ಮುಡಾದ ಕೊಣಾಜೆ ಬಡಾವಣೆ ಶೀಘ್ರ ಲೋಕಾರ್ಪಣೆ: ರವಿಶಂಕರ ಮಿಜಾರು
ಮಂಗಳೂರು: ಮುಡಾ ವ್ಯಾಪ್ತಿಯಲ್ಲಿ ೯೫೦ ಸೈಟ್‌ಗಳಷ್ಟು ಸೈಟ್‌ಗಳನ್ನು ಹೊಂದಿರುವ ೩ ಬಡವಾಣೆಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದ್ದು, ಈ ಪೈಕಿ ಕೊಣಾಜೆಯಲ್ಲಿ ಜಾಗ ಸಮತಟ್ಟು ಮಾಡುವ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದ್ದು, ಶೀಘ್ರ ಲೋಕಾರ್ಪಣೆಗೊಳ್ಳಲಿದೆ ಎಂದು ನಿರ್ಗಮಿತ ಅಧ್ಯಕ್ಷ ರವಿಶಂಕರ್ ಮಿಜಾರ್ ಹೇಳಿದ್ದಾರೆ.
ಬುಧವಾರ ಮುಡಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಜತ್ತಬೈಲ್‌ನಲ್ಲಿ ಈಗಾಗಲೇ ಸಮತಟ್ಟುಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ವರ್ಷಾಂತ್ಯದ ವೇಳೆಗೆ ಅರ್ಹರಿಗೆ ಹಸ್ತಾಂತರವಾಗಲಿದೆ. ಸುರತ್ಕಲ್ ಚೇಳಾರುವಿನಲ್ಲಿ ಸೈಟ್ ನಿರ್ಮಾಣಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಟೆಕ್ನಿಕಲ್ ಬಿಡ್ ಬಾಕಿ ಇದೆ ಎಂದರು.
ಮುಡಾ ಅಧ್ಯಕ್ಷನಾಗಿ ಎರಡು ವರ್ಷದ ಅವಧಿಯಲ್ಲಿ ಸಾರ್ವಜನಿಕರಿಗೆ ನೀಡಿದ ಸೇವೆ ತೃಪ್ತಿ ತಂದಿದೆ. ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಮುಡಾವನ್ನು ಜಸಸ್ನೇಹಿ ಕಚೇರಿಯನ್ನಾಗಿಸಬೇಕು ಎನ್ನವ ಕಲ್ಪನೆಯಿತ್ತು. ಅದರಂತೆ ನಾಗರಿಕೆ ಉತ್ತಮ ಸೇವೆ-ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಯತ್ನ ಪಟ್ಟಿದ್ದೇನೆ ಎಂದರು.
ಮುಡಾಕ್ಕೆ ಸಂಬಂಧಿಸಿದ ವಿವಿಧ ಶುಲ್ಕಗಳು ಬಡವರಿಗೆ ಕೈಗೆಟಕದಂತಿತ್ತು. ಅದನ್ನು ಶಾಸಕರ, ಸಂಸದರ ಸಹಕಾರದಿಂದ ಸರ್ಕಾರದ ಮಟ್ಟದಲ್ಲಿಯೇ ಕಡಿಮೆ ಮಾಡಲು ಪ್ರಯತ್ನಪಟ್ಟು ಯಶಸ್ವಿಯಾಯಿತು.
ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಸ್ಟೇಟ್‌ಬ್ಯಾಂಕ್ ಬಳಿಯ ಸರ್ವೀಸ್ ಬಸ್ ನಿಲ್ದಾಣದ ಅಭಿವೃದ್ಧಿ, ಕದ್ರಿ ಉದ್ಯಾನವನಕ್ಕೆ ನೀರು ಪೂರೈಕೆಗೆ ಸಂಬಂಧಿಸಿ ಗಂಗನಪಳ್ಳದ ಸಮಗ್ರ ಬದಲಾಣೆ, ಫೌಂಟೆನ್ ಮರು ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಮುಡಾ ವ್ಯಾಪ್ತಿಯಲ್ಲಿ ೨೫ ಕೆರೆ ಅಭಿವೃದ್ಧಿ ಯೋಜನೆ ಭಾಗವಾಗಿ ೧೨ ಕಾಮಗಾರಿ ಪೂರ್ಣಗೊಂಡಿದೆ. ೯೭ ಪಾರ್ಕ್‌ಗಳ ಅಭಿವೃಧ್ಧಿಯ ಪೈಕಿ ೨೩ರ ಕೆಲಸ ಆರಂಭಿಸಲಾಗಿದೆ. ಹಣಪಾವತಿ ವ್ಯವಸ್ಥೆಯಲ್ಲಿ ಆನ್‌ಲೈನ್ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ. ಮಂಗಳೂರು ಮಹಾಯೋಜನೆ ಸಾಕಾರಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಆರಂಭಿಕ ಹಂತದ ಕೆಲಸಗಳು ನಡೆದಿವೆ. ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಳ್ಳಲಾಗಿದೆ. ಬಹುಚರ್ಚಿತ ಉರ್ವ ಮಾರುಕಟ್ಟೆ ಸಂಕೀರ್ಣದ ಉಸ್ತುವಾರಿಯನ್ನು ಪಾಲಿಕೆಗೆ ವಹಿಸಲು ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಶೀಘ್ರ ಹಸ್ತಾಂತರ ಪ್ರಕ್ರಿಯೆಯೂ ನಡೆಯಲಿದೆ ಎಂದರು.
ಸದಸ್ಯರಾದ ರಾಧಾಕೃಷ್ಣ, ಕವಿತಾ ಪೈ, ಜಯಾನಂದ, ನಿರೇನ್‌ಜೈನ್, ಆಯುಕ್ತ ಡಾ.ಭಾಸ್ಕರ್ ಎನ್., ನಗರ ಯೋಜನಾಧಿಕಾರಿ ರಮೇಶ್ ಮೊದಲಾದವರಿದ್ದರು.
ನಾರಾಯಣಗುರು ವೃತ್ತ ಅಭಿವೃದ್ಧಿ
ಲೇಡಿಹಿಲ್ ಶಾಲೆ ಬಳಿಯ ನಾರಾಯಣಗುರು ವೃತ್ತ ಅಭಿವೃದ್ಧಿಗೆ ಭೂಮಿ ಪೂಜೆಗೆ ಜುಲೈ ೨೪ರಂದು ಬೆಳಗ್ಗೆ ೧೦ ಗಂಟೆಗೆ ಚಾಲನೆ ದೊರೆಯಲಿದ್ದು, ೪೦ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಈಗಾಗಲೇ ವಿನ್ಯಾಸ, ಮೂರ್ತಿ ಪರಿಕಲ್ಪನೆ, ಮಂಟಪ ನಿರ್ಮಾಣಕ್ಕೆ ಸಂಬಂಧಿಸಿದದಂತೆ ಯೋಜನೆಯ ಪೂರ್ವ ಸಿದ್ಧತೆಗಳು ನಡೆದಿದ್ದು, ದಸರಾ ಸಂದರ್ಭ ಲೋಕಾರ್ಪಣೆಗೆ ಉದ್ದೇಶಿಸಲಾಗಿದೆ. ವೃತ್ತದಿಂದ ಕೊಟ್ಟಾರಚೌಕಿ ವರೆಗಿನ 2.5 ಕಿ.ಮೀ. ರಸ್ತೆಯನ್ನು ಅಂದಗೊಳಿಸುವ ಕಾಮಗಾರಿಗೂ ಅದೇ ದಿನ ಚಾಲನೆ ಸಿಗಲಿದೆ ಎಂದು ರವಿಶಂಕರ ಮಿಜಾರು ತಿಳಿಸಿದ್ದಾರೆ.







