ನಿಟ್ಟೆ ಡಾ. ಶಂಕರ ಅಡ್ಯಂತಾಯ ಪಪೂ ಕಾಲೇಜಿನಲ್ಲಿ ರ‍್ಯಾಂಕ್ ವಿಜೇತರಿಗೆ ಸನ್ಮಾನ

ಮಂಗಳೂರು : ಗುರು ಶಿಷ್ಯ ಸಂಬಂಧವೇ ಅತಿ ಶ್ರೇಷ್ಠವಾದುದು. ವಿದ್ಯಾರ್ಥಿಯ ಸಾಧನೆಯಿಂದ ಗುರು ಮತ್ತು ಹೆತ್ತವರ ಸಂತಸ ಇಮ್ಮಡಿಯಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿ ತಾನು ತನ್ನ ನೈಜ ಸಾಮರ್ಥ್ಯಕ್ಕೆ ತಕ್ಕಂತೆ ಸಾಧನೆ ಮಾಡಿದ್ದೇನೆಯೇ ಎಂದು ಯೋಚಿಸಿದರೆ ಕಲಿಕೆಯಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂದು ನಿಟ್ಟೆ ಪರಿಗಣಿತ ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ.ಎಂ. ಎಸ್. ಮೂಡಿತ್ತಾಯ ಅಭಿಪ್ರಾಯಪಟ್ಟರು.
ನಂತೂರಿನ ನಿಟ್ಟೆ ಡಾ. ಶಂಕರ ಅಡ್ಯಂತಾಯ ಪದವಿ ಪೂರ್ವ ಕಾಲೇಜಿನ ನೂತನ ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಸಾಧಕ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮುಖ್ಯ ಅತಿಥಿಯಾಗಿ ನಿಟ್ಟೆ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡಮಿಯ ಆಡಳಿತ ಉಪವಿಭಾಗಾಧಿಕಾರಿ ಡಾ. ಜಯಪ್ರಕಾಶ್ ಶೆಟ್ಟಿ ಭಾಗವಹಿಸಿ ಮಾತನಾಡಿದರು.
ಸಂಸ್ಥೆಯ ಪ್ರಾಂಶುಪಾಲ ಡಾ. ನವೀನ್ ಶೆಟ್ಟಿ ಕೆ. ಅವರು ವಿದ್ಯಾರ್ಥಿ ಸಂಸತ್ತಿನ ನೂತನ ಅಧ್ಯಕ್ಷೆ ಪ್ರಣೇತಾ, ಕಾರ್ಯದರ್ಶಿ ನೀಲಿಮಾ ಭಕ್ತ ಹಾಗೂ ಇತರರಿಗೆ ಪ್ರಮಾಣ ವಚನ ಬೋಧಿಸಿದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಸಂಸ್ಥೆಯ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ೫೯೨ ಅಂಕಗಳಿಸಿ ರಾಜ್ಯಕ್ಕೆ ೭ನೆ ಸ್ಥಾನ ಪಡೆದ ಕ್ಷಮಾ ಹಾಗೂ ೫೯೦ ಅಂಕ ಪಡೆದು ರಾಜ್ಯಕ್ಕೆ ೯ನೆ ಸ್ಥಾನ ಪಡೆದ ವೈಷ್ಣವಿ, ವಾಣಿಜ್ಯ ವಿಭಾಗದಲ್ಲಿ ೫೯೦ ಅಂಕ ಪಡೆದು ರಾಜ್ಯಕ್ಕೆ ೭ನೆ ಸ್ಥಾನ ಪಡೆದ ಶ್ರಾವ್ಯ, ೫೮೯ ಅಂಕ ಗಳಿಸಿ ರಾಜ್ಯಕ್ಕೆ ೮ನೆ ಸ್ಥಾನ ಪಡೆದ ಶರಣ್ ಕುಮಾರ್ ಹಾಗೂ ಇನ್ನಿತರ ಶೈಕ್ಷಣಿಕ ಸಾಧಕ ವಿದ್ಯಾರ್ಥಿಗಳನ್ನು ಅವರ ಹೆತ್ತವರ ಜೊತೆಗೆ ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಎನ್.ವಿನಯ್ ಹೆಗ್ಡೆ, ಸಂಸ್ಥೆಯ ಉಪಪ್ರಾಂಶುಪಾಲೆ ಅನ್ನಪೂರ್ಣ ನಾಯಕ್ ಹಾಗೂ ಕಾರ್ಯಕ್ರಮದ ಉಸ್ತುವಾರಿ ಉಪನ್ಯಾಸಕಿ ವೀಣಾ, ಗೀತಾ, ಮೀರಾ ಕ್ರಾಸ್ತಾ, ಕಾರ್ತಿಕ್ ಉಪಸ್ಥಿತರಿದ್ದರು.
ಪರೀಕ್ಷಿತ್ ಪ್ರಾರ್ಥಿಸಿದರು. ಸುಮನ್ ಸ್ವಾಗತಿಸಿದರು, ಸಂಗೀತಾ ಅತಿಥಿಗಳನ್ನು ಪರಿಚಯಿಸಿದರು. ನೀಲಿಮಾ ಭಕ್ತ ವಂದಿಸಿದರು. ವಿಸ್ಮಿತಾ ಕಾರ್ಯಕ್ರಮ ನಿರೂಪಿಸಿದರು.