ಉ.ಪ್ರ.: ಲುಲು ಮಾಲ್‌ನಲ್ಲಿ ನಮಾಝ್ ಮಾಡಿದ ಆರೋಪ; ನಾಲ್ವರ ಬಂಧನ

ಲಕ್ನೋ, ಜು. 19: ನಗರದಲ್ಲಿ ನೂತನವಾಗಿ ಆರಂಭವಾದ ಲುಲು ಮಾಲ್‌ನಲ್ಲಿ ನಮಾಝ್ ಮಾಡಿದ ಆರೋಪದಲ್ಲಿ ಲಕ್ನೋ ಪೊಲೀಸರು ಮಂಗಳವಾರ ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಮುಹಮ್ಮದ್ ರೆಹಾನ್, ಆತಿಫ್ ಖಾನ್, ಮುಹಮ್ಮದ್ ಲೊಕ್ಮಾನ್ ಹಾಗೂ ಮುಹಮ್ಮದ್ ನೊಮಾನ್ ಎಂದು ಗುರುತಿಸಲಾಗಿದೆ. ಮಾಲ್‌ನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರು ಆರೋಪಿಗಳನ್ನು ಗುರುತಿಸಿದ್ದಾರೆ ಎಂದು ಲಕ್ನೋ ಪೊಲೀಸ್ ಕಮಿಷನರೇಟ್ ಹೇಳಿಕೆಯಲ್ಲಿ ತಿಳಿಸಿದೆ.
ಎಲ್ಲ ನಾಲ್ವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಲ್‌ನಲ್ಲಿ ಕೆಲವು ವ್ಯಕ್ತಿಗಳು ನಮಾಝ್ ಮಾಡುವ ವೀಡಿಯೊ ಜುಲೈ 22ರಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಶೇರ್ ಆಗಿತ್ತು. ಜುಲೈ 14ರಂದು ಪೊಲೀಸರು ಪ್ರಥಮ ಮಾಹಿತಿ ವರದಿ ದಾಖಲಿಸಿದ್ದರು.
ನಮಾಝ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಶೇರ್ ಆದ ಬಳಿಕ ಅಖಿಲ ಭಾರತೀಯ ಹಿಂದೂ ಸಭಾದ ಸದಸ್ಯರು ಜುಲೈ 14ರಂದು ಮಾಲ್‌ನ ಗೇಟ್‌ನ ಹೊರಗೆ ಪ್ರತಿಭಟನೆ ನಡೆಸಿದರು. ಮಾಲ್‌ನ ಸಮೀಪ ತಮಗೆ ಹನುಮಾನ ಚಾಲೀಸ್ ಪಠಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದರು.





