ನಾಗ್ಪುರ: ಕಾರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ; ಪತ್ನಿ, ಮಗ ಚಿಂತಾಜನಕ
ಹಣಕಾಸು ಮುಗ್ಗಟ್ಟು ಹಿನ್ನೆಲೆ

ಸಾಂದರ್ಭಿಕ ಚಿತ್ರ
ನಾಗ್ಪುರ: ಹಣಕಾಸಿನ ತೊಂದರೆಯಿಂದ ನಾಗ್ಪುರದಲ್ಲಿ ಉದ್ಯಮಿಯೊಬ್ಬರು ಮಂಗಳವಾರ ಮಧ್ಯಾಹ್ನ ತನ್ನ ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಉದ್ಯಮಿಯ ಪತ್ನಿ ಹಾಗೂ ಮಗ ಉರಿಯುತ್ತಿದ್ದ ಕಾರಿನಿಂದ ಹೊರಬರುವಲ್ಲಿ ಯಶಸ್ವಿಯಾಗಿದ್ದರೂ ತೀವ್ರ ಸುಟ್ಟಗಾಯದಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ವೀಡಿಯೋದಲ್ಲಿ ಸುಟ್ಟು ಕರಕಲಾಗುತ್ತಿರುವ ಕಾರು ಕಂಡುಬಂದಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿದ್ದಾರೆ.
58 ವರ್ಷದ ರಾಮರಾಜ್ ಭಟ್ ಅವರು ತಮ್ಮ ಕುಟುಂಬವನ್ನು ಹೋಟೆಲ್ಗೆ ಊಟಕ್ಕೆಂದು ಕರೆದೊಯ್ದರು. ಸ್ವತಃ ಕಾರನ್ನು ಚಲಾಯಿಸುತ್ತಿದ್ದ ಅವರು ರಸ್ತೆಯೊಂದರಲ್ಲಿ ಇದ್ದಕ್ಕಿದ್ದಂತೆ ಕಾರನ್ನು ನಿಲ್ಲಿಸಿದರು. ತನ್ನ ಪತ್ನಿ ಹಾಗೂ ಮಗನ ಮೇಲೆ ಪೆಟ್ರೋಲ್ ಸುರಿದ ಅವರು ಬೆಂಕಿ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.
ತೀವ್ರ ಸುಟ್ಟಗಾಯಗಳಿಂದ ರಾಮರಾಜ್ ಭಟ್ ಮೃತಪಟ್ಟಿದ್ದಾರೆ. ಅವರ ಪತ್ನಿ ಸಂಗೀತಾ ಭಟ್( 57ವರ್ಷ) ಹಾಗೂ ಮಗ ನಂದನ್, (25ವರ್ಷ) ಹೇಗೋ ಬಾಗಿಲು ತೆರೆದು ಕಾರಿನಿಂದ ಜಿಗಿದರು. ಆದರೆ ಇಬ್ಬರು ಕೂಡ ತೀವ್ರವಾದ ಸುಟ್ಟ ಗಾಯಕ್ಕೀಡಾಗಿದ್ದಾರೆ. ಇಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ನಂಬಲಾಗಿದೆ.
ಸುಟ್ಟು ಕರಕಲಾದ ಕಾರಿನಲ್ಲಿ ಪ್ಲಾಸ್ಟಿಕ್ ಚೀಲದೊಳಗೆ ಒಂದು ಡೆತ್ ನೋಟ್ ಪತ್ತೆಯಾಗಿದೆ. ಅದರಲ್ಲಿ ಉದ್ಯಮಿ ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಎಂದು ಬರೆದಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.







