ಕಸ್ತೂರಿ ರಂಗನ್ ವರದಿ ಜಾರಿಯ ಅಧಿಸೂಚನೆಯನ್ನು ಕೈಬಿಡಬೇಕು: ಐವನ್ ಡಿಸೋಜ

ಮಂಗಳೂರು : ಕಸ್ತೂರಿ ರಂಗನ್ ವರದಿ ಜಾರಿ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪರಿಸರ ಇಲಾಖೆಯು ಪಶ್ಚಿಮ ಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಎಂದು ಘೋಷಿಸಿ ಅಧಿಸೂಚನೆ ಹೊರಡಿಸಿದೆ. ಇದರಿಂದಾಗಿ ಕಾಡಿನ ಬದಿಯಲ್ಲಿ ವಾಸಿಸುತ್ತಿರುವ ಲಕ್ಷಾಂತರ ಮಂದಿ ಬೀದಿಪಾಲಾಗಲಿದ್ದಾರೆ. ಕೂಡಲೆ ಈ ಅಧಿಸೂಚನೆಯನ್ನು ಕೈಬಿಡಬೇಕು ಎಂದು ಮಾಜಿ ಎಂಎಲ್ಸಿ ಐವನ್ ಡಿಸೋಜ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೭ರಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ಕೇಂದ್ರಕ್ಕೆ ಪತ್ರ ಬರೆದಿತ್ತು. ಯಾವುದು ಪರಿಸರ ಸೂಕ್ಷ್ಮ ಪ್ರದೇಶ ಎನ್ನುವ ಬಗ್ಗೆ ಪ್ರಾಯೋಗಿಕ ವರದಿ ಪಡೆದು ನಂತರ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿತ್ತು. ಬಿಜೆಪಿ ಸಚಿವರು, ಸಂಸದರೆಲ್ಲ ಕಸ್ತೂರಿ ರಂಗನ್ ಜಾರಿಗೊಳಿಸಲು ಬಿಡಲ್ಲ ಎಂದೇ ಹೇಳಿಕೆ ನೀಡಿದ್ದರು. ಈಗ ಅಧಿಸೂಚನೆ ಹೊರಡಿಸಿದ ಬಳಿಕ ಯಾರೂ ಮಾತನಾಡುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದ ೬೦ ಸಾವಿರ ಚ.ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮವನ್ನಾಗಿ ಘೋಷಿಸಿದೆ. ಇದರಲ್ಲಿ ಕರ್ನಾಟಕದ ೨೧ ಸಾವಿರ ಚದರ ಕಿ.ಮೀ. ಪ್ರದೇಶ ಒಳಗೊಂಡಿದೆ. ದ.ಕ. ಜಿಲ್ಲೆಯಲ್ಲಿ ೪೩ ಗ್ರಾಮಗಳು ಪರಿಸರ ಸೂಕ್ಷ್ಮ ಎಂದು ಘೋಷಣೆಯಾಗಿದೆ. ರಾಜ್ಯದ ೧೫೬೫ ಗ್ರಾಮಗಳು ಇದರೊಳಗೆ ಅಡಕವಾಗಿದ್ದು, ಈ ಪ್ರದೇಶಗಳಿಂದ ಬರೋಬ್ಬರಿ ೧,೦೩,೬೭೪ ಅರ್ಜಿಗಳು ಅರಣ್ಯ ಹಕ್ಕು ಕಾಯ್ದೆಯಡಿ ಅಕ್ರಮ ಸಕ್ರಮಕ್ಕೆ ಸರ್ಕಾರಕ್ಕೆ ಸಲ್ಲಿಕೆಯಾಗಿವೆ. ಕೂಡಲೆ ಈ ಅರ್ಜಿಗಳನ್ನು ಇತ್ಯರ್ಥಪಡಿಸಿ ಅವರಿಗೆ ಹಕ್ಕುಪತ್ರ ನೀಡಬೇಕು ಎಂದು ಐವನ್ ಒತ್ತಾಯಿಸಿದರು.
ಕೇರಳದ ಸಂಸದರು ಗಟ್ಟಿಯಾಗಿ ಇದರ ವಿರುದ್ಧ ಧ್ವನಿ ಎತ್ತಿದ್ದರಿಂದ ಅಲ್ಲಿ ಕಸ್ತೂರಿ ರಂಗನ್ ವರದಿ ಜಾರಿ ಇಲ್ಲ. ಪ್ರಸ್ತುತ ಪಾರ್ಲಿಮೆಂಟ್ ಅಧಿವೇಶನ ನಡೆಯುತ್ತಿದ್ದರೂ ರಾಜ್ಯದ ೨೫ ಸಂಸದರು ಈ ವಿಚಾರದ ಬಗ್ಗೆ ಮಾತೇ ಆಡುತ್ತಿಲ್ಲ. ಕೂಡಲೆ ಈ ವಿಚಾರವನ್ನು ಅಧಿವೇಶನದಲ್ಲಿ ಚರ್ಚೆಗೆ ಕೈಗೆತ್ತಿಕೊಂಡು ಅಧಿಸೂಚನೆ ಕೈಬಿಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಹೋರಾಟ ಕೈಗೆತ್ತಿಕೊಳ್ಳಲಿದೆ. ರಾಜ್ಯದ ಪ್ರತಿ ಸಂಸದರ ಮನೆ ಎದುರು ಪ್ರತಿಭಟನೆ ಕೈಗೆತ್ತಿಕೊಳ್ಳಲಾಗುವುದು ಎಂದರು.
ಕಾಂಗ್ರೆಸ್ ಮುಖಂಡರಾದ ಹಬೀಬುಲ್ಲಾ, ಭಾಸ್ಕರ್, ಆಸ್ಟಿನ್ ಮತ್ತಿತರರಿದ್ದರು.