದರೂ ಯಾವುದೇ ದುರಸ್ತಿ ಕಾರ್ಯ ನಡೆದಿಲ್ಲ. ಈಗ ರಸ್ತೆಯಲ್ಲಿ ಹೊಸ ಹೊಸ ಹೊಂಡಗಳು ರೂಪುಗೊಳ್ಳುತ್ತಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.







