ಜಿ. ರಾಜಶೇಖರ್ ನಿಧನ; ಪಿಎಫ್‌ಐ, ಸಿಪಿಎಂ, ಸಮಾನ ಮನಸ್ಕ ಸಂಘಟನೆ ಸಂತಾಪ

ಮಂಗಳೂರು : ಪ್ರಖರ ಚಿಂತಕ, ಮಾನವ ಹಕ್ಕುಗಳ ಹೋರಾಟಗಾರ, ವಿಮರ್ಶಕ ಸಹಿತ ಬಹುಮುಖ ವ್ಯಕ್ತಿತ್ವದ ಜಿ. ರಾಜಶೇಖರ್ ದೇಶದಲ್ಲಿ ನಡೆಯುತ್ತಿದ್ದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಕ್ಷೇತ್ರಗಳ ಬೆಳವಣಿಗೆಗಳ ಬಗ್ಗೆ ಅವರು ಓರ್ವ ಸೂಕ್ಷ್ಮಗ್ರಹಿಯಾಗಿದ್ದರು. ತಮ್ಮ ತೀಕ್ಷ್ಣವಾದ ಬರಹ-ಭಾಷಣಗಳ ಮೂಲಕ ಅದನ್ನು ಪ್ರಸ್ತುತಪಡಿಸುತ್ತಿದ್ದ ರೀತಿ ಅದ್ಭುತವಾದುದು. ರಾಜ್ಯದಲ್ಲಿ ಕೋಮು ಸಾಮರಸ್ಯ, ಶಾಂತಿ, ಸಹಬಾಳ್ವೆಗಾಗಿ ನಿರಂತರ ಶ್ರಮಿಸಿದ್ದರು. ಮನುಷ್ಯ ವಿರೋಧಿಯಾಗಿದ್ದ ಹಿಂದುತ್ವ ಫ್ಯಾಶಿಸ್ಟ್ ಸಿದ್ಧಾಂತಗಳನ್ನು ಅವರು ಕಟುವಾಗಿ ಟೀಕಿಸುತ್ತಿದ್ದರು. ದಲಿತರು, ಮುಸ್ಲಿಮರು ಸಹಿತ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿದ್ದ ದಾಳಿಗಳ ವಿರುದ್ಧ ಅವರು ಕಳವಳ ಹೊಂದಿದ್ದರು. ಮಾನವ ಹಕ್ಕುಗಳ ಉಲ್ಲಂಘನೆಗಳ ಪ್ರಕರಣಗಳು ನಡೆದಾಗ ಆ ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿ ಅದರ ಬಗ್ಗೆ ಸತ್ಯ ಶೋಧನಾ ವರದಿಯನ್ನು ಸಿದ್ಧಪಡಿಸುತ್ತಿದ್ದರು. ಕರಾವಳಿ ಜಿಲ್ಲೆಗಳಲ್ಲಿ ಸಂಘಪರಿವಾರದ ಆಕ್ರಮಣದ ವಿರುದ್ಧ ಸಿದ್ಧಪಡಿಸಿದ ವರದಿಗಳನ್ನು ಅವರು ಅನೇಕ ಸಾರ್ವಜನಿಕ ವೇದಿಕೆಗಳಲ್ಲಿ ಮಂಡಿಸಿದ್ದರು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಸಿರ್ ಪಾಶ ಹಾಗೂ ಪ್ರಧಾನ ಕಾರ್ಯದರ್ಶಿ ಅಯ್ಯೂಬ್ ಅಗ್ನಾಡಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದ.ಕ.ಜಿಲ್ಲಾ ಎಸ್‌ಡಿಪಿಐ
ಹಿಂದುತ್ವ ಫಾಶಿಸ್ಟ್ ವಿರೋಧಿ ಚಳುವಳಿಯ ಹೋರಾಟಗಾರ, ಚಿಂತಕ, ಲೇಖಕ, ಕೋಮು ಸೌದಾರ್ದ ವೇದಿಕೆಯ ನಾಯಕರಾಗಿದ್ದ ಜಿ. ರಾಜಶೇಖರ್ ದ.ಕ. ಸಹಿತ ರಾಜ್ಯದಲ್ಲಿ ಹಲವು ಹೋರಾಟಗಳನ್ನು ಸಂಘಟಿಸಿದ್ದರು. ದೇಶದಲ್ಲಿ ಏನೇ ಅನ್ಯಾಯ ನಡೆದರೂ ತಕ್ಷಣ ಹೋರಾಟ ರಂಗಕ್ಕೆ ಧುಮುಕಿ ಜನರನ್ನು ಸಂಘಟಿಸಿ ಪ್ರಜಾಪ್ರಭುತ್ವದ ಪರ ಮತ್ತು ಹಿಂದುತ್ವ ಫ್ಯಾಶಿಸ್ಟ್ ಸಿದ್ಧಾಂತದ ವಿರುದ್ಧ ಪ್ರಬಲ ಧ್ವನಿಯಾಗಿದ್ದರು. ಫ್ಯಾಸಿಸಂ ವಿರುದ್ಧ ರಾಜಿರಹಿತ ಹೋರಾಟ ನಡೆಸುತ್ತಿದ್ದ ಅವರ ಅಗಲುವಿಕೆಯು ಶೋಷಿತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದ.ಕ.ಜಿಲ್ಲಾ ಸಿಪಿಎಂ
ಖ್ಯಾತ ವಿಮರ್ಶಕ, ಚಿಂತಕ, ಕೋಮುವಾದದ ವಿರುದ್ಧ ರಾಜಿ ರಹಿತ ಹೋರಾಟ ನಡೆಸಿದ್ದ ರಾಜಶೇಖರ್‌ರ ನಿಧನದಿಂದ ಜಾತ್ಯತೀತ, ಪ್ರಜಾಸತ್ತಾತ್ಮಕ, ಪ್ರಗತಿಪರ ಶಕ್ತಿಗಳಿಗೆ ತುಂಬಲಾರದ ನಷ್ಟವಾಗಿದೆ. ರೈತರ ಕಾರ್ಮಿಕರ, ವಿದ್ಯಾರ್ಥಿ ಯುವಜನರ ಮಧ್ಯೆ ಸೈದ್ಧಾಂತಿಕ ಪ್ರಗತಿಪರ ಮನೋಭಾವ ಮತ್ತು ಹೋರಾಟದ ಕೆಚ್ಚನ್ನು ರೂಪಿಸಲು ಅವಿಶ್ರಾಂತವಾಗಿ ದುಡಿದಿದ್ದರು. ಸಂಘಪರಿವಾರದ ರಾಜಕೀಯ ಹುನ್ನಾರಗಳನ್ನು ಸದಾ ಬಹಿರಂಗಪಡಿಸುತ್ತಿದ್ದ ಅವರ ಹೋರಾಟ ಅವಿಸ್ಮರಣೀಯ ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಮಾನ ಮನಸ್ಕ ಸಂಘಟನೆ
ಖ್ಯಾತ ವಿಮರ್ಶಕ, ಚಿಂತಕ, ಬರಹಗಾರ ಜಿ ರಾಜಶೇಖರರ ನಿಧನಕ್ಕೆ ಮಂಗಳೂರಿನ ಎಡ ಹಾಗು ಜನಪರ ಪಕ್ಷ, ಸಂಘಟನೆಗಳು ತೀವ್ರ ಸಂತಾಪ ವ್ಯಕ್ತಪಡಿಸಿವೆ. ಕೋಮುವಾದ, ಫ್ಯಾಸಿಸಂ ವಿರುದ್ದದ ದೃಢ ಧ್ವನಿಯಾಗಿದ್ದ ರಾಜಶೇಖರ್ ಒಂದೆರಡು ತಲೆಮಾರನ್ನು ಪ್ರಭಾವಿಸಿದ ಮಹಾನ್ ಚಿಂತಕರಾಗಿದ್ದರು ಎಂದು ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್, ಹಿರಿಯ ವಿಚಾರವಾದಿ ನರೇಂದ್ರ ನಾಯಕ್, ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ, ಮನೋಜ್ ವಾಮಂಜೂರು, ಸಿಐಟಿಯು ಜಿಲ್ಲಾ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ದಲಿತ ಮುಖಂಡ ಎಂ. ದೇವದಾಸ್, ಪ್ರಗತಿಪರ ಚಿಂತಕರ ವೇದಿಕೆಯ ಡಾ. ಕೃಷ್ಣಪ್ಪ ಕೊಂಚಾಡಿ, ಡಿವೈಎಫ್‌ಐ ಜಿಲ್ಲಾ ಮುಖಂಡರಾದ ಬಿ.ಕೆ.ಇಮ್ತಿಯಾಝ್, ಸಂತೋಷ್ ಬಜಾಲ್,ನವೀನ್ ಕೊಂಚಾಡಿ, ಎಸ್‌ಎಫ್‌ಐ ನಾಯಕರಾದ ವಿನೀತ್ ಎಂ.ದೇವಾಡಿಗ, ರೇವಂತ್ ಕದ್ರಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.