ಉಡುಪಿ ನಗರದಲ್ಲಿ ಪೇ ಪಾರ್ಕಿಂಗ್‌ಗೆ ಚಿಂತನೆ: ಸುಮಿತ್ರಾ ನಾಯಕ್
ʼಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ʼ ವಾರ್ತಾಭಾರತಿಯ ವರದಿ ಉಲ್ಲೇಖ

ಉಡುಪಿ : ಈ ಹಿಂದೆ ಉಡುಪಿ ನಗರದಲ್ಲಿನ ಪಾರ್ಕಿಂಗ್ ಸಮಸ್ಯೆ ಪರಿಹಾರಕ್ಕಾಗಿ ಜಾರಿಯಲ್ಲಿದ್ದ ಪೇ ಪಾರ್ಕಿಂಗ್ ವ್ಯವಸ್ಥೆಯನ್ನು ಕಾರಣಾಂತರ ದಿಂದ ರದ್ದುಗೊಳಿಸಲಾಗಿತ್ತು. ಇದೀಗ ನಗರದಲ್ಲಿ ಪಾರ್ಕಿಂಗ್ ಸಮಸ್ಯೆ ಉಲ್ಬಣ ಗೊಂಡಿರುವುದರಿಂದ ಮತ್ತೆ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ತಿಳಿಸಿದ್ದಾರೆ.
ಉಡುಪಿ ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ನಗರಸಭೆ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. ಸಭೆಯಲ್ಲಿ ನಗರದ ಸಂಚಾರ ವ್ಯವಸ್ಥೆಯ ಕುರಿತು ಮಾತನಾಡಿದ ನಗರ ಸಂಚಾರ ಠಾಣೆಯ ಉಪ ನಿರೀಕ್ಷಕ ಅಬ್ದುಲ್ ಖಾದರ್, ನಗರ ಸರ್ವಿಸ್ ಬಸ್ ನಿಲ್ದಾಣ, ಮೈತ್ರಿ ಕಾಂಪ್ಲೆಕ್ಸ್, ಜಟ್ಕಾ ಸ್ಟ್ಯಾಂಡ್‌ನ ಪಾರ್ಕಿಂಗ್ ಸ್ಥಳಗಳಲ್ಲಿ ಮಂಗಳೂರು ಕೆಲಸಕ್ಕೆ ಹೋಗುವ ಕೆಲವರು ಬೆಳಗ್ಗೆಯಿಂದ ಸಂಜೆಯವರೆಗೆ ತಮ್ಮ ವಾಹನ ನಿಲ್ಲಿಸಿ ಹೋಗುತ್ತಾರೆ. ಅಲ್ಲದೆ ಅಡ್ಡದಿಡ್ಡಿಯಾಗಿ ನಿಲ್ಲಿಸುವುದರಿಂದ ಹೆಚ್ಚು ವಾಹನಗಳನ್ನು ನಿಲ್ಲಿಸಲು ಸ್ಥಳವಾಕಾಶದ ಕೊರತೆ ಉಂಟಾಗುತ್ತದೆ. ಅದಕ್ಕಾಗಿ ಇಂತಹ ಸ್ಥಳಗಳಲ್ಲಿ ಪೇ ಪಾರ್ಕಿಂಗ್ ಮಾಡಿ, ಒಬ್ಬರನ್ನು ನಿಯೋಜಿಸಿದರೆ ಸಮಸ್ಯೆ ಪರಿಹರಿಸಬಹುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಕೆ.ರಘುಪತಿ ಭಟ್, ನಗರದಲ್ಲಿ ಪೇ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ತರುವುದು ಉತ್ತಮ. ಈ ನಿಟ್ಟಿನಲ್ಲಿ ಪೌರಾಯುಕ್ತರು ಯಾವ ಸ್ಥಳಗಳಲ್ಲಿ ಪೇ ಪಾರ್ಕಿಂಗ್ ಮಾಡಬಹುದು ಎಂಬುದಾಗಿ ಸಮೀಕ್ಷೆ ನಡೆಸಿ ನಗರಸಭೆಗೆ ಮಂಡಿಸಲಿ ಎಂದು ತಿಳಿಸಿದರು.
೭-೮ ಕಡೆಗಳಲ್ಲಿ ಸಿಗ್ನಲ್‌ಲೈಟ್: ನಗರದ ಏಳೆಂಟು ಕಡೆಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸುವ ನಿಟ್ಟಿನಲ್ಲಿ ಶಾಸಕರ ನೇತೃತ್ವದಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ ಎಂದು ನಗರ ಸಂಚಾರ ಠಾಣೆಯ ಉಪ ನಿರೀಕ್ಷಕ ಅಬ್ದುಲ್ ಖಾದರ್ ಮಾಹಿತಿ ನೀಡಿದರು.
ಝಿಬ್ರಾ ಕ್ರಾಸ್ ಗೊಂದಲಮಯವಾಗಿದ್ದು, ಇದನ್ನು ಸರಿಪಡಿಸಬೇಕು. ಫುಟ್ ಪಾತ್‌ಗಳಲ್ಲಿಯೇ ವ್ಯಾಪಾರ ನಡೆಸುವುದರಿಂದ ಪಾದಚಾರಿಗಳಿಗೆ ಸಮಸ್ಯೆ ಆಗುತ್ತಿದೆ. ಕೆ.ಎಂ.ರ್ಮಾಗದಲ್ಲಿನ ಡಿವೈಡರ್‌ನಲ್ಲಿ ಅಳವಡಿಸಿರುವ ಜಾಹೀರಾತು ಬೋರ್ಡ್ ಬೀಳುವ ಸ್ಥಿತಿಯಲ್ಲಿದ್ದು, ಅವುಗಳನ್ನು ತೆರವುಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಕಲ್ಸಂಕ ಸರ್ಕಲ್‌ನಲ್ಲಿನ ಉಡುಪಿ-ಅಂಬಾಗಿಲು ಹಾಗೂ ಅಂಬಾಗಿಲು- ಮಣಿಪಾಲ ಹೋಗುವ ರಸ್ತೆಯನ್ನು ಅಗಲ ಮಾಡಿದರೆ ಟ್ರಾಫಿಕ್ ಸಮಸ್ಯೆ ಕಡಿಮೆ ಮಾಡಬಹುದು. ರಾಷ್ಟ್ರೀಯ ಹೆದ್ದಾರಿಯ ಸಂತೆಕಟ್ಟೆ ಬ್ಲ್ಯಾಕ್ ಸ್ಪಾಟ್ ಎಂಬುದಾಗಿ ಗುರುತಿಸಲಾಗಿದೆ. ಕೆಲವು ಕಡೆ ಸರ್ವಿಸ್ ರಸ್ತೆಗಳಿಲ್ಲದೆ ವಾಹನ ಗಳು ವಿರುದ್ಧ ದಿಕ್ಕಿನಲ್ಲಿ ಬರುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು.
ಗುತ್ತಿಗೆದಾರರ ವಿರುದ್ಧ ಕ್ರಮ: ಫೇವರ್ ಫಿನಿಶ್ ರಸ್ತೆಗಳು ಒಂದೇ ವರ್ಷಕ್ಕೆ ಕಿತ್ತು ಹೋಗಿದ್ದು, ಗುತ್ತಿಗೆದಾರರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯ ಪ್ರಭಾಕರ ಪೂಜಾರಿ ಸಭೆಯಲ್ಲಿ ಒತ್ತಾಯಿಸಿದರು.
ಕೆಲವು ಕಡೆ ಒಂದೇ ತಿಂಗಳಲ್ಲಿ ರಸ್ತೆ ಹಾಳಾಗಿವೆ. ಅಂತಹ ಗುತ್ತಿಗೆದಾರರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಕಾಮಗಾರಿಯ ಬಿಲ್ ಬಾಕಿ ಇಡಬೇಕು. ಇನ್ನು ಮುಂದೆ ಗುತ್ತಿಗೆದಾರರ ಬಿಲ್ ತಕ್ಷಣ ಪಾವತಿಸದೆ, ರಸ್ತೆ ಗುಣಮಟ್ಟ ನೋಡಲು ಒಂದು ವರ್ಷ ಕಾಯಬೇಕು ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.
ರಮೇಶ್ ಕಾಂಚನ್ ಮಾತನಾಡಿ, ಕೆಲವು ಗುತ್ತಿಗೆದಾರರು ಶಾಸಕರ ಹೆಸರು ಹೇಳಿ ಅಧಿಕಾರಿಗಳನ್ನು ಬೆದರಿಸುವ ಕೆಲಸ ಮಾಡುತ್ತಾರೆ. ಹಾಗಾಗಿ ಅಧಿಕಾರಿಗಳು ಈ ಬಗ್ಗೆ ಮಾತನಾಡಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ನನ್ನ ಹೆಸರು ಹೇಳಿ ಬೆದರಿಸಿದರೆ ನನಗೆ ತಿಳಿಸಿ, ಅಂತಹ ಗುತ್ತಿಗೆದಾರರಿಗೆ ನಾವು ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸಭೆಯಲ್ಲಿ ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಹಾಜರಿದ್ದರು.
‘ವಾರ್ತಾಭಾರತಿಯ ವರದಿ ಉಲ್ಲೇಖ’
ವಾರ್ತಾಭಾರತಿಯಲ್ಲಿ ಇಂದು ಪ್ರಕಟವಾದ ‘ಪರ್ಕಳ ರಾ.ಹೆದ್ದಾರಿಯಲ್ಲಿ ನಿತ್ಯ ಗಂಟೆಗಟ್ಟಲೆ ಟ್ರಾಫಿಕ್ ಜಾಮ್’ ವರದಿಯನ್ನು ಸಭೆಯಲ್ಲಿ ಉಲ್ಲೇಖಿಸಿದ ವಿಪಕ್ಷ ನಾಯಕ ರಮೇಶ್ ಕಾಂಚನ್, ಈ ಬಗ್ಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಶಾಸಕ ರಘುಪತಿ ಭಟ್ ಅವರನ್ನು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಘುಪತಿ ಭಟ್, ಇಲ್ಲಿನ ಕೆಳಪರ್ಕಳದಲ್ಲಿ ಏರಿಯಲ್ಲಿ ಹಾಳಾಗಿರುವ ರಸ್ತೆಗೆ ಮಣ್ಣು ಹಾಕಿದರೂ ನಿಲ್ಲುತ್ತಿಲ್ಲ. ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಭಾಗದಲ್ಲಿ ತಾತ್ಕಾಲಿಕವಾಗಿ ಕಾಂಕ್ರೀಟ್ ಕಾಮಗಾರಿ ನಡೆ ಸುವಂತೆ ಸೂಚನೆ ನೀಡಲಾಗಿದೆ. ಎರಡು ಮೂರು ದಿನಗಳಲ್ಲಿ ಕಾಂಕ್ರೀಟ್ ಕಾಮಗಾರಿ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಮೀಟರ್ ಕಿತ್ತು ಸಮುದ್ರಕ್ಕೆ ಎಸೆಯಿರಿ: ಶಾಸಕರ ಆಕ್ರೋಶ
ವಾರಾಹಿಯಿಂದ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಸಂಬಂಧಿಸಿ ಈಗಾಗಲೇ ಅಳವಡಿಸಲಾಗಿರುವ ನೀರಿನ ಮೀಟರ್‌ನಲ್ಲಿ 300ರೂ. ಬದಲು 1300ರೂ. ಬಿಲ್ ಬರುತ್ತಿದೆ ಎಂದು ಸದಸ್ಯ ಸುಂದರ್ ಕಲ್ಮಾಡಿ ಸಭೆ ಯಲ್ಲಿ ದೂರಿದರು.
ಇದಕ್ಕೆ ಸ್ಪಷ್ಟನೆ ಕೊಟ್ಟ ಯೋಜನೆ ಕಾಮಗಾರಿ ನಡೆಸುತ್ತಿರುವ ಕೆಯುಐಡಿ ಎಫ್‌ಸಿಯ ಅಧಿಕಾರಿಗಳು, ಇದಕ್ಕೆ ಕಾರಣ ಒತ್ತಡದಿಂದ ನೀರಿನ ಪೈಪಿನಲ್ಲಿ ಬರುತ್ತಿರುವ ಏರ್ (ಗಾಳಿ) ಕಾರಣವಾಗಿದೆ ಎಂದರು. ಇದರಿಂದ ಆಕ್ರೋಶ ಗೊಂಡ ಶಾಸಕರು ಹಾಗೂ ಸದಸ್ಯರು ಅಂತಹ ಮೀಟರ್ ಯಾವುದೇ ಕಾರಣಕ್ಕೂ ಅಳವಡಿಸಬಾರದು ಎಂದು ಹೇಳಿದರು.
ಈಗಾಗಲೇ ಕೆಲವು ಕಡೆ ಮೀಟರ್ ಅಳವಡಿಸಿ ಆಗಿದೆ. ೨೪ ಗಂಟೆಗಳ ಕಾಲ ನೀರು ಪೂರೈಕೆ ಆಗುವಾಗ ಈ ಸಮಸ್ಯೆ ಬರುವುದಿಲ್ಲ. ಎಲ್ಲವನ್ನು ಸರಿ ಮಾಡಿ ಕೊಡುತ್ತೇವೆ ಎಂದು ಅಧಿಕಾರಿ ಸಮಜಾಯಿಸಿ ನೀಡಿದರು. ಇದರಿಂದ ಆಕ್ರೋಶ ಗೊಂಡ ಶಾಸಕರು, ಅಳವಡಿಸಿರುವ ಮೀಟರನ್ನು ಕಿತ್ತು ಸಮುದ್ರಕ್ಕೆ ಎಸೆಯಿರಿ. ಇಂತಹ ಮೀಟರ್ ಹಾಕಿದವರಿಗೆ ಬಿಲ್ ಪಾಸ್ ಮಾಡಿದರೆ ಪೌರಾಯುಕ್ತರ ವಿರುದ್ಧವೂ ಕ್ರಮಕ್ಕೆ ಸರಕಾರಕ್ಕೆ ಬರೆಯಬೇಕಾಗುತ್ತದೆಂದು ಎಚ್ಚರಿಕೆ ನೀಡಿದರು.







