ಸಿಎಂ ದಿಲ್ಲಿ ಪ್ರವಾಸ | ಪಕ್ಷದ ವರಿಷ್ಠರು ಪ್ರಸ್ತಾಪಿಸಿದರೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ: ಬೊಮ್ಮಾಯಿ

ಬೆಂಗಳೂರು, ಜು.21: ನೂತನ ರಾಷ್ಟ್ರಪತಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜು.24ರಂದು ದಿಲ್ಲಿಗೆ ತೆರಳಲಿದ್ದಾರೆ. ಜು.25 ಮತ್ತು 26ರಂದು ದಿಲ್ಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಪಕ್ಷದ ವರಿಷ್ಠರು ಪ್ರಸ್ತಾಪಿಸಿದರೆ ಸಂಪುಟ ವಿಸ್ತರಣೆ ಬಗ್ಗೆಯೂ ಚರ್ಚಿಸುವುದಾಗಿ ತಿಳಿಸಿದ್ದಾರೆ.
ದಿಲ್ಲಿ ಭೇಟಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜು.25ರಂದು ಜರುಗುವ ನೂತನ ರಾಷ್ಟ್ರಪತಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲು ವಿವಿಧ ಇಲಾಖೆಗಳ ನಿಯೋಗಗಳೊಂದಿಗೆ ದಿಲ್ಲಿಗೆ ತೆರಳುತ್ತಿದ್ದೇನೆ. ಇದೇವೇಳೆ ಪಕ್ಷದ ವರಿಷ್ಠರು ಪ್ರಸ್ತಾಪಿಸಿದರೆ ಸಂಪುಟ ವಿಸ್ತರಣೆ ಬಗ್ಗೆ ಸಮಾಲೋಚನೆ ನಡೆಸುತ್ತೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ನಿಯೋಗದ ನೇತೃತ್ವವನ್ನೂ ತಾನೇ ವಹಿಸುಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ಬೊಮ್ಮಾಯಿ ಸಂಪುಟದಲ್ಲಿ ಸದ್ಯ ಐದು ಸಚಿವ ಸ್ಥಾನಗಳು ಖಾಲಿ ಇದ್ದು, ವಿಸ್ತರಣೆಗೆ ಪಕ್ಷದ ವರಿಷ್ಠರಿಂದ ಹಸಿರು ನಿಶಾನೆ ಸಿಕ್ಕಲ್ಲಿ ಶೀಘ್ರದಲ್ಲೇ ಸಂಪುಟ ವಿಸ್ತರಣೆ ಅಥವಾ ಪುನರ್‌ರಚನೆ ಆಗಲಿದೆ ಮೂಲಗಳು ಹೇಳಿವೆ.





