ಅಗ್ನೀಪಥ್ ಯೋಜನೆ ವಿರುದ್ಧ ಪ್ರತಿಭಟನೆ: 2 ಬಲಿ, 2,600 ಕ್ಕೂ ಅಧಿಕ ಬಂಧನ; ಸರ್ಕಾರ

ಹೊಸದಿಲ್ಲಿ: ಅಗ್ನಿಪಥ್ ಯೋಜನೆ ವಿರುದ್ಧದ ಆಂದೋಲನದ ವೇಳೆ ಇಬ್ಬರು ಸಾವನ್ನಪ್ಪಿದ್ದಾರೆ, 35 ಮಂದಿ ಗಾಯಗೊಂಡಿದ್ದಾರೆ ಮತ್ತು 2,642 ಮಂದಿಯನ್ನು ರೈಲ್ವೆ ಆವರಣದಿಂದ ಬಂಧಿಸಲಾಗಿದೆ ಎಂದು ರೈಲ್ವೆ ಇಲಾಖೆ ಬುಧವಾರ ಸಂಸತ್ತಿಗೆ ತಿಳಿಸಿದೆ.
ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, ವಿವಿಧ ಆಂದೋಲನಗಳ ಕಾರಣದಿಂದಾಗಿ ರೈಲು ಸೇವೆಗಳ ಅಡ್ಡಿಯಿಂದಾಗಿ ಪ್ರಯಾಣಿಕರಿಗೆ ನೀಡಲಾದ ಮರುಪಾವತಿಯ ಪ್ರತ್ಯೇಕ ಡೇಟಾವನ್ನು ನಿರ್ವಹಿಸಲಾಗಿಲ್ಲ ಎಂದು ತಿಳಿಸಿದ್ದಾರೆ. ಆದಾಗ್ಯೂ, ಜೂನ್ 14ರಿಂದ 22 ರವರೆಗೆ, ರೈಲುಗಳ ರದ್ದತಿಗಾಗಿ ಒಟ್ಟು 102.96 ಕೋಟಿ ರೂಪಾಯಿಗಳನ್ನು ಮರುಪಾವತಿ ಮಾಡಲಾಗಿದೆ ಎಂದು ಅವರು ಹೇಳಿದರು.
ಮುಷ್ಕರ ಮತ್ತು ಆಂದೋಲನಗಳಿಂದಾಗಿ 2019-20ರಲ್ಲಿ ರೈಲ್ವೆಗೆ 151 ಕೋಟಿ ರೂ., 2020-21ರಲ್ಲಿ 904 ಕೋಟಿ ರೂ. ಮತ್ತು 2021-22ರಲ್ಲಿ 62 ಕೋಟಿ ರೂ. ನಷ್ಟವಾಗಿದೆ ಎಂದು ಸಚಿವರು ಹೇಳಿದರು.
"ಈ ಪ್ರತಿಭಟನೆಯ ಸಂದರ್ಭದಲ್ಲಿ ಸಾವನ್ನಪ್ಪಿದ/ಗಾಯಗೊಂಡ ಪ್ರಯಾಣಿಕರಿಗೆ ಮತ್ತು ಅವರ ಕುಟುಂಬಗಳಿಗೆ ಯಾವುದೇ ಪರಿಹಾರವನ್ನು ನೀಡಲಾಗಿಲ್ಲ" ಎಂದು ಉತ್ತರದಲ್ಲಿ ತಿಳಿಸಲಾಗಿದೆ.
ರೈಲ್ವೆಗೆ ಸಂಭವಿಸಿದ ನಷ್ಟವನ್ನು ಸರಿದೂಗಿಸಲು ಇದುವರೆಗೆ ಯಾವುದೇ ವಸೂಲಿ ಮಾಡಲಾಗಿಲ್ಲ ಎಂದು ಸಚಿವರು ತಮ್ಮ ಉತ್ತರದಲ್ಲಿ ತಿಳಿಸಿದ್ದಾರೆ.