‘ಭಾಷಾ ಸಾಹಿತ್ಯ ಬೆಳವಣಿಗೆಗೆ ಅನುವಾದ ಅನಿವಾರ್ಯ’ : ಡಾ.ಸುಧಾರಾಣಿ

ಮಂಗಳೂರು: ಯಾವುದೇ ಭಾಷೆಯು ಅನುವಾದ ಸಾಹಿತ್ಯದಿಂದ ಹೊರತಾಗಿಲ್ಲ. ಅನುವಾದವು ಸಾಹಿತ್ಯದ ಬೆಳವಣಿಗೆಗೆ ಅಗತ್ಯವಾಗಿದೆ ಎಂದು ಆಳ್ವಾಸ್ ವಿದ್ಯಾಸಂಸ್ಥೆಯ ಕನ್ನಡ ಉಪನ್ಯಾಸಕಿ ಡಾ.ಸುಧಾರಾಣಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ವಿವಿಯ ಸಂಧ್ಯಾ ಕಾಲೇಜಿನಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಮತ್ತು ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಹಯೋಗದಲ್ಲಿ ‘ಬೇತೆ ಬಾಸೆಲೆಗ್ ಅನುವಾದ ಆಯಿನ ತುಳು ಸಾಹಿತ್ಯೊಲು’ ವಿಷಯದ ಕುರಿತು ಇತ್ತೀಚೆಗೆ ನಡೆದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತುಳು ಸಾಹಿತ್ಯದ ಬೆಳವಣಿಗೆಯನ್ನು ವಸಾಹತು ಪೂರ್ವ, ವಸಾಹತು ಕಾಲಘಟ್ಟ ಮತ್ತು ಆಧುನಿಕ ಸಾಹಿತ್ಯ ಎಂದು ಗುರುತಿಸಬಹುದಾಗಿದೆ. ೨೦ನೇ ಶತಮಾನದ ಕೊನೆಯಲ್ಲಿ ತುಳು ಅನುವಾದ ಸಾಹಿತ್ಯವು ವೇಗವನ್ನು ಪಡೆಯಿತು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಶ್ರಿ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ ಹಾಗೂ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಡಾ. ಮಾಧವ ಎಂ.ಕೆ. ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪನ್ಯಾಸಕರಾದ ಡಾ.ವಿನೋದಾ, ಪ್ರಶಾಂತಿ ಶೆಟ್ಟಿ ಇರುವೈಲು, ವೇದಸ್ಮಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸಂಧ್ಯಾ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ರಾವ್ ಪ್ರಾರ್ಥಿಸಿದರು.