ಬೆಂಗಳೂರು; ಈಡಿ ಕಚೇರಿ ಎದುರು ಪ್ರತಿಭಟನೆ ವೇಳೆ ಕಾರಿಗೆ ಬೆಂಕಿ: 11 ಜನ ವಶಕ್ಕೆ

ಬೆಂಗಳೂರು, ಜು.21: ಇಲ್ಲಿನ ಶಾಂತಿನಗರದ ಈಡಿ ಕಚೇರಿ ಮುಂದೆ ಎರಡು ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣ ಸಂಬಂಧ 11 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಂತಿನಗರದಲ್ಲಿರುವ ಈಡಿ ಕಚೇರಿ ಮುಂದೆ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡು ಪ್ರತಿಭಟನೆ ನಡೆಸಿದರು. ಈ ವೇಳೆ ರಸ್ತೆಬದಿ ಪಾರ್ಕ್ ಮಾಡಲಾಗಿದ್ದ ಎರಡು ಕಾರುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ನೋಡ ನೋಡುತ್ತಿದ್ದಂತೆ ಕಾರುಗಳು ಧಗ-ಧಗನೇ ಹೊತ್ತಿ ಉರಿದು ಸಂಪೂರ್ಣ ಹಾನಿಯಾಗಿವೆ ಎಂದರು.
ಕಾರುಗಳಿಗೆ ಬೆಂಕಿ ಇಟ್ಟ 11 ಮಂದಿಯನ್ನು ಈಗಾಗಲೇ ವಶಕ್ಕೆ ಪಡೆದುಕೊಳ್ಳಲಾಗಿದೆ. ಕಾರನ್ನು ತಂದವರೂ ಸಹ ಪೊಲೀಸರ ವಶದಲ್ಲಿದ್ದಾರೆ. ಮತ್ತೊಂದೆಡೆ ಬೆಂಕಿ ಇಟ್ಟವರು ಕಾಂಗ್ರೆಸ್ ಕಾರ್ಯಕರ್ತರು ಎಂದೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತಂತೆ ಪೊಲೀಸ್ ವಶಕ್ಕೆ ಪಡೆದವರ ವಿಚಾರಣೆ ನಡೆಸಿ ಸೂಕ್ತ ಮಾಹಿತಿ ಕಲೆ ಹಾಕಲಾಗುತ್ತದೆ. ಜೊತೆಗೆ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.







