ಬೈಂದೂರು: ಬೆಳೆಗಳ ನಾಶಕ್ಕೆ ಶೀಘ್ರವೇ ಪರಿಹಾರ ನೀಡುವಂತೆ ಆಗ್ರಹಿಸಿ ಧರಣಿ

ಬೈಂದೂರು : ಧಾರಾಕಾರ ಮಳೆಯಿಂದ ಸಾವಿರಾರು ಎಕರೆ ಪ್ರದೇಶ ದಲ್ಲಿ ಭತ್ತ, ಅಡಿಕೆ ಸೇರಿದಂತೆ ಹಲವಾರು ಬೆಳೆಗಳು ನಾಶವಾಗಿದ್ದು ಸರಕಾರ ಸಮೀಕ್ಷೆ ನಡೆಸಿಶೀಘ್ರ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸಿಪಿಎಂ ನೇತೃತ್ವದಲ್ಲಿ ಮಂಗಳವಾರ ಬೈಂದೂರು ತಹಶಿಲ್ದಾರ್ ಕಚೇರಿ ಎದುರು ಧರಣಿ ನಡೆಸ ಲಾಯಿತು.
ಸಭೆಯನ್ನುದ್ದೇಶಿಸಿ ಸಿಪಿಎಂ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ರೈತರು ಗದ್ದೆಗಳಲ್ಲಿ ಬೆಳೆದ ಭತ್ತ ವಿಪರೀತ ಮಳೆ ಯಿಂದಾಗಿ ಸಂಪೂರ್ಣ ಕೊಳೆತು ಹೋಗಿದ್ದು ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ. ನೆರೆ ಹಾವಳಿಯಿಂದ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಹಾಗೂ ಹೈನುಗಾರಿಕೆ ದೊಡ್ಡ ಮೊತ್ತದ ಹೊರೆ ಬಿದ್ದಿದೆ. ಸರಕಾರ ಶೀಘ್ರ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ್ ಕೋಣಿ ಮಾತನಾಡಿ, ಬೆಲೆ ಏರಿಕೆಯ ಹೊಡೆತ ಜನ ಸಾಮಾನ್ಯರ ಬಾಧಿಸುತ್ತಿರವಾಗಲೇ ನೆರೆಹಾವಳಿ ಸಂಕಷ್ಟ ತಂದಿದೆ. ಕಡಲುಕೊರೆತ ಗ್ರಾಮಗಳನ್ನೇ ನುಂಗುವ ಅಪಾಯದಲ್ಲಿದ್ದರೂ ಸರಕಾರ ಶಾಶ್ವತ ಪರಿಹಾರ ಒದಗಿಸಿಲ್ಲ ಎಂದು ಆರೋಪಿಸಿದರು.
ವಿವಿಧ ಬೇಡಿಕೆಗಳ ಮನವಿಯನ್ನು ತಹಶೀಲ್ದಾರ್ ಮೂಲಕ ಸರಕಾರಕ್ಕೆ ಸಲ್ಲಿಸಲಾಯಿತು. ಧರಣಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ನಾಗರತ್ನ ನಾಡ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಮಂಜು, ಅಣ್ಣಪ್ಪ ಮೊದಲಾದವರು ಉಪಸ್ಥಿತರಿದ್ದರು.