ಬಾಗೇಪಲ್ಲಿ | ಚಂಚುರಾಯನಪಲ್ಲಿ ಅಂಗನವಾಡಿ ಕೇಂದ್ರದಲ್ಲಿ ಅಸ್ಪೃಶ್ಯತೆ ಆಚರಣೆ; ಅಧಿಕಾರಿಗಳ ತಂಡ ಭೇಟಿ, ತನಿಖೆ ಪ್ರಾರಂಭ

ಬಾಗೇಪಲ್ಲಿ, ಜು.19: ತಾಲೂಕಿನ ಗೂಳೂರು ಹೋಬಳಿ ಚಂಚುರಾಯನಪಲ್ಲಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿ ವಿರುದ್ಧ ಅಸ್ಪಶ್ಯತೆ ಆಚರಣೆ ನಡೆಯುತ್ತಿರುವ ಘಟನೆಯ ಬಗ್ಗೆ ‘ವಾರ್ತಾಭಾರತಿ’ ಪತ್ರಿಕೆಯಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಶೇಷಾದ್ರಿ ಮತ್ತು ಶಿಶು ಅಭಿವೃದ್ಧ್ದಿ ಯೋಜನಾಧಿಕಾರಿ ರಾಮಚಂದ್ರಪ್ಪ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎನ್.ಶೇಷಾದ್ರಿ ಅವರು ಮಂಗಳವಾರ ಸಹಾಯಕಿ ಟಿ.ಗಾಯತ್ರಿ ಅವರ ಬಳಿ ಶನಿವಾರ ನಡೆದ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು. ನಿಮಗೆ ಯಾವುದೇ ರೀತಿಯ ಬೆದರಿಕೆಗಳು ಬಂದರೆ ಕೂಡಲೇ ನನಗೆ ಮಾಹಿತಿ ನೀಡಿ ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ ಎಂದು ಭರವಸೆ ನೀಡಿ ಗಾಯತ್ರಿ ಬಳಿ ದೂರು ಪಡೆದಿದ್ದಾರೆ.
ಶಿಕ್ಷಕಿ ರಾಮಾಂಜಿನಮ್ಮ ಅವರಿಗೆ ಅಸ್ಪಶ್ಯತೆ ಆಚರಣೆಯ ಬಗ್ಗೆ ಜಾಗೃತಿ ಮೂಡಿಸಬೇಕಾದ ನೀವು ಅಸ್ಪಶ್ಯತೆಗೆ ಪರೋಕ್ಷವಾಗಿ ಸಹಕಾರ ನೀಡುತ್ತಿದ್ದೀರಾ ಒಂದು ವೇಳೆ ಅವರು ದೂರು ದಾಖಲು ಮಾಡಿದರೆ ನೀವು ಮನೆಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಮಚಂದ್ರಪ್ಪ ಅವರು ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿ ಇಂತಹ ಘಟನೆಯು ನಡೆಯುತ್ತಿದ್ದರೂ ಯಾಕೆ ನಮಗೆ ಮಾಹಿತಿ ನೀಡಿಲ್ಲ. ಒಂದು ವೇಳೆ ಯಾರಾದರೂ ಬೆದರಿಸಿದ್ದಾರೆಯೇ, ಯಾಕೆ ಕರ್ತವ್ಯಕ್ಕೆ ಹಾಜರಾಗಿಲ್ಲ ಎಂದು ಗಾಯತ್ರಿಯವರನ್ನು ಪ್ರಶ್ನಿಸಿದಾಗ ನಾನು ಪ್ರತಿ ದಿನ ಕರ್ತವ್ಯಕ್ಕೆ ಬರುತ್ತಿದ್ದೇನೆ ಆದರೂ ಶಿಕ್ಷಕಿ ಅವರು ಉದ್ದೇಶಪೂರ್ವಕವಾಗಿ ಗೈರುಹಾಜರಾತಿ ಹಾಕುತ್ತಾರೆ ಎಂದು ಆರೋಪಿಸಿದ್ದಾರೆ.
ಇನ್ನು ಮೇಲೆ ಯಾವುದೇ ಕಾರಣಕ್ಕೂ ನಿಮ್ಮಲ್ಲಿ ಭಿನ್ನಾಭಿಪ್ರಾಯ ಬರಬಾರದಂತೆ ಕೆಲಸ ನಿರ್ವಹಿಸಿ ಎಂದು ಇಬ್ಬರಿಗೂ ಸಲಹೆ ನೀಡಿದ ಅವರು ಅಂಗನವಾಡಿ ಕೇಂದ್ರದಲ್ಲಿನ ದಾಖಲಾತಿಗಳಲ್ಲಿ ಖರ್ಚು ವೆಚ್ಚಗಳ ವಿವರ ಮತ್ತು ಆಹಾರ ಪದಾರ್ಥಗಳ ಪರಿಶೀಲನೆ ಮಾಡಿ ಶಿಕ್ಷಕಿ ರಾಮಾಂಜಿನಮ್ಮ ಅವರಿಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ನಾಗರಾಜು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಇಲಾಖೆಯ ಮೇಲ್ವೀಚಾರಕಿ ಸುಜಾತಮ್ಮ ಮತ್ತಿತರರು ಹಾಜರಿದ್ದರು.







