ಪತಿಯ ವಿರುದ್ಧ ಅತ್ಯಾಚಾರ ಪ್ರಕರಣ ವಿಚಾರಣೆಗೆ ಅನುಮತಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಹೊಸದಿಲ್ಲಿ: ಪತ್ನಿಯ ಮೇಲೆ ಅತ್ಯಾಚಾರಗೈದ ಆರೋಪ ಹೊತ್ತ ವ್ಯಕ್ತಿಯ ವಿಚಾರಣೆಗೆ ಅನುಮತಿಸಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ವಿಧಿಸಿದೆ.
ಗಂಡ ಬಲವಂತದಿಂದ ತನ್ನ ಜೊತೆ ಲೈಂಗಿಕ ಸಂಪರ್ಕ ಹೊಂದುತ್ತಿದ್ದ, ಮೌಖಿಕ ಮತ್ತು ಅನೈಸರ್ಗಿಕ ಲೈಂಗಿಕ ಕ್ರಿಯೆಯನ್ನು ತನ್ನಿಂದ ಬಲವಂತದಿಂದ ಮಾಡಿಸುತ್ತಿದ್ದ, ಪೋರ್ನ್ ಚಿತ್ರಗಳನ್ನು ಅನುಕರಿಸುತ್ತಿದ್ದ, ಗರ್ಭಿಣಿಯಾಗಿರುವಾಗ ಅತ್ಯಾಚಾರ ನಡೆಸಿದ್ದ ಹಾಗೂ ಪುತ್ರಿಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದ ಹಾಗೂ ಪುತ್ರಿಯ ಎದುರು ಕೂಡ ಲೈಂಗಿಕ ದೌರ್ಜನ್ಯ ನಡೆಸಿ ಪುತ್ರಿಗೆ ಹೊಡೆಯುವ ಬೆದರಿಕೆಯೊಡ್ಡಿದ್ದ ಎಂದು ಮಹಿಳೆ ಆರೋಪಿಸಿದ್ದರು.
ವಿವಾಹವೆಂಬುದು ಪುರುಷರಿಗೆ ದೌರ್ಜನ್ಯ ಎಸಗಲು ಪರವಾನಗಿ ಎಂದು ತಿಳಿಯಲಾಗದು ಎಂದು ಮಾರ್ಚ್ ತಿಂಗಳಿನಲ್ಲಿ ಹೇಳಿದ್ದ ಕರ್ನಾಟಕ ಹೈಕೋರ್ಟಿನ ನ್ಯಾಯಾಧೀಶ ಎಂ ನಾಗಪ್ರಸನ್ನ, ಆರೋಪಿ ಪತಿಯ ವಿರುದ್ಧದ ಅತ್ಯಾಚಾರ ಪ್ರಕರಣ ಕೈಬಿಡಲು ನಿರಾಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿ ಸುಪ್ರೀಂ ಕೋರ್ಟ್ ಕದ ತಟ್ಟಿ ಹೈಕೋರ್ಟ್ ಆದೇಶಕ್ಕೆ ತಡೆ ಕೋರಿದ್ದರು.
ಮೇ 10ರ ಆದೇಶದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಜೆ ಕೆ ಮಹೇಶ್ವರಿ ಮತ್ತು ಹಿಮಾ ಕೊಹ್ಲಿ ಅವರ ಪೀಠ ಹೈಕೋರ್ಟ್ ವಿಚಾರಣೆಗೆ ತಡೆ ಹೇರಲು ನಿರಾಕರಿಸಿತ್ತಲ್ಲದೆ ಪ್ರಕರಣದ ವಿಚಾರಣೆಯನ್ನು ಜುಲೈ ಮೂರನೇ ವಾರಕ್ಕೆ ನಿಗದಿಪಡಿಸಿತ್ತು.
ಗುರುವಾರದ ವಿಚಾರಣೆ ವೇಳೆ ಮಹಿಳೆಯ ಪರ ವಕೀಲರು ಪ್ರತಿ ಅಫಿಡವಿಟ್‍ಗೆ ನಾಲ್ಕು ವಾರ ಕಾಲಾವಕಾಶ ಕೋರಿದರೆ ಇದನ್ನು ಆರೋಪಿ ಪರ ವಕೀಲರು ವಿರೋಧಿಸಿದರು.
ನಂತರ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ತಡೆ ಹೇರಿದೆಯಲ್ಲದೆ ಪತ್ನಿಯ ಎಫ್‍ಐಆರ್ ಆಧಾರಿಸಿ ಸೆಷನ್ಸ್ ಕೋರ್ಟ್ ಪ್ರಕರಣದ ವಿಚಾರಣೆಗೂ ತಡೆಯಾಜ್ಞೆ ವಿಧಿಸಿದೆ.







