ಉಡುಪಿ ಜಿಲ್ಲೆಯಲ್ಲಿ ಮಳೆ ದುರ್ಬಲ; 22 ಮಳೆಹಾನಿ ಪ್ರಕರಣ

ಉಡುಪಿ : ಜಿಲ್ಲೆಯಲ್ಲಿ ಮುಂಗಾರು ಇನ್ನಷ್ಟು ದುರ್ಬಲಗೊಂಡಿದೆ. ಆದರೆ ಇಂದು ಸಹ ದಿನವಿಡೀ ಮೋಡದ ವಾತಾವರಣ ಕಂಡುಬಂದಿತ್ತು. ಆಗಾಗ ಅಲ್ಪ ಪ್ರಮಾಣದ ಮಳೆ ಸುರಿಯುತ್ತಿತ್ತು.
ಜಿಲ್ಲೆಯಲ್ಲಿ ಇಂದು ಸಹ ಒಟ್ಟು ೨೨ ಮಳೆ ಹಾನಿ ಪ್ರಕರಣಗಳು ವರದಿಯಾಗಿದ್ದು, ಒಟ್ಟು ೧೦.೯೦ ಲಕ್ಷರೂ. ನಷ್ಟವಾಗಿರುವ ವರದಿ ಬಂದಿದೆ. ಕುಂದಾಪುರ ತಾಲೂಕಿನಲ್ಲಿ ೧೧, ಬ್ರಹ್ಮಾವರ ತಾಲೂಕಿನಲ್ಲಿ ಏಳು, ಬೈಂದೂರು ತಾಲೂಕಿನಿಂದ ನಾಲ್ಕು ಪ್ರಕರಣಗಳು ವರದಿಯಾಗಿವೆ.
ಕುಂದಾಪುರ ತಾಲೂಕು ಕೋಟೇಶ್ವರದ ಪಾರ್ವತಿ ಎಂಬವರ ವಾಸ್ತವ್ಯದ ಪಕ್ಕಾ ಮನೆಗೆ ಭಾಗಶ: ಹಾನಿಯಾಗಿದ್ದು ೧.೭೫ ಲಕ್ಷ ರೂ. ನಷ್ಟವಾಗಿದೆ. ಕೊರ್ಗಿಯ ಚೊಣ ಎಂಬವರ ಮನೆಗೆ ೯೦,೦೦೦, ಮರವಂತೆಯ ಮಹಮ್ಮದ್ ಶರೀಫ್ ಎಂಬವರ ಮನೆಗೆ ೬೦ ಸಾವಿರ ರೂ., ಹೆರೆಂಜಾಲು ಗಿರಿಜ ಎಂಬವರ ಮನೆಗೆ ೬೫ ಸಾವಿರ ರೂ.ನಷ್ಟವಾಗಿರುವ ಬಗ್ಗೆ ವರದಿಯಾಗಿದೆ.
ಹಳ್ನಾಡಿನ ಜ್ಯೋತಿ ಶೆಟ್ಟಿ ಎಂಬವರ ಮನೆ ಸಂಪೂರ್ಣ ಹಾನಿಯಾಗಿದ್ದು, ೧.೨೦ ಲಕ್ಷ ರೂ., ಹಿಲಿಯಾಣದ ನಾಪ್ಪ ಕುಲಾಲರ ಮನೆ ಗೋಡೆ ಭಾಗಶ: ಕುಸಿದು ೬೦ ಸಾವಿರ ಹಾಗೂ ಲಕುಮಾಬಾಯಿ ಅವರ ಮನೆಗೆ ಕುಸಿದು ೬೦ಸಾವಿರ ರೂ.ನಷ್ಟವಾಗಿದೆ.
ಸಿದ್ಧಾಪುರದ ಬಚ್ಚು ಕುಲಾಲರ ಜಾನುವಾರು ಕೊಟ್ಟಿಗೆ ಶಂಕರನಾರಾಯಣದ ಮಂಜ ನಾಯ್ಕರ ಕೊಟ್ಟಿಗೆಗೆ ಭಾಗಶ: ಹಾನಿಯಾಗಿದ್ದು ತಲಾ ೫೦ ಸಾವಿರ ರೂ.ನಷ್ಟದ ಅಂದಾಜು ಮಾಡಲಾಗಿದೆ.ಹಕ್ಲಾಡಿಯ ಸೋಮನಾಥ ಎಂಬವರ ಮನೆಗೂ ೫೦ ಸಾವಿರ ರೂ.ನಷ್ಟವಾಗಿದೆ.







