ಕಳೆದ ವರ್ಷ ಪೌರತ್ವ ತೊರೆದ ದಾಖಲೆ ಸಂಖ್ಯೆಯ ಭಾರತೀಯರು

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕಳೆದ ವರ್ಷ ದಾಖಲೆ ಸಂಖ್ಯೆಯ 1,63,370 ಭಾರತೀಯರು ತಮ್ಮ ಪೌರತ್ವವನ್ನು ತೊರೆದಿದ್ದಾರೆ ಎಂದು ಕೇಂದ್ರ ಗೃಹ ರಾಜ್ಯ ಸಚಿವ ನಿತ್ಯಾನಂದ ರಾಯ್ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.
ಭಾರತೀಯ ಪೌರತ್ವವನ್ನು ತ್ಯಜಿಸಲು ಗರಿಷ್ಠ ಅರ್ಜಿಗಳು ಅಮೆರಿಕಾದಿಂದ (78,284) ಬಂದಿದ್ದರೆ, ಆಸ್ಟ್ರೇಲಿಯಾದಿಂದ 23,533 ಅರ್ಜಿಗಳು, ಕೆನಡಾದಿಂದ 21,597 ಅರ್ಜಿಗಳು, ಇಂಗ್ಲೆಂಡ್ನಿಂದ 14,637 ಅರ್ಜಿಗಳು ಮತ್ತು ಇಟಲಿಯಿಂದ 5,986 ಅರ್ಜಿಗಳು ಬಂದಿದ್ದವು ಎಂದು ಸಚಿವರು ತಿಳಿಸಿದ್ದಾರೆ.
ಇಷ್ಟೊಂದು ಭಾರತೀಯ ಪೌರರು ತಮ್ಮ ಪೌರತ್ವ ತ್ಯಜಿಸಲು ಕಾರಣವೇನೆಂದು ಸಚಿವರು ವಿವರಿಸಿಲ್ಲ. ಇತರ ಕೆಲ ದೇಶಗಳಂತೆ ಭಾರತವು ದ್ವಿಪೌರತ್ವಕ್ಕೆ ಅವಕಾಶ ನೀಡುವುದಿಲ್ಲವಾದುದರಿಂದ ಇತರ ದೇಶಗಳ ಪೌರತ್ವ ಪಡೆದವರು ತಮ್ಮ ಮಾತೃ ದೇಶದ ಪೌರತ್ವ ತೊರೆಯುವುದು ಅನಿವಾರ್ಯವಾಗಿದೆ.
ವಿದೇಶಾಂಗ ಸಚಿವಾಲಯದ ಅಂಕಿಅಂಶಗಳ ಪ್ರಕಾರ 2020ರಿಂದ ಪೌರತ್ವ ತೊರೆಯುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ. 2019ರಲ್ಲಿ 144217 ಮಂದಿ ಪೌರತ್ವ ತೊರೆದಿದ್ದರೆ 2020ರಲ್ಲಿ ಈ ಸಂಖ್ಯೆ 85,248 ಆಗಿತ್ತು. ಹೊಸ ಅಂಕಿಅಂಶಗಳ ಪ್ರಕಾರ ಪೌರತ್ವ ತೊರೆದವರ ಒಟ್ಟು ಸಂಖ್ಯೆ 2017ರಲ್ಲಿ 8,81,254 ಆಗಿದ್ದರೆ ಈಗ ಈ ಸಂಖ್ಯೆ 9,32,000 ಆಗಿದೆ.





