ವಂಚನೆ ಆರೋಪ: ಕಂಬಳದ ವೇಗದ ಓಟಗಾರ ಶ್ರೀನಿವಾಸ ಗೌಡ ಸಹಿತ ಮೂವರ ವಿರುದ್ಧ ದೂರು

ಮಂಗಳೂರು, ಜು.20: ಕಂಬಳದ ಬೇಗದ ಓಟಗಾರ ಖ್ಯಾತಿಯ ಶ್ರೀನಿವಾಸ ಗೌಡ ಹಾಗೂ ಇನ್ನಿಬ್ಬರ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಸದಸ್ಯ ಲೋಕೇಶ್ ಶೆಟ್ಟಿ ಎಂಬವರು ದೂರು ನೀಡಿದ್ದು, ಕಂಬಳ ಓಟಗಾರ ಶ್ರೀನಿವಾಸ ಗೌಡ, ಕೆ.ಗುಣಪಾಲ ಕಡಂಬ ಮತ್ತು ರತ್ನಾಕರ ಎಂಬವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರಕಾರ ಮತ್ತು ಸಾರ್ವಜನಿಕರಿಗೆ ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಕಂಬಳ ಅಕಾಡಮಿ ನಡೆಸುತ್ತಿರುವ ಗುಣಪಾಲ ಕಡಂಬ ಅವರು ಶ್ರೀನಿವಾಸ ಗೌಡರನ್ನು ಬಳಸಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಓಟದಲ್ಲಿ ಶ್ರೀನಿವಾಸ ಗೌಡ ಹಲವು ದಾಖಲೆ ಮುರಿದ ಹೆಸರಲ್ಲಿ ಲಕ್ಷಾಂತರ ರೂ. ದೇಣಿಗೆ ಸಂಗ್ರಹಿಸಿ, ನಕಲಿ ದಾಖಲೆ ಸೃಷ್ಟಿಸಿ ಸರಕಾರ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ ಎಂದು ಲೋಕೇಶ್ ಶೆಟ್ಟಿ ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನು ಲೇಸರ್ ಬೀಮ್ ಮೂಲಕ ಕಂಬಳದ ಫಲಿತಾಂಶ ಘೋಷಿಸುವ ಸ್ಕೈ ವೀವ್ ಮಾಲಕ ರತ್ನಾಕರ್ ವಿರುದ್ದ ಕೂಡ ದೂರು ದಾಖಲಾಗಿದೆ. ಅಧಿಕೃತ ಮಾನ್ಯತೆ ಪಡೆಯದ, ನಂಬಲಾರ್ಹವಲ್ಲದ ಸ್ಕೈ ವೀವ್ ಸಂಸ್ಥೆಯಿಂದ ಸುಳ್ಳು ತೀರ್ಪಿನ ದಾಖಲೆ ಸೃಷ್ಟಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.