ವಿಶ್ವದ ಪ್ರಬಲ ಪಾಸ್ಪೋರ್ಟ್ಗಳ ಪಟ್ಟಿಯಲ್ಲಿ ಭಾರತಕ್ಕೆ 87ನೇ ಸ್ಥಾನ

ಸಾಂದರ್ಭಿಕ ಚಿತ್ರ (PTI)
ಲಂಡನ್, ಜು.20: ಜಪಾನ್, ಸಿಂಗಾಪುರ ಮತ್ತು ದಕ್ಷಿಣ ಕೊರಿಯಾದ ಪಾಸ್ಪೋರ್ಟ್ಗಳು ವಿಶ್ವದ ಅತ್ಯಂತ ಪ್ರಬಲ ಪಾಸ್ಪೋರ್ಟ್ಗಳಾಗಿವೆ ಎಂದು ಬ್ರಿಟನ್ ಮೂಲದ ಹೆನ್ಲೆ ಆ್ಯಂಡ್ ಪಾರ್ಟ್ನಸ್ನ ಪಾಸ್ಪೋರ್ಟ್ ಸೂಚ್ಯಂಕ ವರದಿ ಮಾಡಿದೆ. ಭಾರತದ ಪಾಸ್ಪೋರ್ಟ್ 87ನೇ ಸ್ಥಾನ ಪಡೆದಿದೆ. ಕೊರೋನ ಸಾಂಕ್ರಾಮಿಕಕ್ಕೂ ಮೊದಲಿನ ಅವಧಿಯಲ್ಲಿ ಯುರೋಪಿಯನ್ ಯೂನಿಯನ್ನ ಪಾಸ್ಪೋರ್ಟ್ಗಳು ಅಗ್ರಸ್ಥಾನದಲ್ಲಿದ್ದರೆ ಇದೀಗ ಪೂರ್ವಏಶ್ಯಾದ ದೇಶಗಳು ಈ ಸ್ಥಾನಕ್ಕೆ ಜಿಗಿದಿವೆ.
ಜಪಾನ್ನ ಪಾಸ್ಪೋರ್ಟ್ 193 ದೇಶಗಳಿಗೆ ತೊಂದರೆ- ಮಕ್ತ ಪ್ರವೇಶದ ಅವಕಾಶವನ್ನು ಒದಗಿಸುತ್ತದೆ. ಸಿಂಗಾಪುರ ಮತ್ತು ದಕ್ಷಿಣ ಕೊರಿಯಾ ದೇಶಗಳ ಪಾಸ್ಪೋರ್ಟ್ ಬಳಸಿ 192 ದೇಶಗಳಿಗೆ ಯಾವುದೇ ತೊಂದರೆ ಇಲ್ಲದೆ ಪ್ರಯಾಣಿಸಬಹುದು. 187 ದೇಶಗಳಿಗೆ ಪ್ರಯಾಣ ಸುಗಮವಾಗಿಸುವ ಬ್ರಿಟನ್ನ ಪಾಸ್ಪೋರ್ಟ್ 6ನೇ ಸ್ಥಾನ, 186 ದೇಶಗಳಿಗೆ ಪ್ರಯಾಣ ಸುಗಮವಾಗಿಸುವ ಅಮೆರಿಕದ ಪಾಸ್ಪೋರ್ಟ್ 7ನೇ ಸ್ಥಾನ ಪಡೆದಿದೆ. ರಶ್ಯದ ಪಾಸ್ಪೋರ್ಟ್ನಿಂದ 119 ದೇಶಗಳಿಗೆ ಸುಲಭವಾಗಿ ಪ್ರಯಾಣಿಸಬಹುದಾಗಿದ್ದು 50ನೇ ಸ್ಥಾನ , ಚೀನಾದ ಪಾಸ್ಪೋರ್ಟ್ನಿಂದ 80 ದೇಶಗಳಿಗೆ ಸುಲಭ ಪ್ರಯಾಣ ಸಾಧ್ಯವಿದ್ದು 69ನೇ ಸ್ಥಾನ , ಭಾರತ 87ನೇ ಸ್ಥಾನ , ಕೇವಲ 27 ದೇಶಗಳಿಗೆ ಸುಲಭ ಪ್ರಯಾಣ ಸಾಧ್ಯವಾಗಿಸುವ ಅಫ್ಘಾನ್ನ ಪಾಸ್ಪೋರ್ಟ್ ಅಂತಿಮ ಸ್ಥಾನದಲ್ಲಿದೆ.
ಕೊರೋನ ಸಾಂಕ್ರಾಮಿಕದ ಹೊಡೆತದಿಂದ ನಮ್ಮ ಪ್ರಯಾಣ ಸ್ವಾತಂತ್ರ್ಯಗಳ ಚೇತರಿಕೆ ಮತ್ತು ಪುನಃಸ್ಥಾಪನೆಗೆ ಮತ್ತು ಸರಿಪಡಿಸುವುದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೆನ್ಲೆ ಆ್ಯಂಡ್ ಪಾರ್ಟ್ನಸ್ನ ಅಧ್ಯಕ್ಷ ಕ್ರಿಶ್ಚಿಯನ್ ಕಯಿಲಿನ್ ಹೇಳಿದ್ದಾರೆ. 2017ರವರೆಗೂ ವಿಶ್ವದ ಅಗ್ರ 10 ಪ್ರಬಲ ಪಾಸ್ಪೋರ್ಟ್ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದ ಏಶ್ಯಾದ ದೇಶಗಳು ಕೊರೋನೋತ್ತರ ಅವಧಿಯಲ್ಲಿ ಗಮನಾರ್ಹ ಸುಧಾರಣೆ ದಾಖಲಿಸಿವೆ. ಯುರೋಪ್ನ ಪ್ರಾಬಲ್ಯ ಕ್ರಮೇಣ ಕ್ಷೀಣಿಸುತ್ತಿದೆ. ಅತೀ ಹೆಚ್ಚಿನ ವೀಸಾ ಮುಕ್ತ ಪ್ರವೇಶಾವಕಾಶ ಅಥವಾ ವೀಸಾ- ಆನ್ ಅರೈವಲ್ ವ್ಯವಸ್ಥೆ ಹೊಂದಿರುವ ಪಾಸ್ಪೋರ್ಟ್ಗಳನ್ನು ಪ್ರಬಲ ಪಾಸ್ಪೋರ್ಟ್ ಎಂದು ಪರಿಗಣಿಸಲಾಗಿದೆ.