ಮಾಜಿ ಸಚಿವ ಈಶ್ವರಪ್ಪ ವಿರುದ್ಧ ‘ಬಿ’ ರಿಪೋರ್ಟ್: ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ನಿ ಪ್ರತಿಕ್ರಿಯೆ

ಬೆಳಗಾವಿ: ಬೆಳಗಾವಿ ಮೂಲದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‍ಗೆ ಬಿ ರಿಪೋರ್ಟ್ ಸಲ್ಲಿಕೆಯಾಗಿದ್ದು, ಈ ಸಂಬಂಧ ಸಂತೋಷ್ ಪಾಟೀಲ್ ಅವರ ಪತ್ನಿ ರೇಣುಕಾ ಪ್ರತಿಕ್ರಿಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸಂತೋಷ್ ಪಾಟೀಲ್ ಮೃತಪಟ್ಟು ಮೂರು ತಿಂಗಳಾಗಿದ್ದರೂ ನಮಗೆ ನ್ಯಾಯ ಸಿಕ್ಕಿಲ್ಲ' ಎಂದು ಕಣ್ಣೀರು ಹಾಕಿದ್ದಾರೆ.
'ನನ್ನ ಪತಿ ಡೆತ್ ನೋಟ್ ನಲ್ಲಿ ಸ್ಪಷ್ಟವಾಗಿ ಬರೆದಿದ್ದಾರೆ. ಅದನ್ನು ಒಪ್ಪಿಕೊಳ್ಳಬೇಕಿತ್ತು. ಸಾಯುವ ವ್ಯಕ್ತಿ ಸುಳ್ಳು ಹೇಳುವುದಿಲ್ಲ, ಸತ್ಯವನ್ನೇ ಹೇಳಿದ್ದಾರೆ ಅದನ್ನ ಗಣನೆಗೆ ತೆಗೆದುಕೊಳ್ಳಬೇಕಿತ್ತು' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ನನ್ನ ಪತಿಯ ಮೊಬೈಲ್‌ನಲ್ಲಿ ಈಶ್ವರಪ್ಪ ವಿರುದ್ಧದ ಎಲ್ಲ ಸಾಕ್ಷ್ಯಗಳಿದ್ದವು. ಆದರೆ, ಪೊಲೀಸರು ಈವರೆಗೂ ಆ ಮೊಬೈಲ್ ನಮ್ಮ ಕೈಗೆ ಕೊಟ್ಟಿಲ್ಲ. ನನ್ನ ಪತಿಯ ಸಹೋದರ ತನಿಖಾಧಿಕಾರಿ ಹಾಗೂ ಎಸ್ಪಿಗೆ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಇದನ್ನೂ ತಿಳಿಸಿದ್ದೇನೆ’ ಎಂದರು.‘ಈ ಪ್ರಕರಣದಿಂದ 15 ದಿನಗಳಲ್ಲಿ ಹೊರಬರುತ್ತೇನೆ ಎಂದು ಈಶ್ವರಪ್ಪ ಅವರು ಹೇಳಿದ್ದರು. ಈಗ ‘ಬಿ’ ರಿಪೋರ್ಟ್ ಹಾಕಿದ್ದರಿಂದ ಅವರ ಮಾತು ನಿಜವೇ ಆಯಿತು ಅಲ್ಲವೇ?' ಎಂದೂ ಪ್ರಶ್ನಿಸಿದ್ದಾರೆ.







