ಬಿಬಿಎಂಪಿ ವಾರ್ಡ್ ಪುನರ್ ವಿಂಗಡನೆ: ವಾರ್ಡ್‍ಗಳ ಹಿಂದಿನ ಮೀಸಲಾತಿ-ಮಾಹಿತಿ ಸರಕಾರಕ್ಕೆ ಸಲ್ಲಿಕೆ

ಬೆಂಗಳೂರು, ಜು.20: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಾರ್ಡ್‍ಗಳನ್ನು 198 ವಾರ್ಡ್‍ಗಳಿಂದ 243 ವಾರ್ಡ್‍ಗಳಿಗೆ ಹೆಚ್ಚಿಸಲಾಗಿದ್ದು, ಪ್ರತಿ ವಾರ್ಡ್‍ಗೆ ಚುನಾಯಿತ ಪ್ರತಿನಿಧಿಗಳ ಆಯ್ಕೆಗಾಗಿ ಹಿಂದೆ ಅಳವಡಿಸಿಕೊಂಡಿದ್ದ ಮೀಸಲಾತಿ ಹಾಗೂ ಅಭ್ಯರ್ಥಿಗಳ ಪಟ್ಟಿಯನ್ನು ಸರಕಾರಕ್ಕೆ ನೀಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ 198 ವಾರ್ಡ್‍ಗಳಿಗೆ ಪ್ರಸಕ್ತ ವರ್ಷದ ಬಜೆಟ್ ಮಂಡನೆ ಮಾಡಲಾಗಿತ್ತು. ಈಗ ವಾರ್ಡ್‍ಗಳ ಸಂಖ್ಯೆ 243ಕ್ಕೆ ಏರಿಕೆ ಆಗಿದೆ. ಆದುದರಿಂದ ಪ್ರಸಕ್ತ ವರ್ಷದ ಬಜೆಟ್ ಅನ್ನು ಪರಿಷ್ಕರಿಸಿ 243 ವಾರ್ಡ್‍ಗಳಿಗೂ ಮರುಹಂಚಿಕೆ ಮಾಡಲಾಗಿದೆ. ಹಾಗಾಗಿ ಪ್ರತಿ ವಾರ್ಡ್‍ಗೂ ನಾಲ್ಕು ಕೋಟಿ ರೂ. ಅನುದಾನವನ್ನು ಮೀಸಲಿರಿಸಲಾಗಿದೆ. ರಾಜ್ಯ ಸರಕಾರದಿಂದ ಅನುದಾನ ಬರುವ ಸಾಧ್ಯತೆ ಇದೆ ಎಂದರು.
ಚುನಾವಣೆಗೆ ಸಂಬಂಧಿಸಿದಂತೆ ಹಿಂದೆ ಆಯ್ಕೆಯಾದ ಪ್ರತಿನಿಧಿ, ಮೀಸಲಾತಿ ಪಟ್ಟಿ ಸೇರಿ ಅಗತ್ಯ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಚುನಾವಣಾ ಆಯೋಗವು ಅದನ್ನು ಪರಿಶೀಲಿಸಿ, ಮೀಸಲಾತಿ ಪಟ್ಟಿಯನ್ನು ಸರಕಾರಕ್ಕೆ ಹಿಂತಿರುಗಿಸುತ್ತದೆ. ರಾಜ್ಯ ಸರಕಾರವು ಅದನ್ನು ಪಾಲಿಕೆಗೆ ಒಪ್ಪಿಸಿ, ಪ್ರಕಟಿಸುವಂತೆ ತಿಳಿಸುತ್ತದೆ. ಹಾಗಾಗಿ 243 ವಾರ್ಡ್‍ಗಳ ಮೀಸಲಾತಿ ಪಟ್ಟಿಯು ಸರಕಾರದ ಮಟ್ಟದಲ್ಲಿ ನಿರ್ಧಾರವಾಗುತ್ತದೆ. ಬಿಬಿಎಂಪಿಗೆ ನೂತನ ಮೀಸಲಾತಿ ಪಟ್ಟಿ ಬರುವವರೆಗೂ ಮಾಹಿತಿ ಸಿಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ವಾರ್ಡ್ ಪುನರ್ ವಿಂಗಡನೆಯಾದ ಕಾರಣ ಸಿಬ್ಬಂದಿ ಮತ್ತು ಕಟ್ಟಡಗಳ ಕೊರತೆ ಸಾಮಾನ್ಯವಾಗಿ ಕಂಡು ಬಂದಿದೆ. ಇದರ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರದ ಅನುಮೋದನೆ ದೊರೆಯುವವರೆಗೂ ಇರುವ ಸಿಬ್ಬಂದಿ ಮತ್ತು ಕಟ್ಟಡಗಳಲ್ಲೇ ಕಾರ್ಯನಿರ್ವಹಣೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.
ಬೇರೆ ರಾಜ್ಯಗಳಲ್ಲಿ ಮಂಕಿಪಾಕ್ಸ್ ಬಂದಿದೆ ಎಂದು ವರದಿ ಆಗಿದೆ. ಆದರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೂ ಮಂಕಿಪಾಕ್ಸ್ ರೋಗ ಕಂಡುಬಂದಿಲ್ಲ. ರಾಜ್ಯ ಸರಕಾರವು ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತದೆ. ಮಂಕಿಪಾಕ್ಸ್ ವಿಚಾರವಾಗಿ ಸಲಹಾ ಸಮಿತಿಯನ್ನು ಬಿಬಿಎಂಪಿ ನೇಮಕ ಮಾಡಿಕೊಂಡಿಲ್ಲ. ಆದರೆ ಸರಕಾರದ ನಿರ್ದೇಶನಗಳನ್ನು ಬಿಬಿಎಂಪಿ ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತದೆ ಎಂದರು.
'ದೂರು ದಾಖಲಾಗಲಿದೆ'
ವಿಜಯನಗರ ಹಾಗೂ ಗೋವಿಂದರಾಜನಗರ ಪ್ರದೇಶಗಳಲ್ಲಿ ಅನಧಿಕೃತವಾಗಿ ಫ್ಲೆಕ್ಸ್ ಹಾಗೂ ಬ್ಯಾನರ್‍ಗಳ ಅಳವಡಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅನಿಧಿಕೃತ ಫ್ಲೆಕ್ಸ್‍ಗಳನ್ನು ನಗರದಲ್ಲಿ ಅಳವಡಿಸುವಂತಿಲ್ಲ ಎಂದು ಈಗಾಗಲೇ ಪಾಲಿಕೆ ಸ್ಪಷ್ಟವಾಗಿ ಆದೇಶಿಸಿದೆ. ಆದರೆ ನಗರದಲ್ಲಿ ಫ್ಲೆಕ್ಸ್‍ಗಳನ್ನು ಅಳವಡಿಸುತ್ತಿದ್ದಾರೆ. ಹಾಗಾಗಿ ಇನ್ನು ಮುಂದೆ ಪ್ರಕರಣಗಳನ್ನು ದಾಖಲಿಸಲಾಗುತ್ತದೆ, ಎಚ್ಚರಿಕೆ.
-ತುಷಾರ್ ಗಿರಿನಾಥ್, ಮುಖ್ಯ ಆಯುಕ್ತ







