ಶ್ರೀಚಾಮುಂಡೇಶ್ವರಿ ವರ್ಧಂತಿ | ಚಾಮುಂಡಿ ಬೆಟ್ಟಕ್ಕೆ ಸಿಎಂ ಬೊಮ್ಮಾಯಿ ಭೇಟಿ, ಪೂಜೆ ಸಲ್ಲಿಕೆ

ಮೈಸೂರು, ಜು.20: ಮೈಸೂರಿನ ಶ್ರೀಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬುಧವಾರ ಪತ್ನಿ ಸಮೇತ ಚಾಮುಂಡಿಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಬುಧವಾರ ಆಗಮಿಸಿದ ಮುಖ್ಯಮಂತ್ರಿ ನಂತರ ಕಾರಿನಲ್ಲಿ ರಸ್ತೆ ಮೂಲಕ ತೆರಳಿದರು. ಬಳಿಕ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿ ಮಂಗಳಾರತಿ ಪಡೆದರು. ನಂತರ ದೇವಸ್ಥಾನದ ಒಳಗೆ ತರೆಳಿ ಶ್ರೀಚಾಮುಂಡೇಶ್ವರಿ ದೇವಿಗೆ ಕೆಲಕಾಲ ಪತ್ನಿಯೊಂದಿಗೆ ನಮಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕರ ಶಶಿಶೇಖರ ದೀತ್ ಮುಖ್ಯಮಂತ್ರಿಯವರಿಗೆ ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು. ಜೊತೆಗೆ ಮುಖ್ಯಮಂತ್ರಿಯ ಪತ್ನಿಗೆ ದೇವಿಯ ಸೀರೆ ನೀಡಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನೀರಾವರಿ ಸಚಿವ ಗೋವಿಂದ ಕಾರಜೋಳ, ಶಾಸಕರುಗಳಾದ ಜಿ.ಟಿ.ದೇವೇಗೌಡ, ಎಲ್.ನಾಗೇಂದ್ರ, ನಿರಂಜನ್ ಕುಮಾರ್, ಎಸ್.ಎ.ರಾಮದಾಸ್, ಮೈಸೂರು ಮೇಯರ್ ಸುನಂದಾ ಪಾಲನೆತ್ರ ಸೇರಿದಂತೆ ಹಲವರು ಜೊತೆಯಲ್ಲಿದ್ದರು.










