ಉಡುಪಿ | ಕಾರಿಗೆ ಟೆಂಪೊ ಢಿಕ್ಕಿ: ನಾಲ್ವರಿಗೆ ಗಾಯ

ಉಡುಪಿ, ಜು.20: ಕಾರೊಂದಕ್ಕೆ ಹಿಂದಿನಿಂದ ಕೊರಿಯರ್ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಗಾಯಗೊಂಡ ಘಟನೆ ಉಡುಪಿ ಸಮೀಪದ ಉದ್ಯಾವರ ರಾಷ್ಟ್ರೀಯ ಹೆದ್ದಾರಿಯಲ್ಲಿಂದು ನಡೆದಿರುವುದು ವರದಿಯಾಗಿದೆ.
ಕಾಪು ಕಡೆಯಿಂದ ಉಡುಪಿ ಕಡೆ ಬರುತ್ತಿದ್ದ ಕಾರಿಗೆ ಉದ್ಯಾವರ ಅಲೀಮ್ ಸಾಬ್ಜು ಆಡಿಟೋರಿಯಂ ಬಳಿ ಮಂಗಳೂರಿನಿಂದ ಉಡುಪಿಯತ್ತ ಬರುತ್ತಿದ್ದ ಕೊರಿಯರ್ ಸಾಗಾಟದ ವಾಹನಕ್ಕೆ ಢಿಕ್ಕಿ ಹೊಡೆದಿದೆ.
ಕಾರಿನಲ್ಲಿ ನಾಲ್ವರು ಮಹಿಳೆಯರು ಮತ್ತು ಒಬ್ಬ ಬಾಲಕ ಪ್ರಯಾಣಿಸುತ್ತಿದ್ದು, ಈ ಪೈಕಿ ಬಾಲಕನಿಗೆ ತಲೆಗೆ ಗಾಯವಾಗಿದ್ದರೆ, ಮಹಿಳೆಯರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಪಘಾತದಿಂದ ಕೆಲಹೊತ್ತು ರಾಷ್ಟೀಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.
ಕಾಪು ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ಸುಗಮಗೊಳಿಸಿದರು.