ಸಿಧು ಮೂಸೆವಾಲಾ ಹತ್ಯೆ ಪ್ರಕರಣ: ಪೊಲೀಸರ ಜೊತೆ ಗುಂಡಿನ ಚಕಮಕಿಯಲ್ಲಿ ಇಬ್ಬರು ಶಂಕಿತ ಹಂತಕರ ಸಾವು

Photo: Twitter/@ANI
ಚಂಡೀಗಢ: ಗಾಯಕ ಸಿಧು ಮೂಸೆವಾಲಾ ಕೊಲೆ ಪ್ರಕರಣದ ಇಬ್ಬರು ಶಂಕಿತ ಹಂತಕರು ಅಮೃತಸರ್ ಸಮೀಪ ಇಂದು ಪಂಜಾಬ್ ಪೊಲೀಸರ ಜೊತೆಗೆ ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಹತರಾಗಿದ್ದಾರೆ. ಘಟನೆಯಲ್ಲಿ ಮೂವರು ಪೊಲೀಸರಿಗೆ ಗಾಯಗಳಾಗಿವೆ.
ಮೃತರನ್ನು ಜಗರೂಪ್ ಸಿಂಗ್ ರೂಪಾ ಹಾಗೂ ಮನ್ಪ್ರೀತ್ ಸಿಂಗ್ ಆಲಿಯಾಸ್ ಮನ್ನು ಕುಸ್ಸ ಎಂದು ಗುರುತಿಸಲಾಗಿದೆ. ಜಗರೂಪ್ ಮೊದಲು ಸಾಯಿಸಲ್ಪಟ್ಟರೆ ಇನ್ನೊಬ್ಬಾತ ಇನ್ನೂ ಒಂದು ಗಂಟೆ ಕಾಲ ಪೊಲೀಸರ ಜೊತೆಗೆ ಗುಂಡಿನ ಕಾಳಗ ನಡೆಸಿ ಕೊನೆಗೆ ಸಂಜೆ 4 ಗಂಟೆ ವೇಳೆ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.
ಗುಂಡಿನ ಚಕಮಕಿ ವೇಳೆ ಸುದ್ದಿ ವಾಹಿನಿಯೊಂದರ ಕ್ಯಾಮೆರಾಮೆನ್ ಕಾಲಿಗೂ ಗುಂಡೇಟು ಬಿದ್ದಿದೆ.
ಅಮೃತಸರ್ ನಿಂದ ಸುಮಾರು 20 ಕಿಮೀ ದೂರದ ಭಕ್ನಾ ಎಂಬಲ್ಲಿ ಈ ಘಟನೆ ನಡೆದಿದ್ದು ಶಂಕಿತ ಹಂತಕರಿದ್ದ ಮನೆಯಲ್ಲಿ ಇನ್ನೂ ಹಲವು ಮಂದಿ ಇರಬೇಕೆಂಬ ಶಂಕೆಯಿದೆ. ಸ್ಥಳಕ್ಕೆ ರಾಜ್ಯ ಪೊಲೀಸ್ ಮುಖ್ಯಸ್ಥ ಗೌರವ್ ಯಾದವ್ ಧಾವಿಸಿದ್ದಾರೆ.
ಖ್ಯಾತ ಗಾಯಕ ಹಾಗೂ ಕಾಂಗ್ರೆಸ್ ನಾಯಕನಾಗಿದ್ದ ಶುಭದೀಪ್ ಸಿಂಗ್ ಸಿಧು ಆಲಿಯಾಸ್ ಸಿದು ಮೂಸೆವಾಲಾ ಅವರನ್ನು ಪಂಜಾಬ್ನ ಮನ್ಸಾ ಜಿಲ್ಲೆಯ ಅವರ ಗ್ರಾಮ ಮೂಸಾ ಎಂಬಲ್ಲಿ ಮೇ 29ರಂದು ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು.