ಮನೆಗಳ ಹೊರಗೆ ರಾಷ್ಟ್ರಧ್ವಜ ಹಾರಿಸಿ ಭಾರತ ಮಾತೆಯ ಮಕ್ಕಳೆಂದು ಸಾಬೀತುಪಡಿಸಿ: ಅಸ್ಸಾಂ ಸಿಎಂ
"ಭಾರತೀಯ ನಾಗರಿಕರೆಂದು ಹೇಳಿಕೊಂಡು ಎನ್ಆರ್ಸಿಗೆ ಅರ್ಜಿ ಸಲ್ಲಿಸಿದರಷ್ಟೇ ಸಾಲದು"

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ
ಹೊಸದಿಲ್ಲಿ: ತಾವು "ಭಾರತ ಮಾತೆಯ ನಿಜವಾದ ಮಕ್ಕಳು'' ಎಂದು ಸಾಬೀತುಪಡಿಸಲು ಎಲ್ಲಾ ನಾಗರಿಕರು ತಮ್ಮ ಮನೆಗಳ ಹೊರಗೆ ಆಗಸ್ಟ್ 13ರಿಂದ 15ರ ತನಕ ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
"ನೀವು ಭಾರತೀಯ ನಾಗರಿಕರೆಂದು ಹೇಳಿಕೊಂಡು ಎನ್ಆರ್ಸಿಗೆ ಅರ್ಜಿ ಸಲ್ಲಿಸಿದರಷ್ಟೇ ಸಾಲದು. ರಾಷ್ಟ್ರಧ್ವಜ ಹಾರಿಸಿ ನೀವು ಭಾರತ ಮಾತೆಯ ನಿಜವಾದ ಮಕ್ಕಳೆಂದು ಪುರಾವೆ ಒದಗಿಸಬೇಕಿದೆ. ಹೌದೇ ಅಥವಾ ಅಲ್ಲವೇ?'' ಎಂದು ಉತ್ತರ ಅಸ್ಸಾಂನ ಉಡಲ್ಗರಿ ಎಂಬಲ್ಲಿ 35 ಮೆವಾ ಸೌರ ವಿದ್ಯುತ್ ಘಟಕ ಉದ್ಘಾಟಿಸಿ ಅವರು ಮಾತನಾಡುತ್ತಾ ಹೇಳಿದರು.
ಆಸ್ಸಾಂನ 80 ಲಕ್ಷ ಕುಟುಂಬಗಳು ಆಗಸ್ಟ್ 13 ಹಾಗೂ ಆಗಸ್ಟ್ 15 ನಡುವೆ ತಮ್ಮ ಮನೆಗಳ ಹೊರಗೆ, ಅಂಗಡಿಗಳು ಹಾಗೂ ಇತರ ಸಂಸ್ಥೆಗಳ ಹೊರಗೆ ಪ್ರಧಾನಿ ನರೇಂದ್ರ ಮೋದಿ ಅವರ ಹರ್ ಘರ್ ತಿರಂಗ ಯೋಜನೆಯಡಿ ಆಜಾದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಹಾರಿಸಲಿದ್ದಾರೆ ಎಂದು ಅವರು ಹೇಳಿದರು.
ನ್ಯಾಯ ಬೆಲೆ ಅಂಗಡಿಗಳಲ್ಲಿ ಈ ರಾಷ್ಟ್ರಧ್ವಜಗಳನ್ನು ತಲಾ ರೂ 16 ಕ್ಕೆ ಮಾರಾಟ ಮಾಡಲಾಗುವುದು ಹಾಗೂ ಮಹಿಳಾ ಸ್ವಸಹಾಯ ಗುಂಪುಗಳ ಮೂಲಕವೂ ಧ್ವಜಗಳನ್ನು ಮಾರಾಟ ಮಾಡಲಾಗುವುದು ಎಂದು ಅವರು ಹೇಳಿದರು.







