2021ರಲ್ಲಿ ಭಾರತೀಯ ಪೌರತ್ವವನ್ನು ತ್ಯಜಿಸಿದ 1.6 ಲಕ್ಷ ಮಂದಿ: ಕೇಂದ್ರ ಸರಕಾರದಿಂದ ಮಾಹಿತಿ

ಹೊಸದಿಲ್ಲಿ,ಜು.19: 1,63,370 ಭಾರತೀಯರು 2021ರಲ್ಲಿ ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯವು ಮಂಗಳವಾರ ಲೋಕಸಭೆಯಲ್ಲಿ ತಿಳಿಸಿದೆ. 2020ರಲ್ಲಿ 85,256 ಮತ್ತು 2019ರಲ್ಲಿ 1,44,017 ಭಾರತೀಯರು ತಮ್ಮ ಪೌರತ್ವ ತ್ಯಜಿಸಿದ್ದರು.
ಬಿಎಸ್ಪಿ ಸಂಸದ ಹಾಜಿ ಫಝ್ಲುರ್ ರೆಹಮಾನ್ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸಹಾಯಕ ಗೃಹಸಚಿವ ನಿತ್ಯಾನಂದ ರಾಯ್ ಅವರು ಈ ಅಂಕಿಅಂಶಗಳನ್ನು ಒದಗಿಸಿದರು.
2019 ಮತ್ತು 2021ರ ನಡುವೆ ಭಾರತೀಯ ಪೌರತ್ವವನ್ನು ತ್ಯಜಿಸಿರುವ ಜನರ ಸಂಖ್ಯೆ,ತಮ್ಮ ನಿರ್ಧಾರಕ್ಕೆ ಅವರು ನೀಡಿರುವ ಕಾರಣಗಳು ಮತ್ತು ಅವರು ತೆರಳಿರುವ ದೇಶಗಳ ಕುರಿತು ವಿವರಗಳನ್ನು ರೆಹಮಾನ್ ಕೋರಿದ್ದರು. ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಜನರು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ರಾಯ್ ತಿಳಿಸಿದರು.
ಭಾರತೀಯ ಪೌರತ್ವವನ್ನು ತ್ಯಜಿಸಿರುವವರ ಮೊದಲ ಪ್ರಾಶಸ್ತ್ಯ ಅಮೆರಿಕ ಆಗಿದೆ. 2021ರಲ್ಲಿ 78,284 ಜನರು ಅಮೆರಿಕದ ಪೌರತ್ವವನ್ನು ಪಡೆದುಕೊಂಡಿದ್ದರೆ,2020ಮತ್ತು 2019ರಲ್ಲಿ ಇಂತಹವರ ಸಂಖ್ಯೆ ಅನುಕ್ರಮವಾಗಿ 30,828 ಮತ್ತು 61,683 ಆಗಿತ್ತು.
ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದ್ದು,2021ರಲ್ಲಿ 23,533 2020ರಲ್ಲಿ 13,518 ಮತ್ತು 2019ರಲ್ಲಿ 21,340 ಭಾರತೀಯರು ಆ ದೇಶದ ಪೌರತ್ವವನ್ನು ಪಡೆದುಕೊಂಡಿದ್ದರೆ ಮೂರನೇ ಸ್ಥಾನದಲ್ಲಿರುವ ಕೆನಡಾದಲ್ಲಿ ಈ ಮೂರು ವರ್ಷಗಳಲ್ಲಿ ಅನುಕ್ರಮವಾಗಿ 21,597, 17,093 ಮತ್ತು 25,381 ಭಾರತೀಯರು ಅಲ್ಲಿಯ ಪೌರತ್ವವನ್ನು ಪಡೆದಿದ್ದಾರೆ.
2017 ಮತ್ತು 2021 ಸೆಪ್ಟಂಬರ್ ನಡುವೆ 6,08,162 ಜನರು ತಮ್ಮ ಭಾರತೀಯ ಪೌರತ್ವವನ್ನು ತೊರೆದಿದ್ದಾರೆ ಎಂದು ಕೇಂದ್ರ ಗೃಹಸಚಿವರು ಕಳೆದ ವರ್ಷದ ನವಂಬರ್ನಲ್ಲಿ ಲೋಕಸಭೆಯಲ್ಲಿ ತಿಳಿಸಿದ್ದರು.