ಅಮಾನತುಗೊಂಡ ಐಎಎಸ್ ಅಧಿಕಾರಿ ಜೊತೆ ಅಮಿತ್ ಶಾ ಇರುವ ಫೋಟೋ ಹಂಚಿಕೊಂಡಿದ್ದಕ್ಕೆ ಚಿತ್ರ ನಿರ್ಮಾಪಕ ಅವಿನಾಶ್ ದಾಸ್ ಬಂಧನ
Photo: Screenshot/Youtube via Sansad TV
ಹೊಸದಿಲ್ಲಿ: ಅಮಾನತುಗೊಂಡ ಭಾರತೀಯ ಆಡಳಿತ ಸೇವಾ(ಐಎಎಸ್) ಅಧಿಕಾರಿ ಪೂಜಾ ಸಿಂಘಾಲ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿದ್ದ ಫೋಟೋವನ್ನು ಹಂಚಿಕೊಂಡಿದ್ದಕ್ಕಾಗಿ ಚಲನಚಿತ್ರ ನಿರ್ಮಾಪಕ ಅವಿನಾಶ್ ದಾಸ್ ಅವರನ್ನು ಮುಂಬೈನಿಂದ ಗುಜರಾತ್ ಪೊಲೀಸರು ವಶಕ್ಕೆ ಪಡೆದ ಒಂದು ದಿನದ ನಂತರ ಬುಧವಾರ ಬಂಧಿಸಲಾಗಿದೆ ಎಂದು ‘ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಮೇ 8 ರಂದು ದಾಸ್ ಅವರು ಹಂಚಿಕೊಂಡ ಶಾ ಹಾಗೂ ಸಿಂಘಾಲ್ ಅವರ ಫೋಟೋವನ್ನು 2017 ರಲ್ಲಿ ರಾಂಚಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತೆಗೆದುಕೊಳ್ಳಲಾಗಿದೆ.
ಗೃಹ ಸಚಿವರ ಮಾನಹಾನಿ ಹಾಗೂ ನಾಗರಿಕರನ್ನು ದಾರಿ ತಪ್ಪಿಸುವ ಉದ್ದೇಶದಿಂದ ಚಿತ್ರ ನಿರ್ಮಾಪಕರು ಈ ಫೋಟೋ ಶೇರ್ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಮೊದಲ ಮಾಹಿತಿ ವರದಿಯ ಪ್ರಕಾರ, ಅಮಾನತುಗೊಂಡ ಐಎಎಸ್ ಅಧಿಕಾರಿಯ ಬಂಧನಕ್ಕೆ ಕೆಲವು ದಿನಗಳ ಮೊದಲು ಫೋಟೋವನ್ನು ತೆಗೆದುಕೊಳ್ಳಲಾಗಿದೆ ಎಂದು ದಾಸ್ ಹೇಳಿದ್ದಾರೆ, ಆದರೂ ಅದನ್ನು 2017 ರಲ್ಲಿ ಕ್ಲಿಕ್ ಮಾಡಲಾಗಿದೆ.
ಜಾರ್ಖಂಡ್ನ ಮಾಜಿ ಗಣಿ ಇಲಾಖೆ ಕಾರ್ಯದರ್ಶಿ ಸಿಂಘಾಲ್ ರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮೇ 12 ರಂದು ಜಾರಿ ನಿರ್ದೇಶನಾಲಯ(ಈಡಿ) ಬಂಧಿಸಿದೆ.