ಚಂಪಾ ಬಂಡಾಯದ ನೆನಪು
ಜುಲೈ 23,24ರಂದು ದಾವಣಗೆರೆಯಲ್ಲಿ ಬಂಡಾಯ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಆ ಹಿನ್ನೆಲೆಯಲ್ಲಿ ಈ ಲೇಖನ

ಭಾಗ-1
ಅವರು ಕವಿ, ನಾಟಕಕಾರ, ಸಾಹಿತಿ ಎಂದು ಎಷ್ಟು ಗುರುತಿಸಿಕೊಂಡಿದ್ದರೋ ಅದಕ್ಕಿಂತ ಅವರು ಬಂಡಾಯಗಾರರಾಗಿ ಹೆಚ್ಚು ಹೆಸರು ಗಳಿಸಿಕೊಂಡಿದ್ದರು. ಬಂಡಾಯ, ಪ್ರತಿಭಟನೆ, ಪ್ರತಿರೋಧ ಮತ್ತು ಪರ್ಯಾಯ ಆಲೋಚನಾ ಕ್ರಮಗಳು ಅವರ ಆಂತರ್ಯಕ್ಕೆ ಹೆಚ್ಚು ಆಪ್ತವಾದ ಸಂಗಾತಿಗಳಾಗಿದ್ದವು. ಎಲ್ಲಿ ಅನ್ಯಾಯ, ಶೋಷಣೆ, ತಾರತಮ್ಯವಿರುತ್ತೋ ಅಲ್ಲಿ ಅವರ ಕೂಗು ಇದ್ದೇ ಇರುತ್ತಿತ್ತು. ಸಮಕಾಲೀನ ಸಮಾಜದ ತೊಳಲಾಟ, ಸಮಸ್ಯೆಗಳು, ಸಾಮಾಜಿಕ ತರತಮಗಳು ಹಾಗೂ ಶೋಷಣೆಯನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಅನಾವರಣಗೊಳಿಸುವ ಅವರ ಕರ್ತೃತ್ವ ಶಕ್ತಿ ವಿಶಿಷ್ಟವಾಗಿತ್ತು.
ಚಂಪಾ ನಮ್ಮಳಗಿರುವ ಬಂಡಾಯಗಾರ. ಬಂಡಾಯದ ಪರಿಭಾಷೆಯನ್ನು ಮತ್ತು ಅದರ ವಿಶಾಲ ಅರ್ಥವನ್ನು ತಮ್ಮ ನಿರಂತರ ಬಂಡಾಯದ ಹೋರಾಟಗಳ ಮೂಲಕ ನವ ಪೀಳಿಗೆಗೆ ಪರಿಚಯಿಸಿದವರು. ಹತ್ತು ಹಲವು ವಿಚಾರಗಳನ್ನಿಟ್ಟುಕೊಂಡು ಬೀದಿಯಲ್ಲಿ ಬಂಡಾಯ ಹೂಡಿದ ಮತ್ತೊಬ್ಬ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಸಿಗುವುದು ಕಷ್ಟ. ಅವರು ಕ್ಯಾಂಪಸ್ಸಿಗಿಂತ ಅದರ ಹೊರಗೆ ನಿರಂತರವಾಗಿ ಒಂದಿಲ್ಲೊಂದು ಸಂಗತಿ/ ವಿಷಯದ ಬಗ್ಗೆ ಹೋರಾಟದ ಮೇಲೆ ಹೋರಾಟ ಮಾಡುತ್ತಲೇ ಬಂದವರು. ನುಡಿಗೂ ನಡೆಗೂ ಅಷ್ಟು ಅಂತರವಿಲ್ಲದ ನಡೆ ಅವರದಾಗಿತ್ತು. ನಾವು ರೂಪುಗೊಳ್ಳುತ್ತಿದ್ದ ಕಾಲಘಟ್ಟದಲ್ಲಿ ನಮ್ಮ ಆಲೋಚನೆಗಳ ಹರುವು ವಿಸ್ತಾರಗೊಳ್ಳುವಂತೆ ಮತ್ತು ನಿಖರತೆಯೆಡೆಗೆ ಸಾಗುವಂತೆ ಮಾಡಿದ ಹುಟ್ಟು ಹೋರಾಟಗಾರ. ಅವರಿಗೆ ಸುಮ್ಮನೆ ಕುಳಿತುಕೊಳ್ಳುವ ಅಭ್ಯಾಸವಿರಲಿಲ್ಲ. ಒಂದು ರೀತಿಯಲ್ಲಿ ಅವರು ಯಾವಾಗಲೂ ರೆಸ್ಟ್‌ಲೆಸ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಿದ್ದರು. ಬಂಡಾಯ ಅವರನ್ನು ಬೆನ್ನು ಹತ್ತಿತ್ತೋ ಅಥವಾ ಅವರೇ ಬಂಡಾಯದ ಬೆನ್ನು ಹತ್ತಿದ್ದರೋ ತಿಳಿಯದು. ಬಂಡಾಯ ಅವರ ಉಸಿರಾಗಿತ್ತು. ನಮಗೂ ಬಂಡಾಯದ ಪ್ರಥಮ ಪಾಠ ಹೇಳಿಕೊಡುತ್ತಲೇ ಭಿನ್ನವಾಗಿ ಆಲೋಚಿಸುವ, ಚಿಂತಿಸುವ ಮತ್ತು ಬಂಡಾಯದ ಪರಿಭಾಷೆಗೆ ಒಡ್ಡಿಕೊಳ್ಳುವುದನ್ನು ಕಲಿಸಿದವರು. ನಮ್ಮ ತಲೆಮಾರಿನ ಯುವಕರನ್ನು ವೈಚಾರಿಕ ಚಿಂತನೆಗೆ ತೆದುಕೊಳ್ಳುವಂತೆ ಮಾಡಿದ ಬಂಡಾಯಗಾರ. ನಮ್ಮಿಳಗೊಬ್ಬ ಬಂಡಾಯಗಾರ ಸದಾ ಜಾಗೃತವಾಗಿರುವಂತೆ ಹಾಗೂ ಅನ್ಯಾಯ, ಶೋಷಣೆ, ತಾರತಮ್ಯಗಳಿಗೆ ತೀವ್ರವಾಗಿ ಸ್ಪಂದಿಸುವ ಸ್ವಭಾವ ಬೆಳೆಸಿಕೊಳ್ಳಲು ಪ್ರೇರಕ ಶಕ್ತಿ ಚಂಪಾ.
ಚಂಪಾ ಎಂಬ ಒಂಟಿ ಸಲಗ ತುಳಿದದ್ದೇ ದಾರಿ. ಯಾರಿಗೂ ಹೆದರದ, ಭಯಭೀತರಾಗದ ಅವರಿಗೆ ಹೋರಾಟವೇ ಗುರಿ. ಅವರದು ನೇರ ನಿಷ್ಠುರ, ಗಂಭೀರ ವಿಷಯಗಳನ್ನು ತಮ್ಮ ತಮಾಷೆಯ ತಿಳಿ ಹಾಸ್ಯದ ಮೂಲಕ ಹರಿ ಬಿಡುವ ಲಹರಿ, ಅವರ ನಿಷ್ಠುರಮಾತುಗಳಿಂದ ಯಾರು ಎಷ್ಟೇ ಕಸಿವಿಸಿಗೊಂಡು ಒಳಗೊಳಗೆ ಕಿರಿಕಿರಿ ಮಾಡಿಕೊಂಡರೂ ಅವರ ಅಪ್ಪಟ ಪ್ರಾಮಾಣಿಕತೆಯ ಮುಂದೆ ಒಪ್ಪತಕ್ಕ ವಿಚಾರವೇ ಸರಿ. ಕನ್ನಡದ ಉಳಿವು ನಮ್ಮ ಉಳಿವು. ಅದರ ಅಳಿವು ನಮ್ಮ ಅಳಿವು. ಕನ್ನಡದ ಅಸ್ಮಿತೆಗೆ ಧಕ್ಕೆ ಉಂಟಾದಾಗ ಕನ್ನಡಿಗರನ್ನು ಬಡಿದೆಬ್ಬಿಸಲು ಊದುತ್ತಿದ್ದರು ತುತ್ತೂರಿ. ‘‘ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ’’ ಎಂದೆನ್ನುತ್ತಿದ್ದ ಕನ್ನಡದ ಕಸ್ತೂರಿ.
ಅವರು ಕವಿ, ನಾಟಕಕಾರ, ಸಾಹಿತಿ ಎಂದು ಎಷ್ಟು ಗುರುತಿಸಿಕೊಂಡಿದ್ದರೋ ಅದಕ್ಕಿಂತ ಅವರು ಬಂಡಾಯಗಾರರಾಗಿ ಹೆಚ್ಚು ಹೆಸರು ಗಳಿಸಿಕೊಂಡಿದ್ದರು. ಬಂಡಾಯ, ಪ್ರತಿಭಟನೆ, ಪ್ರತಿರೋಧ ಮತ್ತು ಪರ್ಯಾಯ ಆಲೋಚನಾ ಕ್ರಮಗಳು ಅವರ ಆಂತರ್ಯಕ್ಕೆ ಹೆಚ್ಚು ಆಪ್ತವಾದ ಸಂಗಾತಿಗಳಾಗಿದ್ದವು. ಎಲ್ಲಿ ಅನ್ಯಾಯ, ಶೋಷಣೆ, ತಾರತಮ್ಯವಿರುತ್ತೋ ಅಲ್ಲಿ ಅವರ ಕೂಗು ಇದ್ದೇ ಇರುತ್ತಿತ್ತು. ಸಮಕಾಲೀನ ಸಮಾಜದ ತೊಳಲಾಟ, ಸಮಸ್ಯೆಗಳು, ಸಾಮಾಜಿಕ ತರತಮಗಳು ಹಾಗೂ ಶೋಷಣೆಯನ್ನು ತಮ್ಮ ವಿಶಿಷ್ಟ ಶೈಲಿಯಲ್ಲಿ ಅನಾವರಣಗೊಳಿಸುವ ಅವರ ಕರ್ತೃತ್ವ ಶಕ್ತಿ ವಿಶಿಷ್ಟವಾಗಿತ್ತು. ಸಮಕಾಲೀನ ಸಮಾಜವು ಎದುರಿಸುತ್ತಿದ್ದ ಸಾಮಾಜಿಕ ಸಂಗತಿಗಳ ಬಗ್ಗೆ ನಿಖರವಾಗಿ, ವಸ್ತುನಿಷ್ಠವಾಗಿ ಮತ್ತು ವೈಚಾರಿಕವಾಗಿ ವಿಶ್ಲೇಷಿಸುತ್ತಿದ್ದ ಚಂಪಾ ವಿಡಂಬನೆಗೆ ಹೆಸರಾದವರು. ಸಾಮಾಜಿಕ ಸ್ವಾಸ್ಥ್ಯ ಕೆಡಿಸುವಂತಹ ಪದ್ಧತಿ, ಆಚರಣೆ, ವೃತಾಚರಣೆ, ಮೌಢ್ಯಗಳು, ಡಂಭಾಚಾರ ಮುಂತಾದವುಗಳ ಬಗ್ಗೆ ನಿಷ್ಠುರತೆಯಿಂದ ಮಾತನಾಡುವ ದಾರ್ಷ್ಟ್ಯತೆಯು ಬೇರಾವ ಸಾಹಿತಿಗೂ ಇರಲಿಲ್ಲ. ಅಂತಹ ವಿಶಿಷ್ಟ ವ್ಯಕ್ತಿತ್ವ ಅವರದ್ದಾಗಿತ್ತು. ಚಂಪಾ ಸಾಮಾಜಿಕ ಬದಲಾವಣೆಗೆ ತುಡಿತ ಹೊಂದಿದ್ದ ಸಾವಿರಾರು ಜನ ಯುವಕರಿಗೆ ಸ್ನೇಹಿತ, ತತ್ವಜ್ಞಾನಿ ಹಾಗೂ ಮಾರ್ಗದರ್ಶಕರಾಗಿದ್ದರು. ಕವಿವಿ ಕ್ಯಾಂಪಸ್ಸಿನ ಹೊರಗೆ ಅವರೊಬ್ಬರು ವಿದ್ಯಾರ್ಥಿಗಳ ಮಧ್ಯೆ ಸ್ನೇಹಿತರಾಗಿ, ಸಮಕಾಲೀನ ಸಂಗತಿಗಳ ಬಗ್ಗೆ ನಿಖರವಾಗಿ ಮತ್ತು ವಸ್ತುನಿಷ್ಠವಾಗಿ ಬೆಳಕು ಚೆಲ್ಲುತ್ತಿದ್ದ ತತ್ವಚಿಂತಕರಾಗಿ ಹಾಗೂ ಹದಿಹರೆಯದಲ್ಲಿ ಹೊಸತನಕ್ಕಾಗಿ ಹಂಬಲಿಸುತ್ತಿದ್ದ ಯುವ ಬರಹಗಾರರು, ಕವಿಗಳು ಹಾಗೂ ಸಾಹಿತ್ಯಾಸಕ್ತರಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ ರೀತಿ ಅನನ್ಯ.
ಚಂಪಾರ ವ್ಯಕ್ತಿತ್ವದ ಬಹು ವಿಶಿಷ್ಟ ಆಯಾಮವೇ ಜನಪರ ಹೋರಾಟ. ಚಂಪಾರ ಇನ್ನೊಂದು ಹೆಸರೇ ಬಂಡಾಯ. ನಮ್ಮೊಳಗೊಬ್ಬ ಬಂಡಾಯಗಾರನು ನೆಲೆಯೂರುವಂತೆ ಮತ್ತು ಎಲ್ಲಿಯೇ ಅನ್ಯಾಯ, ಶೋಷಣೆಗಳು ನಡೆದರೂ ಅದನ್ನು ವಿರೋಧಿಸುವ ಬಂಡಾಯದ ಎದೆಗಾರಿಕೆಯನ್ನು ನಾವು ಬೆಳೆಸಿಕೊಳ್ಳಲು ಪ್ರೇರಕ ಶಕ್ತಿಯೇ ಚಂಪಾ. ಎದೆಗೆ ಬಿದ್ದ ಅಕ್ಷರ ಮತ್ತು ಮೈಮನಸ್ಸುಗಳನ್ನಾವರಿಸಿಕೊಂಡ ಬಂಡಾಯ ಎಂದಿಗೂ ನಾವು ಜಡವಾಗುವುದಕ್ಕೆ ಬಿಡುವುದಿಲ್ಲ. ಅವು ಯಾವಾಗಲೂ ಕ್ರಿಯಾಶೀಲವಾಗಿರುತ್ತವೆ. ನಮ್ಮ ಜೀವಂತಿಕೆಗೆ ಸಾಕ್ಷಿಯಾಗುತ್ತವೆ ಎಂಬುದು ನಮ್ಮ ಅನುಭವ. ಬಂಡಾಯದ ಬೀಜವನ್ನು ನಮ್ಮಿಳಗೆ ಬಿತ್ತಿ ಅದು ವಿಕಸಿಸುವ ವಾತಾವರಣ ಸೃಷ್ಟಿಸಿ ಬಂಡಾಯಕ್ಕೆ ಒಗ್ಗಿಕೊಳ್ಳುವ ಪರಿಭಾಷೆಯನ್ನು ತಲೆಯಲ್ಲಿ ತುಂಬಿಕೊಳ್ಳಲು ನೆರವಾದ ಅರಿವಿನ ಗುರು. ಅವರು ನೀಡಿದ ಬಂಡಾಯದ ದೀಕ್ಷೆಯ ಪರಿಣಾಮ ಎಂತಹದ್ದೆಂದರೆ ನಮ್ಮ ಸುತ್ತಮುತ್ತ ನಡೆಯುವ ವಿದ್ಯಮಾನಗಳನ್ನು ತೆರೆದಕಣ್ಣುಗಳಿಂದ ನೋಡುವ ದೃಷ್ಟಿಕೋನ ಬೆಳೆಸಿಕೊಳ್ಳುವಂತೆ ಮತ್ತು ಅವುಗಳಿಗೆ ಸ್ಪಂದಿಸುವುದನ್ನು ಕಲಿಸಿತು. ಬಂಡಾಯ ಎಲ್ಲರಿಗೂ ದಕ್ಕುವುದಲ್ಲ. ಸಾಮಾಜಿಕ ಸಂಗತಿಗಳನ್ನು ಹಾಗೂ ವಿದ್ಯಮಾನಗಳನ್ನು ವಿಶಿಷ್ಟ ದೃಷ್ಟಿಕೋನದಿಂದ ನೋಡುವ, ಪ್ರತಿಸ್ಪಂದಿಸುವ ಸೂಕ್ಷ್ಮ ಸಂವೇದನಾಶೀಲತೆಯನ್ನು ಬೆಳೆಸಿಕೊಳ್ಳುವ ತುಡಿತವಿರಬೇಕು. ಬಂಡಾಯದ ಬಿಸಿಯನ್ನು ಮೈಮನಗಳಲ್ಲಿ ಕಾಪಿಟ್ಟುಕೊಳ್ಳದವ ಬಂಡಾಯಗಾರನಾಗಲಾರ. ಪ್ರತಿರೋಧ ಮತ್ತು ಪ್ರತಿಭಟನೆಯ ತುಡಿತವಿಲ್ಲದವನಲ್ಲಿ ಬಂಡಾಯದ ಬಿಸಿ/ ಕಾವು ಇರದು. ನಮ್ಮಲ್ಲಿ ಸಹಜವಾಗಿಯೇ ಇದ್ದ ಸಾಮಾಜಿಕ ತಾರತಮ್ಯ, ಶೋಷಿತ ಬದುಕಿನ ಹಿನ್ನೆಲೆ, ಜಾತಿ ಅವಹೇಳನ, ಅಪಹಾಸ್ಯ, ತುಚ್ಛೀಕರಣದ ಅನುಭವಗಳು ನಾವು ತೀವ್ರವಾಗಿ ಬಂಡಾಯದ ಪರಿಭಾಷೆಗೆ ಒಡ್ಡಿಕೊಳ್ಳುವಂತೆ ಮಾಡಿದವು. ಅಂತಹ ಮನುಷ್ಯವಿರೋಧಿ ತರತಮಗಳ ವಿರುದ್ಧ ಪ್ರತಿಭಟಿಸಲು ಬಂಡಾಯದ ಪರಿಭಾಷೆ ಮತ್ತು ಮಾಧ್ಯಮದ ಐತಿಹಾಸಿಕ ಅಗತ್ಯತೆ ಇತ್ತು. ಸಾಮಾಜಿಕ ಶೋಷಣೆಯ ಹೊಡೆತದಿಂದ ತತ್ತರಿಸಿದ್ದ ಶೋಷಿತ ಸಮುದಾಯದ ಯುವಕರಲ್ಲಿ ಬಂಡಾಯವೇಳುವುದಕ್ಕಾಗಿ ಬೇಕಾಗಿದ್ದ ತುಡಿತ, ಕಾವು ಹಾಗೂ ಶೋಷಿತ ವ್ಯವಸ್ಥೆಯ ವಿರುದ್ಧ ತೀವ್ರವಾಗಿ ಪ್ರತಿರೋಧ ಮಾಡುವ ಮನೋಭಾವ ಹೆಚ್ಚಾಗಿತ್ತು. ಅಂತಹ ಹೋರಾಟದ ಮನೋಭಾವಕ್ಕೆ ಪ್ರತಿಸ್ಪಂದಿಸಿ ತಿದಿಯೊತ್ತುವ ಶಕ್ತಿ ಬೇಕಿತ್ತು. ಅಂತಹ ಶಕ್ತಿಯೇ ಚಂಪಾ ಆಗಿದ್ದರು. ನಮ್ಮ ಸುತ್ತಮುತ್ತ ನಡೆಯುತ್ತಿದ್ದ ವಿದ್ಯಮಾನಗಳಿಗೆ ತೀವ್ರವಾಗಿ ಪ್ರತಿಸ್ಪಂದಿಸುವ ಬಂಡಾಯದ ವಾತಾವರಣವನ್ನು ಧಾರವಾಡದಲ್ಲಿ ಸೃಷ್ಟಿಸಿ, ಪೋಷಿಸಿ, ಯುವಪೀಳಿಗೆಗೆ ಅದರ ಅರ್ಥ ಮತ್ತು ಪ್ರಸ್ತುತತೆಯನ್ನು ತಿಳಿಸಿ ವ್ಯವಸ್ಥೆಯ ವಿರುದ್ಧ ಬಂಡಾಯವೇಳುವ ಮನೋಸ್ಥಿತಿಯ ಬೀಜಾಂಕುರ ಮಾಡಿದ್ದು ಚಂಪಾರ ವ್ಯಕ್ತಿತ್ವದ ವಿಶೇಷತೆಯಾಗಿತ್ತು. ಎಂಬತ್ತರ ದಶಕವು ಹಲವು ಹೊಸ ಮನ್ವಂತರಗಳಿಗೆ ಸಾಕ್ಷಿಯಾದ ಪರ್ವಕಾಲ. ದಲಿತ, ಶೋಷಿತ ತಳ ಸಮುದಾಯಗಳಿಂದ ಮೊದಲ ಪೀಳಿಗೆಯವರು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ವ್ಯಾಸಂಗಕ್ಕೆ ನಗರಗಳೆಡೆಗೆ ಮುಖ ಮಾಡಿದ್ದ ಕಾಲ. ಎಲ್ಲರ ಹಾಗೆ ನಾನು ಮತ್ತು ನಮ್ಮ ವಾರಿಗೆಯವರು ಎದೆಯಲ್ಲಿ ಕನಸುಗಳನ್ನಿಟ್ಟುಕೊಂಡು ಧಾರವಾಡಕ್ಕೆ ಬಂದಿದ್ದೆವು. ಬಯಲು ಸೀಮೆಯಿಂದ ಬಂದಿದ್ದ ನಮಗೆ ಧಾರವಾಡ ಹೊಸ ಲೋಕದಂತೆ ಕಾಣುತ್ತಿತ್ತು. ಅಂಬೇಡ್ಕರ್ ಕೊಲಂಬೋ ವಿಶ್ವವಿದ್ಯಾನಿಲಯದ ಹೊಸ್ತಿಲು ತುಳಿದು ಪುಳಕಿತರಾದಂತೆ ನಮಗೂ ಆ ಅನುಭವ ಕಾಡಿದ್ದವು. ಅಂಬೇಡ್ಕರ್ ಅಮೆರಿಕಕ್ಕೆ ಹೋದಾಗ ಅಲ್ಲಿ ಆದ ಅನುಭವ ಹಂಚಿಕೊಳ್ಳುತ್ತ ‘‘ಇಲ್ಲಿ ನಾನು ಸ್ವತಂತ್ರ. ನನ್ನನ್ನು ಯಾರೂ ಅಸ್ಪೃಶ್ಯನೆಂದು ಗುರುತಿಸಲಾರರು. ನಾನು ಮನಸ್ಸು ಬಂದಲ್ಲಿ ಅಸ್ಪೃಶ್ಯತೆಯ ಕಳಂಕವಿಲ್ಲದೇ ತಿರುಗಾಡಬಹುದು. ನನಗೊಂದು ಹೊಸ ಅನುಭವದ ಆವಿಷ್ಕಾರವಿದು’’ ಎಂದು ಬರೆದು ತಮ್ಮ ಅನುಭವ ಹೇಳಿಕೊಂಡಿದ್ದರು. ಧಾರವಾಡಕ್ಕೆ ಹೊಸದಾಗಿ ಬಂದಾಗ ನಮಗೂ ಹಾಗೆಯೇ ಆಗಿತ್ತು. ಧಾರವಾಡದ ಮಲೆನಾಡಿನ ಸಾಂಸ್ಕೃತಿಕ ವಾತಾವರಣವು ನಮ್ಮಲ್ಲಿ ಹೊಸ ಆಲೋಚನೆಗಳು ಹುಟ್ಟಲು ಮತ್ತು ವೈಚಾರಿಕ ಮನೋಭಾವದ ಬೆಳವಣಿಗೆಯಾಗಲು ಪೂರಕವಾಗಿತ್ತು. ನಮ್ಮೆಲ್ಲರಲ್ಲಿ ಶೋಷಣೆಯ ನೋವು ಮಡುಗಟ್ಟಿತ್ತು. ಜಾತಿ ನಿಂದನೆ, ಅವಹೇಳನ, ತುಚ್ಛೀಕರಣದ ಭಾವಗಳು ತೀವ್ರವಾಗಿ ಕಾಡುತ್ತಿದ್ದವು. ಅಸ್ಪೃಶ್ಯತೆಯ ಕಳಂಕದ ಛಾಯೆಯು ನಮ್ಮ ಸುತ್ತಮುತ್ತಲೇ ನೆರಳಿನಂತೆ ಗಿರಕಿ ಹೊಡೆಯುತ್ತಿತ್ತು. ಜಾತಿಯ ಅವಮಾನದ ಕೆಂಡ ಯುವಕರನ್ನು ಸುಡುತ್ತಿತ್ತು. ಶೋಷಣೆಯ ವಿರುದ್ಧ ಸಿಡಿದೇಳಲು ಅದಕ್ಕೊಂದು ಮಾಧ್ಯಮ ಬೇಕಿತ್ತು. ಅಭಿವ್ಯಕ್ತಿಗೊಂದು ವೇದಿಕೆಯ ಅಗತ್ಯವಿತ್ತು. ಚಂಪಾರ ಮೂಲಕ ಬಂಡಾಯವೆಂಬ ಮಾಧ್ಯಮ ಮತ್ತು ‘ಸಂಕ್ರಮಣ’ವೆಂಬ ವೇದಿಕೆ ಸಿಕ್ಕಿದ್ದೇ ತಡ ಮೈಮನಸ್ಸುಗಳಲ್ಲಿ ಅದುಮಿಟ್ಟುಕೊಂಡಿದ್ದ ಸಿಟ್ಟು- ಸೆಡವು, ಹತಾಶೆಗಳು, ಅಸಹಾಯಕತೆಗಳು ಕವಿತೆಯಾಗಿ, ಹಾಡಾಗಿ, ಮಾತುಗಳಾಗಿ ಹೊರಹೊಮ್ಮಲು ಶುರುವಿಟ್ಟುಕೊಂಡವು. ಶೋಷಿತರ, ಅವಮಾನಿತರ, ಧ್ವನಿಯಿಲ್ಲದವರ ಧ್ವನಿಯಾದವು. ಉಸಿರಾದವು. ಚಂಪಾ ಎಂಬ ಛಲಗಾರನ ಕೈಚಳಕವಿದು. ಧಾರವಾಡವೆಂಬ ಮೋಹಿನಿಯ ಮೋಹಕ್ಕೆ ಮರುಳಾಗದವರೇ ಇಲ್ಲ. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಮೂಲೆ ಮೂಲೆಯಿಂದ ಬರುತ್ತಿದ್ದ ವಿದ್ಯಾರ್ಥಿಗಳ ಅನುಭವಗಳು ವೈವಿಧ್ಯಮಯವಾಗಿರುತ್ತಿದ್ದವು. ಕವಿವಿ ಕ್ಯಾಂಪಸ್ ಒಂದರ್ಥದಲ್ಲಿ ಹೊಸ ಮನ್ವಂತರದ ನಿರೀಕ್ಷೆಯಲ್ಲಿದ್ದ ಯುವ ಪೀಳಿಗೆಯ ಕನಸುಗಳಿಗೆ ಮೆಟ್ಟಿಲುಗಳನ್ನೊದಗಿಸಿ ಹೊಸ ಮನುಷ್ಯರನ್ನಾಗಿ ಮಾಡುವ ತಾಕತ್ತಿದ್ದ ವಿದ್ಯಾಕಾಶಿಯಾಗಿತ್ತು. ಇಲ್ಲಿ ನಡೆಯುತ್ತಿದ್ದ ಸೆಮಿನಾರ್‌ಗಳು, ವಿಚಾರ ಸಂಕಿರಣ, ಕವಿಗೋಷ್ಠಿ, ಬೀದಿ ನಾಟಕ ಮತ್ತು ಹೊಸ ಅಲೆಯ ಅಸಂಗತ ನಾಟಕಗಳ ಪ್ರದರ್ಶನ, ಸಾಹಿತ್ಯ ಚಟುವಟಿಕೆಗಳು ನಮ್ಮಲ್ಲಿ ಹೊಸ ಹುಮ್ಮಸ್ಸು ಹುಟ್ಟಿಸಿದ್ದವು. ದಸಂಸದ ಚಟುವಟಿಕೆಗಳು ಹೋರಾಟದ ಕಿಚ್ಚು ಹುಟ್ಟು ಹಾಕಿದ್ದವು. ಈ ಎಲ್ಲ ನಿರಂತರ ಚಟುವಟಿಕೆಗಳು ನಮ್ಮ ಆಲೋಚನಾ ಕ್ರಮವನ್ನೇ ಬದಲಿಸಲಾರಂಭಿಸಿದವು.
ವಿದ್ಯಾರ್ಥಿ ದೆಸೆಯಿಂದಲೇ ಈ ಸಾಹಿತ್ಯಿಕ ವಾತಾವರಣ ನಮ್ಮ ಚಿಂತನೆಗಳನ್ನು ಪರಿಪಕ್ವಗೊಳಿಸಲಣಿಯಾದದ್ದು ಇತಿಹಾಸ. ಈ ಹೊಸ ಅನುಭವಗಳಿಗೆ ನಾವು ಒಡ್ಡಿಕೊಳ್ಳದಿದ್ದರೆ ನಾವು ಹೊಸ ಮನುಷ್ಯರಾಗುತ್ತಿರಲಿಲ್ಲವೇನೋ ಎಂದೆನಿಸದಿರದು. ಮನುಷ್ಯರಾಗುವು ದೆಂದರೆ ಮನುಷ್ಯ ವಿರೋಧಿ ತತ್ವ/ಸಿದ್ಧಾಂತಗಳನ್ನು ವಿರೋಧಿಸುವುದು ಎಂದರ್ಥ. ಮನುಷ್ಯನ ವಿಕಾಸಕ್ಕೆ ಮಾರಕವಾದ ಸಿದ್ಧಾಂತಗಳ ವಿರುದ್ಧ ಪ್ರತಿಭಟಿಸುವ ಮಾರ್ಗಾನ್ವೇಷಣೆಯಲ್ಲಿದ್ದವರಿಗೆ ಮಾರ್ಗ ತೋರಿಸುವ ಮಾರ್ಗದಾತರು ಬೇಕಿದ್ದ ಕಾಲವದು. ಅಂತಹ ಕಾಲಘಟ್ಟದಲ್ಲಿ ಬಂಡಾಯದ ಮಾಧ್ಯಮ ಪರಿಚಯಿಸಿ ಹಸಿ ಹಸಿಯಾಗಿದ್ದ ನಮ್ಮ ಅನುಭವಗಳಿಗೆ ಹೋರಾಟದ ಮೊನಚು ಬರುವಂತೆ ತಿದ್ದಿ ತೀಡಿ ಬಂಡಾಯದ ಮನೋಭಾವ ಬೆಳೆಯಲು ಪ್ರೇರಕ ಶಕ್ತಿಯಾಗಿದ್ದವರು ಚಂಪಾ. ಅವರೊಂದಿಗೆ ನಮ್ಮನ್ನು ಹೆಚ್ಚು ವೈಚಾರಿಕವಾಗಿ ಪ್ರಭಾವಿಸಿದವರು ಮತ್ತು ಬೆಳೆಸಿದವರು ವೈ. ಎಂ. ಮಾದಾರ, ಬಿ. ಪಿ. ವಾಘ್ಮೋರೆ, ಸಂಪಿಗೆ ತೋಂಟದಾರ್ಯ, ಪ್ರೊ. ಶಹಾ, ಸಿದ್ಧಾರ್ಥ ಪೂಜಾರಿ, ತೇಜಸ್ವೀ ಕಟ್ಟೀಮನಿಯವರು ಅಕಾಡಮಿಕ್ ವಲಯದೊಳಗೆ. ಅದರ ಆಚೆ ಎಂ.ಎನ್. ರಾಯಣ್ಣವರ, ಲಕ್ಷ್ಮಣ ನೀಲಣ್ಣವರ, ಇಫ್ಟಾದ ರಾಜ್ಯ ಸಂಚಾಲಕರಾಗಿದ್ದ ಸಿದ್ದನಗೌಡ ಪಾಟೀಲ, ಎಸ್‌ಎಫ್‌ಐನ ಪ್ರಕಾಶ ಉಡಿಕೇರಿ, ರವಿ ಜೋಶಿ, ಉಮೇಶ ಹಿರೇಮಠ ನಮ್ಮಾಂದಿಗೆ ಇದ್ದರು. ಮನೋಹರ ಯಾದವ, ದಯಾನಂದ ಮಾನೆ, ಮಾರುತಿ ಕಾಳೆ, ಹನಮಂತಪ್ಪಅಲ್ಕೊಡ, ಶಿವರುದ್ರ ಕಲ್ಲೋಳಿಕರ, ಶಾಂತೇಶ ಓಲೇಕಾರ ಕೂಡ ಚಳವಳಿಯಲ್ಲಿ ಭಾಗವಹಿಸುತ್ತಿದ್ದ ನೆನಪುಗಳು ಇನ್ನೂ ಹಚ್ಚ ಹಸಿರಾಗಿವೆ.
ಧಾರವಾಡದ ನೌಕರರ ಭವನದಲ್ಲಿ ನಡೆಯುತ್ತಿದ್ದ ವಿಚಾರ ಗೋಷ್ಠಿ ಮತ್ತು ಕವಿಗೋಷ್ಠಿಗಳು ಯುವಪ್ರತಿಭೆಗಳಿಗೆ ಉತ್ತಮ ಅವಕಾಶಗಳನ್ನು ಒದಗಿಸುತ್ತಿದ್ದವು. ಅಲ್ಲಿ ವಿವಿಧ ವಿಷಯಗಳ ಬಗ್ಗೆ ಚಿಂತನ ಮಂಥನ ಚಂಪಾ ಅವರ ನೇತೃತ್ವದಲ್ಲಿ ನಡೆಯುತ್ತಿತ್ತು. ಚಂಪಾ ಅವರ ಟಿಪಿಕಲ್ ತಿಳಿಹಾಸ್ಯದ ಸ್ವಾರಸ್ಯಕರ ಮಾತುಗಳು ನಮ್ಮನ್ನು ಪ್ರಭಾವಿಸುತ್ತಿದ್ದವಲ್ಲದೇ ನಮ್ಮಲ್ಲಿದ್ದ ಹಲವಾರು ಸಂಶಯ ಮತ್ತು ಇನ್ಕನ್ಸಿಸ್ಟನ್ಸಿಗಳಿಗೆ ಉತ್ತರ ಸಿಗುತ್ತಿತ್ತು. ಬಹಳ ಜನ ಯುವಕರಿಗೆ ತಮ್ಮ ಸಂಕ್ರಮಣದಲ್ಲಿ ಅವಕಾಶ ನೀಡುತ್ತಿದ್ದರು. ನನ್ನ ಲೇಖನವನ್ನು ಸಂಕ್ರಮಣದಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದ್ದರು. ಗದ್ದರ್ ಕಾರ್ಯಕ್ರಮವನ್ನು ಧಾರವಾಡದ ಕಲಾ ಭವನದಲ್ಲಿ ಜನನಾಟ್ಯ ಕಲಾ ಮಂಡಳಿಯವರು ಆಯೋಜಿಸಿದ್ದರು. ಕಾರ್ಯಕ್ರಮ ನೋಡಲು ಕಿಕ್ಕಿರಿದು ಜನ ಸೇರಿದ್ದರು. ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಗದ್ದರ್ ಗರ್ಜನೆಯ ಹಾಡುಗಳು ಮೂಡಿಬಂದು ನೆರೆದಿದ್ದ ಯುವಕರನ್ನು ಮಂತ್ರಮುಗ್ಧರನ್ನಾಗಿಸಿದವು. ಎರಡೂವರೆ ತಾಸುಗಳ ಆ ಕಾರ್ಯಕ್ರಮ ಯುವಕರೆದೆಯಲ್ಲಿ ಜ್ವಾಲೆಯನ್ನೇ ಹೊತ್ತಿಸಿತ್ತು. ಎಲ್ಲಿ ನೋಡಿದರೂ ಗದ್ದರ್ ಬಗ್ಗೆ ಚರ್ಚೆ. ಬಂಡಾಯದ ಬಿಸಿ ತಗಲಿಸಿಕೊಂಡಿದ್ದ ನಮಗೆ ಗದ್ದರ್ ಹಾಡುಗಳು ಮತ್ತಷ್ಟು ಕಿಚ್ಚು ಹಚ್ಚಿದ್ದವು. ಚಂಪಾ ಹಾಕಿದ್ದ ಬಂಡಾಯದ ಬೆಂಕಿ ಎದೆಯಲ್ಲಿ ಧಗಧಗ ಉರಿಯುತ್ತಿರುವಾಗಲೇ ಗದ್ದರ್ ಹಾಡಿನ ಜ್ವಾಲೆ ನಮ್ಮನ್ನು ಆವರಿಸಿಕೊಂಡು ಬಿಟ್ಟಿತ್ತು. ಜಾತಿ ಶೋಷಣೆ, ಅವಮಾನ, ಅವಹೇಳನ ಮತ್ತು ತುಚ್ಛೀಕರಣಕ್ಕೊಳಗಾದ ಹೀನ ಸ್ಥಿತಿಯ ಹಿನ್ನೆಲೆಯಿಂದ ಬಂದಿದ್ದ ಯಾರೇ ಆದರೂ ಗದ್ದರ್ ಪ್ರಭಾವಕ್ಕೊಳಗಾಗುವುದರಲ್ಲಿ ಸಂಶಯವೇ ಇರಲಿಲ್ಲ. ನಮಗೂ ಕೆಲವು ದಿವಸ ಆ ಗುಂಗು ಸೇರಿಕೊಂಡಿತ್ತು. ಚಂಪಾ ನಮ್ಮಲ್ಲಿ ಹೋರಾಟದ ಕಿಚ್ಚು ಹಚ್ಚಿದ್ದರ ಪರಿಣಾಮ ಇದು. ಧಾರವಾಡದಲ್ಲಿ ವಿವಿಧೆಡೆ ನಡೆಯುತ್ತಿದ್ದ ಹಲವಾರು ಕಾರ್ಯಕ್ರಮಗಳಲ್ಲಿ ಜಾತಿ ವ್ಯವಸ್ಥೆ, ಅದರ ತಾರತಮ್ಯ, ಕಂದಾಚಾರ, ಮೌಢ್ಯಗಳು, ಡಂಭಾಚಾರ, ಅನ್ಯಾಯ, ಶೋಷಣೆಗಳ ಬಗ್ಗೆ ಚಂಪಾ ಮಾಡುತ್ತಿದ್ದ ಭಾಷಣಗಳು ನಮ್ಮನ್ನು ಹೆಚ್ಚು ಪ್ರಭಾವಿಸಿದ್ದವು.







