ಕನಕದಾಸರ ಚಿಂತನೆಗಳ ಸಮಗ್ರ ಅಧ್ಯಯನ ಇಂದಿನ ಅಗತ್ಯತೆ: ಡಾ.ಎಕ್ಕಾರು

ಉಡುಪಿ : ಕನಕದಾಸರ ಚಿಂತನೆಗಳ ಸಮಗ್ರ ಅಧ್ಯಯನ ಹಾಗೂ ಅವುಗಳ ಚಿಂತನೆ ಇಂದಿನ ಅಗತ್ಯತೆಯಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಹಾಗೂ ಜಾನಪದ ತಜ್ಞ ಡಾ.ಗಣನಾಥ ಎಕ್ಕಾರು ಹೇಳಿದ್ದಾರೆ.
ಮಣಿಪಾಲ ಮಾಹೆಯ ಕನಕದಾಸ ಅಧ್ಯಯನ ಸಂಶೋಧನ ಪೀಠ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕೋಟೇಶ್ವರ ಇವುಗಳ ಸಹಯೋಗದೊಂದಿಗೆ ವಿಸ್ತರಣಾ ಉಪನ್ಯಾಸ ಮಾಲಿಕೆಯ ಉದ್ಘಾಟನೆ ಹಾಗೂ ಪ್ರಥಮ ಉಪನ್ಯಾಸದಲ್ಲಿ ಅವರು ‘ಕನಕದಾಸರ ಕೃತಿಗಳ ಪ್ರಸ್ತುತತೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡುತಿದ್ದರು.
ಕನಕದಾಸರು ಸಮಾಜದಲ್ಲಿನ ಜಾತಿ ಸಂಘರ್ಷದ ಬಗ್ಗೆ ಹೇಳುತ್ತಾ ಸಾಮಾಜಿಕ ಸಾಮರಸ್ಯವನ್ನು ಕಾಪಾಡಬೇಕಾದ ಅವಶ್ಯಕತೆಯನ್ನು ಮನಗಾಣಿಸಿದರು. ಅದೇ ರೀತಿ ಬಿ.ಆರ್.ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ನಮ್ಮ ಸಂವಿಧಾನವೂ ಅದನ್ನೇ ಪ್ರತಿಪಾದಿಸುತ್ತದೆ ಎಂದು ಡಾ.ಗಣನಾಥ ಎಕ್ಕಾರು ನುಡಿದರು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜೇಂದ್ರ ನಾಯಕ್ ವಹಿಸಿ ಮಾತನಾಡಿ ದರು.
ಕನಕದಾಸ ಅಧ್ಯಯನ ಸಂಶೋಧನ ಪೀಠದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಪ್ರೇಮಲಾಕ್ಷಿ ವಂದಿಸಿ, ಕನ್ನಡ ಉಪನ್ಯಾಸಕ ಚಂದ್ರ ಜಪ್ತಿ ಕಾರ್ಯಕ್ರಮ ನಿರೂಪಿಸಿದರು.