ಜು.23ರಂದು ಮುಕುಂದ ಕೃಪಾದ ಸ್ವರ್ಣ ಮಹೋತ್ಸವಕ್ಕೆ ಚಾಲನೆ
ಉಡುಪಿ, ಜು.೨೦: ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದ ಬಳಿಯಲ್ಲಿ ಮಣಿಪಾಲ ಅಕಾಡೆಮಿಯಿಂದ ಸಂಗೀತ ಶಾಲೆಯಾಗಿ ಪ್ರಾರಂಭಗೊಂಡು ಜನರ ಬೇಡಿಕೆಯಂತೆ ಆಂಗ್ಲಮಾಧ್ಯಮ ಶಾಲೆಯಾಗಿ ಪರಿವರ್ತನೆಯಾದ ಮುಕುಂದಾ ಕೃಪಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಸ್ವರ್ಣ ಮಹೋತ್ಸವ ಸಮಾರಂಭಕ್ಕೆ ಜು.೨೩ರಂದು ಚಾಲನೆ ನೀಡಲಾಗುವುದು ಎಂದು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷ ಟಿ.ರಂಗ ಪೈ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಲೆಯ ಸಂಸ್ಥಾಪಕರ ದಿನಾಚರಣೆ ಹಾಗೂ ಸ್ವರ್ಣಮಹೋತ್ಸವ ಆಚರಣೆಯ ಉದ್ಘಾಟನಾ ಸಮಾರಂಭ ಜು.೨೩ರ ಅಪರಾಹ್ನ ೨:೩೦ಕ್ಕೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದರು.
ಪರ್ಯಾಯ ಕೃಷ್ಣಾಪುರ ಮಠದ ಶ್ರೀವಿದ್ಯಾಸಾಗರ ತೀರ್ಥ ಸ್ವಾಮೀಜಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಡಾ.ಟಿಎಂಎ ಪೈ ಫೌಂಡೇಷನ್‌ನ ಕಾರ್ಯದರ್ಶಿ ಟಿ.ಅಶೋಕ್ ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಲೆಯ ಹಳೆ ವಿದ್ಯಾರ್ಥಿಗಳಾ ಶಾಸಕ ಕೆ.ರಘುಪತಿ ಭಟ್, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಉಡುಪಿ ಬಿಇಓ ಅಶೋಕ ಕಾಮತ್ ಭಾಗವಹಿಸಲಿದ್ದು, ಪ್ರಶಸ್ತಿ ವಿಜೇತ ಶಿಕ್ಷಕ ಕುದಿ ವಸಂತ ಶೆಟ್ಟಿ ಮುಖ್ಯ ಅತಿಥಿಯಾಗಿರುವರು ಎಂದರು.
ಸ್ವರ್ಣ ಮಹೋತ್ಸವ ಕಾರ್ಯಕ್ರಮಗಳು ಮುಂದಿನ ಒಂದು ವರ್ಷ ಕಾಲ ನಡೆಯಲಿದೆ. ಇದರಲ್ಲಿ ಪ್ರತಿ ತಿಂಗಳು ಕಾರ್ಯಕ್ರಮಗಳನ್ನು ಆಯೋಜಿಸಲಾ ಗುತ್ತದೆ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಸುಜಾತ ಶಾಂತರಾಮ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿಯ ಕರುಣಾಕರ ಬಂಗೇರ, ವಾದಿರಾಜ, ಗಿರೀಶ್ ಭಟ್ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯಿನಿ ಪ್ರಭಾವತಿ ಎಸ್.ಅಡಿಗ ಉಪಸ್ಥಿತರಿದ್ದರು.







