ಮಂಗಳೂರು: ಚೆಸ್ ಒಲಿಂಪಿಯಾಡ್ ರಿಲೇ ಜ್ಯೋತಿಗೆ ಸ್ವಾಗತ

ಮಂಗಳೂರು : ೪೪ನೇ ಚೆಸ್ ಒಲಿಂಪಿಯಾಡ್ ರಿಲೇ ಜ್ಯೋತಿ ಜಿಲ್ಲೆಗೆ ಆಗಮಿಸಿರುವುದು ಐತಿಹಾಸಿಕ ಕ್ಷಣವಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
ನಗರದ ಕುದ್ಮಲ್ ರಂಗರಾವ್ ಪುರಭವನದಲ್ಲಿ ಮಂಗಳವಾರ ೪೪ನೇ ಚೆಸ್ ಒಲಿಂಪಿಯಾಡ್‌ನ ರಿಲೇ ಜ್ಯೋತಿಯನ್ನು ಸ್ವಾಗತಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ಚೆಸ್ ಒಲಿಂಪಿಯಾಡ್ ರಿಲೇ ಜ್ಯೋತಿಯ ಆಗಮನವಾಗುತ್ತಿದೆ. ದೇಶದ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಹಾಗೂ ೭೫ ಜಿಲ್ಲಾ ಕೇಂದ್ರಗಳಲ್ಲಿ ಒಲಂಪಿಯಾಡ್ ರಿಲೇ ಜ್ಯೋತಿ ಸಂಚರಿಸಲಿದೆ. ರಾಜ್ಯದ ಬೆಂಗಳೂರು ಮತ್ತು ಮಂಗಳೂರಿಗೆ ಈ ಸುವರ್ಣಾವಕಾಶ ದೊರೆತಿರುವುದು ಸೌಭಾಗ್ಯವಾಗಿದೆ. ಇಂದು ಬೆಳಗಿದ ಕ್ರೀಡಾ ಜ್ಯೋತಿ ದೇಶಾದ್ಯಂತ ಇನ್ನಷ್ಟು ಪ್ರತಿಭೆಗಳ ಬದುಕಿಗೆ ಬೆಳಕು ನೀಡಲಿ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಆಶಿಸಿದರು.
ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಮಾತನಾಡಿ, ವಿಶ್ವಕ್ಕೆ ಭಾರತ ನೀಡಿದ ಅಮೂಲ್ಯ ಕೊಡುಗೆಗಳಲ್ಲಿ ಚದುರಂಗದಾಟವು ಒಂದು. ಇತ್ತೀಚಿನ ದಿನಗಳಲ್ಲಿ ಅದು ದೇಶದಲ್ಲಿ ದೊಡ್ಡಮಟ್ಟದಲ್ಲಿ ಬೆಳವಣಿಗೆ ಕಾಣುತ್ತಿದೆ ಎಂದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಯೆನೆಪೊಯ ವಿವಿಯ ಉಪ ಕುಲಸಚಿವ ಡಾ.ಎಂ.ವಿಜಯ ಕುಮಾರ್, ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಎಂ.ಎನ್. ನಟರಾಜ್, ಭಾರತೀಯ ಚೆಸ್ ಫೆಡರೇಶನ್‌ನ ಜಿಲ್ಲಾಧ್ಯಕ್ಷ ರಾಜಗೋಪಾಲ್ ಶೆಣೈ, ನೆಹರು ಯುವ ಕೇಂದ್ರದ ದ.ಕ. ಜಿಲ್ಲಾ ಅಧಿಕಾರಿ ರಘುವೀರ್ ಸೂಟರ್ ಪೇಟೆ ಮತ್ತಿತರರು ಉಪಸ್ಥಿತರಿದ್ದರು.












