ಚೀನಿ ಕಂಪನಿಯಿಂದ 39,000 ಗಾಲಿಗಳನ್ನು ಖರೀದಿಸಲಿರುವ ಭಾರತೀಯ ರೈಲ್ವೆ: ಕೇಂದ್ರ

ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಭಾರತೀಯ ರೈಲ್ವೆಯು ಬೋಗಿಗಳಿಗಾಗಿ 39,000 ಗಾಲಿಗಳನ್ನು ಪೂರೈಸುವಂತೆ ಚೀನದ ತಯಾರಿಕೆ ಸಂಸ್ಥೆಗೆ ಬೇಡಿಕೆಯನ್ನು ಸಲ್ಲಿಸಿದೆ ಎಂದು ಕೇಂದ್ರ ಸರಕಾರವು ಲೋಕಸಭೆಯಲ್ಲಿ ತಿಳಿಸಿದೆ.
ಟಿಎಂಸಿ ಸಂಸದೆ ಮಾಲಾ ರಾಯ್ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ರೈಲ್ವೆ ಸಚಿವ ಆಶ್ವಿನಿ ವೈಷ್ಣವ್ ಅವರು,ಚೀನಾದ ತೈಯ್ಯುನ್ ಕಂಪನಿಯೊಂದಿಗೆ ಮಾಡಿಕೊಳ್ಳಲಾಗಿರುವ ಒಪ್ಪಂದದ ವಿವರಗಳನ್ನು ನೀಡಿದ್ದಾರೆ.
ಈ ಹಿಂದೆ 30,000 ಗಾಲಿಗಳಿಗಾಗಿ ಉಕ್ರೇನ್ನ ಕಂಪನಿಯೊಂದಕ್ಕೆ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಆದರೆ ರಶ್ಯದ ಆಕ್ರಮಣದಿಂದಾಗಿ ಅದನ್ನು ಪೂರೈಸಲು ಕಂಪನಿಯು ಸಮರ್ಥವಾಗಿರಲಿಲ್ಲ. ಹೀಗಾಗಿ ಅದಕ್ಕೆ ವಿದ್ಯುಕ್ತ ಪೂರೈಕೆ ಆದೇಶವನ್ನು ನೀಡಲಾಗಿರಲಿಲ್ಲ ಎಂದು ವೈಷ್ಣವ ತಿಳಿಸಿದ್ದಾರೆ.
ಪ್ರತಿ ಗಾಲಿಗೆ ತೈಯ್ಯುನ್ನ ದರವು ಉಕ್ರೇನ್ ಕಂಪನಿಯ ದರಕ್ಕಿಂತ ಶೇ.1.68ರಷ್ಟು ಅಧಿಕವಾಗಿದೆ ಎಂದೂ ಅವರು ಹೇಳಿದ್ದಾರೆ.
ಉಭಯ ದೇಶಗಳ ನಡುವೆ ಗಡಿ ಉದ್ವಿಗ್ನತೆಯ ಹೊರತಾಗಿಯೂ ಚೀನಾದಿಂದ ಭಾರತಕ್ಕೆ ರಫ್ತುಗಳು 2021-22ನೇ ಸಾಲಿನಲ್ಲಿ ಶೇ.45.51ರಷ್ಟು ಏರಿಕೆಯನ್ನು ದಾಖಲಿಸಿವೆ. ಇದೇ ಅವಧಿಯಲ್ಲಿ ಭಾರತದಿಂದ ಚೀನಾಕ್ಕೆ ರಫ್ತು ಶೇ.0.61ರಷ್ಟು ಏರಿಕೆಯನ್ನು ಕಂಡಿದೆ ಎಂದು ಕಳೆದ ತಿಂಗಳು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಬಿಡುಗಡೆಗೊಳಿಸಿದ ಅಂಕಿಅಂಶಗಳು ತೋರಿಸಿವೆ.
ಚೀನಾದಿಂದ ಬೃಹತ್ ಆಮದುಗಳಲ್ಲಿ ಕಬ್ಬಿಣ ಮತ್ತು ಉಕ್ಕಿನ ಸರಕುಗಳು, ರಸಗೊಬ್ಬರಗಳು, ಎಣ್ಣೆಬೀಜಗಳು, ರೇಷ್ಮೆ ಇತ್ಯಾದಿಗಳು ಸೇರಿವೆ.







