ಕೋಮುವಾದದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕದ ಸಾಕ್ಷಿಪ್ರಜ್ಞೆ ಜಿ.ರಾಜಶೇಖರ್

ಜಿ.ರಾಜಶೇಖರ್ ಅವರ ನಿಧನದೊಂದಿಗೆ ಈ ನಾಡು, ವಿಶೇಷವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮೂರೂವರೆ ದಶಕಗಳ ಕಾಲ ಕೋಮುವಾದದ ವಿರುದ್ಧ ಏಕಪ್ರಕಾರ ಹೋರಾಟ ನಡೆಸಿದ್ದ, ಜಾತ್ಯತೀತತೆ, ಸೌಹಾರ್ದತೆ, ಸಮಾನತೆಯೊಂದಿಗೆ ನಮ್ಮ ಸಂವಿಧಾನ ಪ್ರತಿಪಾದಿಸಿದ್ದ ಎಲ್ಲಾ ಮೂಲತತ್ವಗಳಿಗೆ ಕಟಿ ಬದ್ಧರಾಗಿದ್ದ, ಅದನ್ನು ತನ್ನ ಸುತ್ತಮುತ್ತಲಿನ ಸಮಾಜದಲ್ಲಿ ಕಾಣಲು ಹಂಬಲಿಸಿ ಅದಕ್ಕಾಗಿ ಅವಿರತ ಶ್ರಮಿಸಿದ ಅಪರೂಪದ ಲೇಖಕ, ಚಿಂತಕ, ವಾಗ್ಮಿ ಹಾಗು ನಿಷ್ಠಾವಂತ ಸಾಮಾಜಿಕ ಕಾರ್ಯಕರ್ತನನ್ನು ಕಳೆದುಕೊಂಡಂತಾಗಿದೆ.
ಜಿ. ರಾಜಶೇಖರ್ ಅವರ ವಿಶೇಷತೆ ಇರುವುದು ಅವರು ನಂಬಿದ ಸಾಂವಿಧಾನಿಕ ತತ್ವಗಳಿಗಾಗಿ ಅವರು ಆಯ್ಕೆ ಮಾಡಿಕೊಂಡ ಹೋರಾಟದ ಹಾದಿಯಲ್ಲಿ. ಲೇಖಕರಾಗಿ, ವಿಮರ್ಶಕರಾಗಿ ಪುಸ್ತಕಗಳನ್ನು ಪ್ರಕಟಿಸುತ್ತ, ದೊಡ್ಡ ದೊಡ್ಡ ಪ್ರಶಸ್ತಿಗಳನ್ನು ಪಡೆಯುತ್ತಾ, ಉಪನ್ಯಾಸಗಳನ್ನು ನೀಡುತ್ತಾ ಆರಾಮವಾಗಿ ಇರಬಹುದಾಗಿದ್ದ ಜಿ. ರಾಜಶೇಖರ್ ಅವೆಲ್ಲವನ್ನು ಧಿಕ್ಕರಿಸಿ ತಳಮಟ್ಟದಲ್ಲಿ ಕೆಲಸ ಮಾಡುವ ದಾರಿಯನ್ನು ಆಯ್ದುಕೊಂಡರು.
ಕೋಮುವಾದದ ವಿರುದ್ಧ ಹೋರಾಡಲು, ಸಂತ್ರಸ್ತರಿಗೆ ನ್ಯಾಯ ಕೊಡಿಸಲು, ಸತ್ಯವನ್ನು ಜಗತ್ತಿಗೆ ಹೇಳಲು, ಸುಳ್ಳನ್ನು ಎತ್ತಿ ತೋರಿಸಲು, ಪ್ರಭುತ್ವದ ತಪ್ಪು ತೋರಿಸಲು ಅವರು ಲೇಖಕರಾದರು, ಪತ್ರಕರ್ತರಾದರು, ಅನುವಾದಕರಾದರು, ಭಾಷಣಕಾರರಾದರು, ಬೀದಿ ಬದಿ ಹೋರಾಟಗಾರರಾದರು, ಊರೂರು ಸುತ್ತುವ ಕಾರ್ಯಕರ್ತರೂ ಆದರು.
ತಮ್ಮ ಹೋರಾಟದ ಹಾದಿಯಲ್ಲಿ ಸಾವಿರಾರು ಪುಟ ಬರೆದರೂ ಅದರ ಕಾಲು ಭಾಗದಷ್ಟೂ ಪುಸ್ತಕ ಮಾಡುವ ಆಸಕ್ತಿ ತೋರಿಸಲಿಲ್ಲ. ಪ್ರಶಸ್ತಿ, ಸನ್ಮಾನಗಳಿಂದ ಮಾರು ದೂರ ನಿಂತರು. ಆದರೆ ಉಡುಪಿಯ ಮುಸ್ಲಿಮರು ಗೌರವಿಸಲು ಆಮಂತ್ರಿಸಿದಾಗ ಹಿಂದೂ ಒಬ್ಬನಿಗೆ ಮುಸ್ಲಿಮರು ಪ್ರಶಸ್ತಿ ನೀಡುವುದೇ ಜಾತ್ಯತೀತ ಭಾರತದ ಸೌಂದರ್ಯ ಎಂದು ಕೂಡಲೇ ಅದನ್ನು ಒಪ್ಪಿಕೊಂಡರು.

ಮೂಲತ: ಸಾಸ್ತಾನ ಬಳಿಯ ಗುಂಡ್ಮಿಯವರಾದ ಜಿ.ರಾಜಶೇಖರ್ ಹುಟ್ಟಿದ್ದು 1946ರ ಎ.4ರಂದು ಬ್ರಹ್ಮಾವರ ಸಮೀಪದ ಬೈಕಾಡಿಯಲ್ಲಿ. ಬೈಕಾಡಿ, ಮಣಿಪಾಲಗಳಲ್ಲಿ ಶಾಲಾ ಶಿಕ್ಷಣದ ಬಳಿಕ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು. ಇನ್ನಂಜೆಯ ಸೋದೆ ಮಠದ ಶಾಲೆಯಲ್ಲಿ ಶಿಕ್ಷಕರಾಗಿ, ಎಂಜಿಎಂ ಕಾಲೇಜಿನಲ್ಲಿ ಟ್ಯೂಟರ್ ಆಗಿ ಕೆಲಕಾಲ ದುಡಿದ ಬಳಿಕ ಅಣ್ಣನ ಅಕಾಲಿಕ ನಿಧನದಿಂದ ಉಡುಪಿಯಲ್ಲಿ ಎಲ್‌ಐಸಿಯಲ್ಲಿ ಕೆಲಸಕ್ಕೆ ಸೇರಿ ಯಾವುದೇ ಬಡ್ತಿ, ವರ್ಗಾವಣೆ ಬಯಸದೇ ನಿವೃತ್ತಿಯವರೆಗೆ ಒಂದೇ ಕಡೆಯಲ್ಲಿ ಕೆಲಸ ಮಾಡಿದರು.
ಎಲ್ಲ ಅವಕಾಶಗಳಿದ್ದರೂ ಉಡುಪಿಯಲ್ಲೇ ಉಳಿದ ಜಿ.ಆರ್. ಕರಾವಳಿಯ ನಾಡಿಮಿಡಿತವನ್ನು ಅರಿತಿದ್ದರು. ಅದರಲ್ಲೂ ಕಳೆದ 30-40 ವರ್ಷಗಳಲ್ಲಿ ನಾಡಿನ ಜನರ ದು:ಖದುಮ್ಮಾನಗಳನ್ನು ಅವರಿಂದಲೇ ಅರಿತು ಅವರ ನೋವುಗಳಿಗೆ ಗಟ್ಟಿ ಧ್ವನಿಯಾದವರು ರಾಜಶೇಖರ್. ಇವರು ಕರಾವಳಿ ಜಿಲ್ಲೆಗಳುದ್ದಕ್ಕೂ ವ್ಯವಸ್ಥೆಯಿಂದ, ಎಲ್ಲಾ ರೀತಿಯ ಕೋಮುವೈಷಮ್ಯದಿಂದ ಸಂತ್ರಸ್ಥರಾದವರ ಮಟ್ಟಿಗೆ ಅಮೃತಸಂಜೀವಿನಿ ಯಂತೆ ಕಾಣಿಸಿದವರು.
ಜಿ.ರಾಜಶೇಖರ್ ನೇರ ನುಡಿ, ನಿರ್ದಾಕ್ಷಿಣ್ಯ ನಡೆ ಹೊಂದಿದ್ದ ಖಚಿತ ಜ್ಞಾನ ಭಂಡಾರ. ಎಲ್‌ಐಸಿಯಲ್ಲಿ ಕೆಲಸದಲ್ಲಿದ್ದು, ಅಲ್ಲಿನ ನೌಕರರ ಸಂಘಟನೆಯಲ್ಲಿ ಮುಂದಾಳುವಾಗಿದ್ದ ಅಣ್ಣ ಜಿ.ವಾಸುದೇವರ ಪ್ರೇರಣೆಯಿಂದ ತಾನು ಎಢಪಂಥಕ್ಕೆ ಒಲಿಯುವಂತಾಯಿತು ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದ ಜಿ. ರಾಜಶೇಖರ್, ಅಂದು ತಾನು ಕಲಿಯುತಿದ್ದ ಎಂಜಿಎಂ ಕಾಲೇಜಿನ ಗುರುಗಳಾದ ಯು.ಎಲ್.ಆಚಾರ್ಯ, ಬಿ.ಎಲ್.ಆಚಾರ್ಯರಂಥವರು ಅಂದಿನ ಯುವಕರು ಸ್ವತಂತ್ರ ಮನೋಭಾವ ರೂಪಿಸಿಕೊಳ್ಳಲು ಕಾರಣಕರ್ತರಾಗಿದ್ದರು. ಅಣ್ಣನಿಂದಾಗಿಯೇ ತಾನು ಸಾಹಿತ್ಯದ ಓದಿಗೆ ಹಾಗೂ ಭಿನ್ನ ವಿಚಾರಗಳಿಗೆ ತೆರೆದುಕೊಳ್ಳುವಂತಾಯಿತು ಎಂದಿದ್ದರು.
ಇವರೊಂದಿಗೆ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾಗಿದ್ದ ಆಧುನಿಕ ಪ್ರವೃತ್ತಿಯ ಸಾಂಸ್ಕೃತಿಕ ಸಂಘಟಕ, ಸಾಹಿತಿ, ಲೇಖಕ ಕು.ಶಿ.ಹರಿದಾಸ ಭಟ್ಟರು ಗುರುವಾಗಿ ದೊರೆತು ಅವರು ಕಾಲೇಜಿನಲ್ಲಿ ಸ್ಥಾಪಿಸಿದ್ದ ಅದ್ಭುತವೆನ್ನಬಹುದಾದ ಪುಸ್ತಕ ಭಂಡಾರದ ಮೂಲಕ ವಿಶ್ವದ ಅತ್ಯುತ್ತಮ ಕೃತಿಗಳ ಪ್ರಪಂಚಕ್ಕೆ ಪ್ರವೇಶ ಪಡೆಯುವಂತಾಯಿತು. ಇವು ಜಿ.ಆರ್. ಅವರ ಜ್ಞಾನದಾಹವನ್ನೂ, ನೊಂದವರ ಪರ ಹೋರಾಡುವ ಛಲವನ್ನು ರೂಢಿಸಿಕೊಳ್ಳಲು ಕಾರಣವಾದವು.
ಜೀವವಿಮಾ ನೌಕರರ ಸಂಘದ ಸದಸ್ಯರಾಗಿ ರೈತ-ಕಾರ್ಮಿಕ ಚಳುವಳಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತಿದ್ದ ರಾಜಶೇಖರ್, ಇದೇ ದಿನಗಳಲ್ಲಿ ಬರೆದ ‘ಕಾಗೋಡು ಸತ್ಯಾಗ್ರಹ’ ಕೃತಿ ನಾಡಿನ ಗಮನ ಸೆಳೆದಿತ್ತು. ಕಾಗೋಡು ಸತ್ಯಾಗ್ರಹಕ್ಕೆ ಸಂಬಂಧಿಸಿದಂತೆ ಜೀವಂತವಾಗುಳಿದ ಪ್ರತಿಯೊಬ್ಬ ಸತ್ಯಾಗ್ರಹಿಯನ್ನು ಭೇಟಿಯಾಗಿ ಚರ್ಚಿಸಿ ಬರೆದ ಅದ್ಭುತ ಕೃತಿ, ವಿವಿ ಪ್ರಾಧ್ಯಾಪಕರು ಮಾಡಬೇಕಾಗಿದ್ದ ಪಿಎಚ್‌ಡಿ ಸಂಶೋಧನಾ ಪ್ರಬಂಧದಷ್ಟು ವಿಸ್ತಾರವಾಗಿದೆ ಎಂದು ಕು.ಶಿ.ಯಾದಿಯಾಗಿ ಎಲ್ಲರೂ ಅಂದು ಈ ಕೃತಿಯನ್ನು ಶ್ಲಾಘಿಸಿದ್ದರು.
1970ರ ದಶಕದಿಂದಲೂ ಉಡುಪಿಯಲ್ಲಿ ರಾಜಶೇಖರ್ ಭಾಗವಹಿಸದ ಬೀದಿ ಹೋರಾಟಗಳು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ ಎನ್ನಬಹುದು. ರೈತ- ಕಾರ್ಮಿಕ ಹೋರಾಟ, ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ದುಡಿವ ಜನರ ನಿತ್ಯ ಸಂಗಾತಿಯಾಗಿದ್ದವರು. ಎಷ್ಟೇ ಭಿನ್ನಮತವಿದ್ದರೂ ಬಡ ಜನರ ಹೋರಾಟಗಳಿಗೆ ರಾಜಿ ಇಲ್ಲದೆ ಹೆಗಲು ಕೊಡುವ ಅವರ ಬದ್ಧತೆ ಇಳಿ ವಯಸ್ಸಿನಲ್ಲೂ ಮುಂದುವರಿದಿತ್ತು.
ಕಣ್ತೆರೆಸಿದ ಜಿ ರಾಜಶೇಖರ್ ಅವರ ಸತ್ಯಶೋಧನಾ ವರದಿಗಳು

ಕರಾವಳಿಯ ಯಾವ ಮೂಲೆಯಲ್ಲೇ ಕೋಮು ಆಧರಿತ ಹಿಂಸೆ, ಗಲಭೆಗಳು ನಡೆದರೂ ಅಲ್ಲಿಗೆ ಕೆಲವು ಸಂಗಾತಿಗಳೊಂದಿಗೆ ತೆರಳಿ, ಯಾರದೇ ಮುಲಾಜಿಗೂ ಒಳಗಾಗದೇ, ಅಂಜಿಕೆ ಇಲ್ಲದೇ, ನಿರ್ಬೀಡೆ ಯಿಂದ ಅಧ್ಯಯನ ನಡೆಸಿ, ಅದಕ್ಕೆ ಸಂಬಂಧಿಸಿದ ಎಲ್ಲರನ್ನೂ ಭೇಟಿಯಾಗಿ ಅವರಿಂದ ಸತ್ಯಸಂಗತಿಗಳನ್ನು ಖುದ್ದಾಗಿ ಅರಿತು ಸತ್ಯಶೋಧನಾ ವರದಿಗಳನ್ನು ನಿರಂತರವಾಗಿ ಬರೆಯುತ್ತಾ ಸಮಾಜದ ಕಣ್ಣು ತೆರೆಸುವ, ಸತ್ಯದರ್ಶನ ಮಾಡಿಸುವ ಕೆಲಸ ಮಾಡಿದ್ದರು. ಇವುಗಳ ಆಧಾರದಲ್ಲೇ ಬೀದಿ ಹೋರಾಟಗಳನ್ನು ಸಂಘಟಿಸುವ ಪ್ರಾಯೋಗಿಕ ಕಾರ್ಯದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಈ ಮೂಲಕ ನಾಡಿನ ಕೋಮು ಸೌಹಾರ್ದ ವೇದಿಕೆಗೆ ಹಾಗೂ ಈ ಹಿನ್ನೆಲೆಯ ಚಳವಳಿಗಳಿಗೆ ಪ್ರಮುಖ ಮಾರ್ಗದರ್ಶಕರೂ ಇವರಾಗಿದ್ದರು.
ರಾಜಶೇಖರ್ ಅವರ ನೇತೃತ್ವದಲ್ಲೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 90ರಿಂದೀಚೆಗೆ ನಡೆದ ಸುರತ್ಕಲ್ ಗಲಭೆ, ಪಬ್‌ದಾಳಿ, ಹೋಮ್‌ಸ್ಟೇ ದಾಳಿ, ಉಡುಪಿಯ ಅಸೋಡು ಸೂಜಿ ಪ್ರಕರಣ, ಕುಂದಾಪುರ ಗಲಭೆ, ಆದಿಉಡುಪಿ ಬೆತ್ತಲೆ ಪ್ರಕರಣ, ಗಂಗೊಳ್ಳಿ ಗಲಭೆಗಳೊಂದಿಗೆ ಸಂಘಪರಿವಾರದವರು ತಮ್ಮದೇ ಸಂಘಟನೆಗೆ ಸೇರಿದವರ ಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸಿದ ಕುರಿತಂತೆ ಸತ್ಯ ಶೋಧನ ವರದಿಗಳನ್ನು ತಯಾರಿಸಿ ‘ಲಂಕೇಶ ಪತ್ರಿಕೆ’ಯಲ್ಲಿ ಪ್ರಕಟಿಸುವ ಮೂಲಕ ರಾಜ್ಯದ ಜನತೆಯ ಮುಂದೆ ತೆರೆದಿಡುವ ಕೆಲಸ ಮಾಡುತಿದ್ದರು.
ಇವುಗಳೊಂದಿಗೆ ಈ ಭಾಗದಲ್ಲಿ ನಡೆದ ಅನೇಕಾನೇಕ ನಕ್ಸಲ್ ಎನ್‌ಕೌಂಟರ್ ಗಳ ಕುರಿತಂತೆಯೂ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ಥರನ್ನು ಮಾತನಾಡಿಸಿ ಪೊಲೀಸರು ನೀಡುತ್ತಿದ್ದ ಏಕಮುಖ ಮಾಹಿತಿಗಳನ್ನು ಬುಡ ಸಮೇತ ಅಲುಗಾಡಿಸಿ ಬಿಡುತಿದ್ದರು.
ಒಟ್ಟಿನಲ್ಲಿ ಕನ್ನಡದ ಬೌದ್ಧಿಕ ವಲಯದೊಂದಿಗೆ, ಕರ್ನಾಟಕದ ನೊಂದವರು, ಜನಪರ ಚಳವಳಿಗಾರರು, ವಿವಿಧ ರೂಪದ ಹಿಂಸೆಗಳ ಸಂತ್ರಸ್ಥರು ಎಲ್ಲರೂ ಅಪ್ಪಿಕೊಳ್ಳುವ ಅಪರೂಪದ ವ್ಯಕ್ತಿ ಜಿ.ರಾಜಶೇಖರ್.
ಜಿ.ರಾಜಶೇಖರ್ ಕೃತಿಗಳು
‘ಕಾಗೋಡು ಸತ್ಯಾಗ್ರಹ’, ‘ಪರಿಸರ ಮತ್ತು ಸಮಾಜವಾದ’, ಬರ್ಟೋಲ್ಡ್ ಬ್ರೆಕ್ಟ್ ಪರಿಚಯ’, ಅನುವಾದ ಕೃತಿ ‘ದಾರು ಪ್ರತಿಮನ ಪೂಜಿವೇ’, ‘ಕೋಮುವಾದದ ಕರಾಳಮುಖಗಳು’, ಕೆ.ಣಿರಾಜ್ ಜೊತೆ ಸೇರಿ ಹರ್ಷಮಂದರ್ ಬರಹಗಳು, ‘ಬಹುವಚನ ಭಾರತ’ ಇವು ಈವರೆಗೆ ಪ್ರಕಟಗೊಂಡಿರುವ ಜಿ.ರಾಜಶೇಖರ್ ಅವರ ಪುಸ್ತಕಗಳು.
ನಾಡಿನ ಚಳುವಳಿಗಳಿಗೆ ಅವರು ಬರೆದುಕೊಟ್ಟಿರುವ ನೂರಾರು ಕರಪತ್ರಗಳು ಉಜ್ವಲ ಸಾಮಾಜಿಕ ಸಾಹಿತ್ಯಗಳೆನ್ನಬಹುದು. ಈ ಕಾರಣಕ್ಕಾಗಿಯೇ ಕನ್ನಡದ ಸಾಹಿತ್ಯ ಕ್ಷೇತ್ರ ಹಾಗೂ ಚಳವಳಿ ಕ್ಷೇತ್ರವೂ ಅವರನ್ನು ತಮ್ಮ ಸಾಕ್ಷಿಪ್ರಜ್ಞೆಯಾಗಿ ಅಭಿಮಾನದಿಂದ ಒಪ್ಪಿಕೊಂಡಿವೆ.
ರಾಜಶೇಖರ ಅವರು ಸಾಹಿತ್ಯ, ಸಮಾಜ, ರಾಜಕಾರಣಗಳೊಂದಿಗೆ ಕೋಮುವಾದವೂ ಸೇದಂತೆ ಸಮಕಾಲೀನ ತುರ್ತು ವಿದ್ಯಮಾನಗಳ ಕುರಿತು ನೂರಾರು ಲೇಖನಗಳನ್ನು ವಿವಿಧ ಪತ್ರಿಕೆ, ನಿಯತಕಾಲಿಕಗಳಲ್ಲಿ ಪ್ರಕಟಿಸುತ್ತಾ ಬಂದಿದ್ದರೂ, ಮಹತ್ವದ ಈ ಬರಹಗಳು ಕೃತಿಗಳಾಗಿ ಪ್ರಕಟಗೊಂಡಿರುವುದು ಇಲ್ಲವೇ ಇಲ್ಲ ಎನ್ನಬಹುದು. ಇದಕ್ಕೆ ಕಾರಣ ಲೇಖನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲು ಅವರು ಅನುಮತಿಯನ್ನೇ ನೀಡದಿರುವುದು. ಹೀಗಾಗಿ ಅವರ ಈ ಅಮೂಲ್ಯ ಬರಹಗಳು ಇಂದು ಜನಸಾಮಾನ್ಯರ ಓದುವಿಕೆಗೆ ಲಭ್ಯವಿರುವುದು ತೀರಾತೀರಾ ಕಡಿಮೆ ಎನ್ನಬಹುದು.
ಕೋಮುವಾದದ ಕುರಿತಂತೆ ಜಿ.ರಾಜಶೇಖರರ ಕೆಲವು ಮಾತುಗಳು......

*1990ರ ನಂತರ ಉಡುಪಿ ಬದುಕು ಕೋಮು ವೈಷಮ್ಯದ ವಿಕಾರ ಪಡೆದಿದೆ. ಆದಿ ಉಡುಪಿ ಬೆತ್ತಲೆ ಪ್ರಕರಣವನ್ನೇ ಸಾಕ್ಷಿಯಾಗಿಟ್ಟುಕೊಂಡು ಹೇಳುತ್ತೇನೆ, ಅದರ ಆರೋಪಿಗಳು ಯಾರೇ ಆಗಿದ್ದರೂ (ಅವರೇನು ಕ್ಷಮೆಗೆ ಅರ್ಹರಲ್ಲ!) ಉಡುಪಿಯ ಜನಕ್ಕೆ ಈ ಹಿಂಸೆಯ ಬಗ್ಗೆ ಇನಿತೂ ಪಶ್ಚಾತಾಪವಿಲ್ಲದ, ಸಹಮತವಿತ್ತು ಎಂದೇ ನನ್ನ ನಂಬಿಕೆ.
*ಎಲ್.ಕೆ.ಅಧ್ವಾನಿಯವರ ಕುಖ್ಯಾತ ರಥಯಾತ್ರೆಯಿಂದ ಈಚೆಗೆ ಕೋಮುವಾದ ಹೆಚ್ಚು ಉಗ್ರವಾಗಿದೆ ಮಾತ್ರವಲ್ಲ, ಅದು ಮುಸ್ಲಿಮ್ ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ನಡೆಯುವ ಏಕಪಕ್ಷೀಯವಾದ ಆಕ್ರಮಣವಾಗಿಯೂ ರೂಪಾಂತರಗೊಂಡಿದೆ.
*ಉಡುಪಿಯಲ್ಲಿ 1990ರವರೆಗೂ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತಾ ಬಂದಿದೆ. ಆದರೆ ಅವರು ಗಾಂಧಿ ಅಥವಾ ನೆಹರು ಅವರ ವಿಚಾರಗಳನ್ನು ಜನರಿಗೆ ತಲುಪಿಸುವ ಯಾವ ಮಹತ್ವದ ಕೆಲಸಗಳನ್ನು ಮಾಡಲಿಲ್ಲ. ಉಡುಪಿಯ ಜಾತಿಗ್ರಸ್ತ ಸಮಾಜದಲ್ಲಿ ಮೇಲ್ಜಾತಿಯ ಜನಗಳಿಗೆ ಗಾಂಧಿ ನೆಹರು ಇಬ್ಬರೂ ಅಪಥ್ಯವಾಗಿದ್ದರು.























