ಕೋವಿಡ್‌ನಿಂದ ವಯಸ್ಕರಲ್ಲಿ ಹೆಚ್ಚಿನ ಮಾನಸಿಕ ಆರೋಗ್ಯದ ಸಮಸ್ಯೆ: ಅಧ್ಯಯನ ವರದಿ

ಲಂಡನ್, ಜು.19: ಕೋವಿಡ್-19 ಸೋಂಕಿಗೆ ಒಳಗಾದ ಹಿರಿಯ ವಯಸ್ಕರು ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಆರ್ಥಿಕ ತೊಂದರೆಯಿಂದ ಬಳಲುವ ಸಾಧ್ಯತೆ ಇತರರಿಗೆ ಹೋಲಿಸಿದರೆ 2 ಪಟ್ಟು ಹೆಚ್ಚು ಎಂದು ಅಧ್ಯಯನ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ.
52ರಿಂದ 74 ವರ್ಷ ವಯೋಮಾನದ 5,146 ವಯಸ್ಕರಲ್ಲಿ ಕೋವಿಡ್-19 ಸೋಂಕಿನಿಂದ ಆಗಿರುವ ತಕ್ಷಣದ ಮತ್ತು ದೀರ್ಘಾವಧಿಯ ಮಾನಸಿಕ ಆರೋಗ್ಯದ ಸಮಸ್ಯೆ, ಅವರ ಆರ್ಥಿಕ ಸ್ಥಿತಿಗತಿ, ಸಾಮಾಜಿಕ ಸಂವಹನಗಳ ಮೇಲೆ ಆಗಿರುವ ಪರಿಣಾಮಗಳ ಅಂಕಿಅಂಶವನ್ನು ಆಧರಿಸಿ ಪಿಎನ್ಎಎಸ್ ಪತ್ರಿಕೆಯಲ್ಲಿ ಇತ್ತೀಚೆಗೆ ಸಂಶೋಧನಾ ವರದಿ ಪ್ರಕಟವಾಗಿದೆ.
ಸಾಂಕ್ರಾಮಿಕದ ಮೊದಲ ಅವಧಿಯ (2018-19) ಅಂಕಿಅಂಶ ಮತ್ತು 2020ರಲ್ಲಿ ಕೋವಿಡ್ ಅವಧಿಯ 2 ಮೌಲ್ಯಮಾಪನವನ್ನು ಪರಿಗಣಿಸಲಾಗಿದೆ. 2020ರ ಜೂನ್ ಮತ್ತು ಜುಲೈ ನಡುವಿನ ಅವಧಿಯಲ್ಲಿ ಸಂಭವನೀಯ ಕೋವಿಡ್-19 ಸೋಂಕಿತ 49%ದಷ್ಟು ಹಿರಿಯ ವಯಸ್ಕರು ಗಮನಾರ್ಹವಾದ ಖಿನ್ನತೆಯ ಲಕ್ಷಣಗಳನ್ನು ಹೊಂದಿದ್ದು, ಸೋಂಕಿಲ್ಲದವರಲ್ಲಿ ಈ ಪ್ರಮಾಣ 22% ಆಗಿರುತ್ತದೆ ಎಂದು ಲಂಡನ್ ಯುನಿವರ್ಸಿಟಿ ಕಾಲೇಜಿನ ಸಂಶೋಧಕರ ತಂಡ ನಡೆಸಿದ ಸಮೀಕ್ಷೆಯ ಫಲಿತಾಂಶದಲ್ಲಿ ವ್ಯಕ್ತವಾಗಿದೆ.
ಕೋವಿಡ್-19 ಸೋಂಕಿನ ಪರಿಣಾಮದಿಂದ ವ್ಯಕ್ತಿಗಳ ಮಾನಸಿಕ ಆರೋಗ್ಯ, ವೈಯಕ್ತಿಕ ಆರ್ಥಿಕ ಸ್ಥಿತಿಗತಿ ಹಾಗೂ ಸಾಮಾಜಿಕ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಪ್ರಸ್ತುತ ಕಡಿಮೆ ಪುರಾವೆಗಳಿವೆ.
ಆದರೆ ನಮ್ಮ ಅಧ್ಯಯನದ ಪ್ರಕಾರ, ಕೋವಿಡ್ ಸೋಂಕಿನಿಂದ ಹಿರಿಯ ವಯಸ್ಕರಲ್ಲಿ ಹೆಚ್ಚಿನ ಖಿನ್ನತೆ, ಆತಂಕ, ಕಳಪೆ ಜೀವನ ಗುಣಮಟ್ಟ, ಒಂಟಿತನದ ಭಾವನೆ ಮತ್ತು ಆರ್ಥಿಕ ತೊಂದರೆಗಳು ಕೋವಿಡ್ ಸೋಂಕಿಗೆ ಒಳಗಾಗದವರಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿರುತ್ತವೆ ಎಂದು ಅಧ್ಯಯನ ತಂಡದ ಮುಖ್ಯಸ್ಥ ಎಲ್ಲೀ ಲಾಬ್ ಹೇಳಿದ್ದಾರೆ. ಸೋಂಕು ತೀವ್ರವಾಗಿದ್ದ ಸಂದರ್ಭ ಹಾಗೂ ಬಳಿಕದ 6 ತಿಂಗಳಿನಲ್ಲಿ ಈ ಸಮಸ್ಯೆಗಳು ಕಂಡುಬಂದಿವೆ. ಕೋವಿಡ್ -19 ಸೋಂಕಿಗೆ ಒಳಗಾದವರಲ್ಲಿ 12%ದಷ್ಟು ಮಂದಿಯಲ್ಲಿ ಆತಂಕದ ಸಮಸ್ಯೆ ಹೆಚ್ಚಿದ್ದರೆ, ಸೋಂಕಿಗೆ ಒಳಗಾಗದವರಲ್ಲಿ ಈ ಸಮಸ್ಯೆ ಕೇವಲ 6%ದಷ್ಟು ಮಂದಿಯಲ್ಲಿ ಕಂಡುಬಂದಿದೆ.
ಈ ಪ್ರತಿಕೂಲ ಪರಿಣಾಮಗಳು ಕೋವಿಡ್ ಸೋಂಕಿನ ಆರಂಭದ 6 ತಿಂಗಳಿನವರೆಗೆ ಇರುತ್ತವೆ . 2020ರ ನವೆಂಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ನಡೆಸಿದ ಅನುಸರಣಾ ಪರಿಶೀಲನೆಯ ಪ್ರಕಾರ, ಸಂಭವನೀಯ ಸೋಂಕಿತ ಹಿರಿಯ ವಯಸ್ಕರಲ್ಲಿ ಖಿನ್ನತೆ ಮತ್ತು ಆತಂಕದ ಪ್ರಮಾಣ ಅನುಕ್ರಮವಾಗಿ 72% ಮತ್ತು 13% ಆಗಿದ್ದರೆ, ಸೋಂಕು ರಹಿತರಲ್ಲಿ ಈ ಪ್ರಮಾಣ ಕ್ರಮವಾಗಿ 33% ಮತ್ತು 7% ಆಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.