ಜಿಎಸ್ಟಿ ವಿರೋಧಿಸಿ ಕಾಂಗ್ರೆಸ್ ಬೃಹತ್ ಪ್ರತಿಭಟನೆ

ಬೆಂಗಳೂರು, ಜು.20: ಕೇಂದ್ರ ಸರಕಾರವು ದಿನನಿತ್ಯದ ಅಗತ್ಯ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸಿರುವ ಕ್ರಮ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.
ಬುಧವಾರ ನಗರದ ಬೆಂಗಳೂರು ದಕ್ಷಿಣ, ಕೇಂದ್ರ ಮತ್ತು ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿಗಳ ವತಿಯಿಂದ ಇಲ್ಲಿನ ಕೋರಮಂಗಲದಲ್ಲಿರುವ ಜಿಎಸ್ಟಿ ಕಚೇರಿ ಎದುರು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಕ್ಕಿ, ಮೊಸರು, ಹಾಲು ಸೇರಿದಂತೆ ಬಡ, ಮಧ್ಯಮವರ್ಗದ ಅಗತ್ಯಗಳನ್ನೇ ಗುರಿಯಾಗಿಸಿ ಕೇಂದ್ರ ಸರಕಾರ ತೆರಿಗೆ ಹೆಚ್ಚಿಸಿದೆ. ಹಿಂದೆ ಆಹಾರ ಧಾನ್ಯಗಳ ಮೇಲೆ ಯಾವುದೇ ತೆರಿಗೆ ಇರಲಿಲ್ಲ. ಈಗ ಅದಕ್ಕೂ ತೆರಿಗೆ ವಿಧಿಸುವ ನೀಚತನಕ್ಕೆ ಇಳಿದಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಹಣ್ಣು, ತರಕಾರಿಗಳನ್ನು ಬೇರ್ಪಡಿಸುವ ಉಪಕರಣಗಳ ಮೇಲಿನ ತೆರಿಗೆಯನ್ನು ಶೇ.5ರಿಂದ ಶೇ.18ಕ್ಕೆ ಏರಿಸಿದೆ. ಬಾವಿಗಳಿಂದ ನೀರೆತ್ತಲು ಬಳಸುವ ಸಬ್ ಮೆರಿನ್ ಪಂಪ್ ಹಾಗೂ ಮೋಟಾರ್‍ಗಳಿಗೆ ಶೇ.12ರಿಂದ 18ಕ್ಕೆ ಏರಿಕೆ ಮಾಡಲಾಗಿದೆ. ವಿದ್ಯಾರ್ಥಿಗಳು ಬಳಸುವ ಪರಿಕರಗಳಾದ ಅಟ್ಲಾಸ್, ಪೆನ್ಸಿಲ್, ಶಾರ್ಪ್‍ನರ್, ಮ್ಯಾಪ್, ಮುಂತಾದವುಗಳ ಮೇಲೆ ಶೇ.18ರಷ್ಟು ತೆರಿಗೆ ವಿಧಿಸಿ ವಿದ್ಯಾರ್ಥಿಗಳಿಂದಲೂ ಪ್ರಧಾನಿ ಮೋದಿ ಸರಕಾರ ಸುಲಿಗೆ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಶ್ರೀಮಂತ ಉದ್ಯಮಿಗಳಿಗೆ ಎನ್‍ಪಿಎ ರಿಯಾಯಿತಿ ನೀಡುವ ಸರಕಾರ ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡುತ್ತಿದೆ. ಈ ತೆರಿಗೆಯಿಂದಾಗಿ ಬಡವರಷ್ಟೇ ಅಲ್ಲ, ಮಧ್ಯಮವರ್ಗದವರ ಬದುಕೂ ಸಂಕಷ್ಟಕ್ಕೀಡಾಗಲಿದೆ. ಸ್ವಿಸ್ ಬ್ಯಾಂಕ್‍ನಲ್ಲಿರುವ ಕಪ್ಪು ಹಣ ತರುತ್ತೇವೆ, ನೋಟು ಅಮಾನ್ಯ ಮಾಡಿ ದೇಶದೊಳಗಿನ ಕಪ್ಪು ಹಣ ತರುತ್ತೇವೆ ಎಂದೆಲ್ಲ ಹೇಳಿ ಜನರಿಗೆ ತೊಂದರೆ ನೀಡಿದ್ದು ಬಿಟ್ಟರೆ ಕಪ್ಪು ಹಣ ತಂದಿದ್ದೆಲ್ಲಿ ಎಂಬುದು ಗೊತ್ತಾಗುತ್ತಿಲ್ಲ ಎಂದು ಪ್ರತಿಭಟನಾಕಾರರು ಟೀಕಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಹೆಚ್.ಎಂ ರೇವಣ್ಣ, ಮಾಜಿ ಸಂಸದ ವಿ.ಎಸ್ ಉಗ್ರಪ್ಪ, ಶಾಸಕರಾದ ಎನ್.ಎ ಹಾರಿಸ್, ಸೌಮ್ಯಾ ರೆಡ್ಡಿ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಬೆಂಗಳೂರಿನ ಮೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರುಗಳು ಸೇರಿದಂತೆ ಮತ್ತಿತರ ನಾಯಕರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.
ಆಸೆ ಪಡುವುದು ತಪ್ಪಲ್ಲ
ಪ್ರತಿಯೊಂದು ಸಮಾಜದ ಸಮಾವೇಶಗಳಲ್ಲಿ ಆಯಾ ಸಮಾಜದ ಬೆಂಬಲವನ್ನು ಕೇಳುವುದು ಸಹಜ. ಅದೇ ರೀತಿ ಪ್ರತಿಯೊಂದು ಸಮಾಜ ತಮ್ಮ ಸಮಾಜದವರು ಆಗಬೇಕು ಎಂದು ಅಪೇಕ್ಷಿಸುತ್ತಾರೆ. ಆಸೆ ಪಡುವುದು ತಪ್ಪಲ್ಲ. ಪಕ್ಷವನ್ನು ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು ಪ್ರಯತ್ನಿಸುತ್ತಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದ ನಂತರ ಶಾಸಕರು ಹಾಗೂ ಹೈಕಮಾಂಡ್ ಸೇರಿ ತೀರ್ಮಾನ ಕೈಗೊಳ್ಳಲಿದೆ.
-ರಾಮಲಿಂಗಾರಡ್ಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ
.jpg)







