ಮಂಗಳೂರು | ವಿದ್ಯಾರ್ಥಿಗಳ ಅನುಚಿತ ವರ್ತನೆಯ ವೀಡಿಯೋ ವೈರಲ್; ಪೊಲೀಸರಿಂದ ತನಿಖೆ ಆರಂಭ: ಶಶಿಕುಮಾರ್
8 ಮಂದಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲು

ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್
ಮಂಗಳೂರು, ಜು. 21: ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಅನುಚಿತ ವರ್ತನೆಯ ವೀಡಿಯೋ ವೈರಲ್ ಆಗಿರುವುದಕ್ಕೆ ಸಂಬಂಧಿಸಿ ಪರಿಶೀಲನೆ ನಡೆಸಲಾಗುತ್ತಿದೆ. ವೀಡಿಯೋ ಮಾಡಿರುವ ವಿದ್ಯಾರ್ಥಿಯನ್ನು ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರಿಗೆ ಈ ಬಗ್ಗೆ ಇಂದು ಮಾಹಿತಿ ನೀಡಿದ ಅವರು, ಈ ಘಟನೆ ಕಳೆದ ಜನವರಿಯಲ್ಲಿ ನಡೆದಿರುವುದೆನ್ನಲಾಗಿದೆ. ನಗರದ ಅಪಾರ್ಟ್ಮೆಂಟ್ವೊಂದರಲ್ಲಿ ಸುಮಾರು ಎರಡು ತಿಂಗಳು ಕಾಲ ಮಾತ್ರವೇ ಇಬ್ಬರು ಕಾಲೇಜು ವಿದ್ಯಾರ್ಥಿಗಳಿಗೆ ರೂಂ ಬಾಡಿಗೆಗೆ ನೀಡಲಾಗಿತ್ತು. ಬಳಿಕ ಆ ವಿದ್ಯಾರ್ಥಿಗಳು ತಮ್ಮ ಷರತ್ತಿಗೆ ವಿರುದ್ಧವಾಗಿ ರೂಂನಲ್ಲಿ ಮದ್ಯಪಾನ ಮಾಡಿರುವುದು ತಿಳಿದು ಅವರನ್ನು ರೂಂ ಖಾಲಿ ಮಾಡಿಸಲಾಗಿತ್ತು ಎಂದು ಅಪಾರ್ಟ್ಮೆಂಟ್ನ ಮಾಲಕರು ವಿಚಾರಣೆಯ ವೇಳೆ ಮಾಹಿತಿ ನೀಡಿದ್ದಾರೆ ಎಂದವರು ತಿಳಿಸಿದ್ದಾರೆ.
ಈ ವೀಡಿಯೋ ಕೆಲ ದಿನಗಳ ಹಿಂದೆ ವೈರಲ್ ಆಗಿ ಈ ವಿಷಯ ಕಾಲೇಜಿನ ಆಡಳಿತ ಮಂಡಳಿ ವಿಷಯಕ್ಕೂ ಗಮನಕ್ಕೆ ಬಂದು ಕಾಲೇಜಿನ ಶಿಸ್ತು ಪಾಲನಾ ಸಮಿತಿಯ ಆಂತರಿಕ ತನಿಖೆಯ ಬಳಿಕ ವೀಡಿಯೋದಲ್ಲಿದ್ದ ವಿದ್ಯಾರ್ಥಿಗಳನ್ನು ಸಸ್ಪೆಂಡ್ ಮಾಡಿರುವುದಾಗಿ ಕಾಲೇಜು ಆಡಳಿತ ಮಂಡಳಿ ಪ್ರಮುಖರು ತಿಳಿಸಿದ್ದಾರೆ. ಮಕ್ಕಳು ಟ್ರೂ ಆ್ಯಂಡ್ ಡೇರ್ ಎಂಬ ಆಟವಾಡುವ ವೇಳೆ ನಡೆದ ಘಟನೆ ಎಂಬುದಾಗಿ ಹೇಳಿಕೊಂಡಿದ್ದು, ಈ ವೀಡಿಯೋದಲ್ಲಿದ್ದ ಓರ್ವ ವಿದ್ಯಾಥಿಯೇ ಇದನ್ನು ತನ್ನ ತರಗತಿಯ ವಾಟ್ಸಾಪ್ ಗುಂಪಿಗೆ ಶೇರ್ ಮಾಡಿದ್ದ ಎನ್ನಲಾಗಿದೆ. ಇದು ತರಗತಿಯ ಸಂಯೋಜಕರ ಗಮನಕ್ಕೆ ಬಂದು ಅವರು ಪ್ರಾಂಶುಪಾಲರಿಗೆ ಮಾಹಿತಿ ನೀಡಿ ಪೋಷಕರನ್ನು ಕರೆಸಿ ಈ ಬಗ್ಗೆ ಆಂತರಿಕ ವಿಚಾರಣೆಗೊಳಪಡಿಸಿದ್ದಾಗಿ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ ಬಗ್ಗೆ ನಿನ್ನೆ ತಡರಾತ್ರಿ ಪೊಲೀಸರ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇಂದು ಬೆಳಗ್ಗಿನಿಂದ ಅಧಿಕಾರಿಗಳು ಪರಿಶೀಲನೆ ಆರಂಭಿಸಿದ್ದಾರೆ. ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಆಗಿರುವ ಬಗ್ಗೆ ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಹಾಗೂ ಘಟನೆ ಸಂದರ್ಭ ಅಮಲು ಪದಾರ್ಥ ಸೇವೆ ಸೇರಿದಂತೆ ಎಲ್ಲಾ ವಿಚಾರಗಳ ಕುರಿತಂತೆ ಜತೆಗೆ ಮಕ್ಕಳ ವಯಸ್ಸು ಎಲ್ಲವನ್ನೂ ತಿಳಿದುಕೊಂಡು ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಕಾಲೇಜು ಆಡಳಿತ ಮಂಡಳಿಗಳಿಗೆ ಸೂಚನೆ
ತಮ್ಮ ಸಂಸ್ಥೆಗಳಲ್ಲಿ ಅಧ್ಯಯನ ನಡೆಸುವ ವಿದ್ಯಾರ್ಥಿಗಳ ನಡವಳಿಕೆ, ಚಟುವಟಿಕೆ ಬಗ್ಗೆ ಕಾಲೇಜು ಆಡಳಿತ ಮಂಡಳಿ ಗಮನ ಹರಿಸಬೇಕು. ರ್ಯಾಗಿಂಗ್ ಸೇರಿದಂತೆ ಇಂತಹ ಘಟನೆಗಳು ನಡೆದಾಗ ಕಾಲೇಜು ಆಡಳಿತ ಮಂಡಳಿ ಆಂತರಿಕ ತನಿಖೆ ಮೂಲಕ ಬಗೆಹರಿಸಿಕೊಳ್ಳುತ್ತವೆ. ಆದರೆ ಈ ಬಗ್ಗೆ ಪೊಲೀಸರ ಗಮನಕ್ಕೆ ತರುವ ಮೂಲಕ ಸೂಕ್ತ ವಿಚಾರಣೆಗೆ ಅವಕಾಶ ನೀಡಿದರೆ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದರು. ಡಿಸಿಪಿ ಅಂಶು ಕುಮಾರ್ ಉಪಸ್ಥಿತರಿದ್ದರು.
8 ಮಂದಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲು
2022ರ ಜನವರಿ 10ರಂದು ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಠಾಣೆಯಲ್ಲಿ 8 ಮಂದಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ವಿದ್ಯಾರ್ಥಿನಿಯರು ಅಪ್ರಾಪ್ತರಾಗಿದ್ದಾರೆ. ಹಾಗಾಗಿ ಆರೋಪಿಗಳ ವಿರುದ್ಧ ಪೊಕ್ಸೊ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.







