ಜು.23, 24ರಂದು ದಾವಣಗೆರೆಯಲ್ಲಿ ರಾಜ್ಯ ಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನ

(ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿರುವ ಸ್ವಾಗತ ಸಮಿತಿಯ ಪ್ರಮುಖರು)
ದಾವಣಗೆರೆ: ನಾಲ್ಕು ದಶಕಗಳ ನಂತರ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಜುಲೈ 23 ಮತ್ತು 24ರಂದು ರಾಜ್ಯ ಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಬಿ.ಎನ್. ಮಲ್ಲೇಶ್ ತಿಳಿಸಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು . 23 ರಂದು ಬೆಳಗ್ಗೆ 10.30 ಕ್ಕೆ ಸಾಹಿತಿ ಡಾ. ಜಿ. ರಾಮಕೃಷ್ಣ ಚಾಲನೆ ನೀಡುವರು. ಪ್ರೊ. ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸುವರು. ಮಾವಳ್ಳಿ ಶಂಕರ್, ಬಿ.ಎಂ. ಹನೀಫ್, ಸುಕನ್ಯಾ, ಮಾರುತಿ, ಪ್ರೊ. ಸಿ.ವಿ ಪಾಟೀಲ್ ಇತರರು ಭಾಗವಹಿಸುವರು ಎಂದು ಹೇಳಿದರು.
ನಂತರ ಸಾಮಾಜಿಕ ಸಾಂಸ್ಕೃತಿಕ ಮೌಲ್ಯಗಳು ಮತ್ತು ಮಹಿಳೆ, ಕನ್ನಡ ಸಾಹಿತ್ಯದಲ್ಲಿ ಸಮಾನತೆ ಮತ್ತು ಸಹಿಷ್ಣುತೆ... ವಿಷಯ ಕುರಿತಾದ ವಿಚಾರಗೋಷ್ಠಿ ನಡೆಯಲಿವೆ. ಸಮ್ಮೇಳನದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವರು. ಎಲ್ಲರಿಗೂ ಉಚಿತವಾಗಿ ಊಟೋಪಚಾರ, ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ಜು 24 ರಂದು ಭಾನುವಾರ ಮೂರು ಗೋಷ್ಠಿ ಮತ್ತು ಸಮಾರೋಪ ನಡೆಯಲಿದೆ. ಸಮಕಾಲೀನ ಸನ್ನಿವೇಶ, ಹೊಸ ಪೀಳಿಗೆಯ ನೋಟ, ಕರ್ನಾಟಕ ಜನ ಚಳವಳಿ ಹಾಗೂ ಶಿಕ್ಷಣ ಕ್ಷೇತ್ರದ ಸ್ಥಿತಿಗತಿ ಬಗ್ಗೆ ಗೋಷ್ಠಿ ನಡೆಯಲಿವೆ ಎಂದು ತಿಳಿಸಿದರು.
ಸಂಜೆ 5 ಕ್ಕೆ ಸಮಾರೋಪದಲ್ಲಿ ರಾಜ್ಯಸಭೆಯ ಮಾಜಿ ಸದಸ್ಯ ಡಾ.ಎಲ್. ಹನುಮಂತಯ್ಯ ಸಮಾರೋಪ ನುಡಿಗಳಾ ಡುವರು. ವಿಶ್ರಾಂತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆ ವಹಿಸುವರು. ಡಾ. ಎಚ್. ವಿಶ್ವನಾಥ, ಭಕ್ತರಹಳ್ಳಿ ಕಾಮರಾಜ್ ಇತರರು ಭಾಗವಹಿಸುವರು ಎಂದು ತಿಳಿಸಿದರು.
ಆರ್.ಜಿ. ಹಳ್ಳಿ ನಾಗರಾಜ್ ಬರೆದಿರುವ ಮತ್ತು ಬರಗೂರು ರಾಮಚಂದ್ರಪ್ಪ ಅವರ ಪುಸ್ತಕ ಬಿಡುಗಡೆ ಆಗಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿ ಯಲ್ಲಿ ಪ್ರೊ. ಎ.ಬಿ. ರಾಮಚಂದ್ರಪ್ಪ, ಎಂ.ಟಿ. ಸುಭಾಶ್ಚಂದ್ರ, ನ್ಯಾಯವಾದಿಗಳಾದ ಎಲ್.ಎಚ್. ಅರುಣ್ ಕುಮಾರ್, ಅನೀಸ್ ಪಾಷ ಉಪಸ್ಥಿತರಿದ್ದರು.







