ಕೆನಡಾ: ಚರ್ಚ್ ವಸತಿಶಾಲೆಗಳಲ್ಲಿ ಮಕ್ಕಳ ವಿರುದ್ಧದ ದೌರ್ಜನ್ಯ ಪ್ರಕರಣ: ಕ್ಷಮೆಯಾಚಿಸಲಿರುವ ಪೋಪ್ ಫ್ರಾನ್ಸಿಸ್

ಒಟ್ಟಾವ, ಜು.20: ಕೆನಡಾದ ಸ್ಥಳೀಯ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಮಸ್ಕ್‌ವಸಿಸ್ ನಗರದಲ್ಲಿನ ವಸತಿ ಶಾಲೆಯಲ್ಲಿ ದಶಕಗಳ ಹಿಂದೆ ನಡೆದಿದ್ದ ಮಕ್ಕಳ ವಿರುದ್ಧದ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿ ಪೋಪ್ ಫ್ರಾನ್ಸಿಸ್ ಕ್ಷಮೆಯಾಚಿಸಲಿದ್ದಾರೆ ಎಂದು ವರದಿಯಾಗಿದೆ. ಪಶ್ಚಿಮ ಕೆನಡಾದ ಪ್ರಯರೀಸ್ ವಲಯದಲ್ಲಿರುವ ಮಸ್ಕ್‌ವಸಿಸ್‌ನ ‘ಎರ್ಮಿನೆಸ್ಕಿನ್ ಇಂಡಿಯನ್ ರೆಸಿಡೆನ್ಶಿಯಲ್ ಸ್ಕೂಲ್’ಗೆ ಜುಲೈ 25ರಂದು ಪೋಪ್ ಭೇಟಿ ನೀಡುವ ಕಾರ್ಯಕ್ರಮವಿದೆ.
ಈ ಶಾಲೆ ಸೇರಿದಂತೆ ಕೆನಡಾದ ವಿವಿಧೆಡೆ ಚರ್ಚ್‌ಗಳ ಆಡಳಿತಕ್ಕೆ ಒಳಪಟ್ಟ 139 ಬೋರ್ಡಿಂಗ್ ಶಾಲೆಗಳಿದ್ದವು. ಇಲ್ಲಿ ಸ್ಥಳೀಯ ಇನ್ಯೂಟ್ ಮತ್ತು ಮೆಟಿಸ್ ಸಮುದಾಯದ ಸುಮಾರು 1,50,000 ಮಕ್ಕಳಿದ್ದು ಇವರನ್ನು ಕುಟುಂಬ, ಭಾಷೆ ಮತ್ತು ಸಂಸ್ಕೃತಿಯಿಂದ ಪ್ರತ್ಯೇಕಿಸಲಾಗಿತ್ತು. ಹಲವರು ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರಿಂದ ದೈಹಿಕ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದರು. ಕಾಯಿಲೆ, ಅಪೌಷ್ಟಿಕತೆ, ನಿರ್ಲಕ್ಷ್ಯಕ್ಕೆ ಒಳಗಾದ ಸಾವಿರಾರು ಮಕ್ಕಳು ಮೃತಪಟ್ಟಿದ್ದರು ಎಂದು ನಂಬಲಾಗಿದೆ. ಈ ಶಾಲೆಗಳನ್ನು 1976ರಲ್ಲಿ ಮುಚ್ಚಲಾಗಿದೆ.
ಭೂತಕಾಲದ ಈ ಕ್ರೂರ ವಿಷಯ ಹೆಚ್ಚು ಪ್ರಚಾರಕ್ಕೆ ಬಂದಿರಲಿಲ್ಲ. ಆದರೆ ಇತ್ತೀಚೆಗೆ ಶಾಲೆಯ ಆವರಣದಲ್ಲಿ ಪತ್ತೆಯಾದ ಕೆಲವು ಗೋರಿಗಳಲ್ಲಿ ನೂರಾರು ಮಕ್ಕಳ ದೇಹದ ಅವಶೇಷ ಪತ್ತೆಯಾಗುವುದರೊಂದಿಗೆ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ ಮತ್ತು ಸರಕಾರ ಮತ್ತು ಚರ್ಚ್‌ಗಳು ಅವರನ್ನು ಹೇಗೆ ರಾಷ್ಟ್ರೀಯ ಪ್ರಜ್ಞೆಯಲ್ಲಿ ನರಳುವಂತೆ ಮಾಡಿವೆ ಎಂಬ ವಾಸ್ತವವನ್ನು ತೆರೆದಿಟ್ಟಿದೆ.
ದಶಕಗಳಿಂದ ಸಮುದಾಯದ ಮನದಲ್ಲಿ ಆಘಾತವು ಉಳಿದುಕೊಂಡಿದೆ. ಒಂದು ಶತಮಾನದ ನಿಂದನೆಯಲ್ಲಿ ಚರ್ಚ್‌ನ ಪಾತ್ರಕ್ಕಾಗಿ ಕ್ಷಮೆ ಯಾಚಿಸಲು ಪೋಪ್ ಆಗಮಿಸುವುದು ಈ ಪ್ರಕರಣನ್ನು ಮರೆತುಬಿಡಲು ನೆರವಾಗಬಹುದು. ಸಂತ್ರಸ್ತ ಮಕ್ಕಳಲ್ಲಿ ಈಗಲೂ ಬದುಕಿರುವ ಕೆಲವರಲ್ಲಿ ಪೋಪ್ ಕ್ಷಮೆಯಾಚನೆ ಜೀವನದಲ್ಲಿ ಮುಂದುವರಿಯಲು ನೆರವಾಗಬಹುದು ಎಂದು ಎರ್ಮಿನೆಸ್ಕಿನ್ ಕ್ರೀ ನೇಷನ್ ಸಮುದಾಯದ ಮುಖ್ಯಸ್ಥ ರ್ಯಾಂಡಿ ಎರ್ಮಿನೆಸ್ಕಿನ್‌ರನ್ನು ಉಲ್ಲೇಖಿಸಿ ಎಎಫ್‌ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
ಪೋಪ್ ಅವರ ಕ್ಷಮೆಯಾಚನೆ ವ್ಯಾಪಕ ಪರಿಣಾಮ ಬೀರಲಿದೆ ಎಂದು ಸ್ಥಳೀಯರ ಹಕ್ಕುಗಳ ಕಾರ್ಯಕರ್ತ ವಿಲ್ಟನ್ ಲಿಟ್ಲ್‌ಚೈಲ್ಡ್ ಹೇಳಿದ್ದಾರೆ. ಕಳೆದ ಎಪ್ರಿಲ್‌ನಲ್ಲಿ ಅವರ ನೇತೃತ್ವದ ನಿಯೋಗ ವ್ಯಾಟಿಕನ್‌ಗೆ ತೆರಳಿ ಪೋಪ್‌ರನ್ನು ಭೇಟಿಯಾಗಿ ಕೆನಡಾಕ್ಕೆ ಆಗಮಿಸುವಂತೆ ಒತ್ತಡ ಹಾಕಿತ್ತು. ಒಮ್ಮೆ ಕ್ಷಮೆ ಯಾಚಿಸಿದರೆ ಜನರಲ್ಲಿ ನಿರಾಳತೆ ಮತ್ತು ನೆಮ್ಮದಿಯ ಭಾವನೆ ಮೂಡುತ್ತದೆ ಮತ್ತು ಅವರೊಂದು ತೀರ್ಮಾನಕ್ಕೆ ಬರುತ್ತಾರೆ ಎಂದು 78 ವರ್ಷದ ವಿಲ್ಟನ್ ಹೇಳಿದ್ದಾರೆ. ಬಾಲ್ಯಕಾಲದಲ್ಲಿ ವಿಲ್ಟನ್ ಕೂಡಾ 14 ವರ್ಷ ವಸತಿ ಶಾಲೆಯಲ್ಲಿದ್ದರು.







