ಗಂಗೊಳ್ಳಿಯಲ್ಲಿ 100 ಕೋಟಿ ರೂ. ವೆಚ್ಚದ ಕೋಸ್ಟಲ್ ಬರ್ತ್ ನಿರ್ಮಾಣ
ಉಡುಪಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಂಗೊಳ್ಳಿ ಯಲ್ಲಿ ಸುಮಾರು 100 ಕೋಟಿ ರೂ. ವೆಚ್ಚದಲ್ಲಿ ಕೋಸ್ಟಲ್ ಬರ್ತ್ ನಿರ್ಮಿಸಲು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೋವಾಲ ಒಪ್ಪಿಗೆ ಸೂಚಿಸಿದ್ದಾರೆ.
ಶಿವಮೊಗ್ಗದ ಸಂಸದ ಬಿ.ವೈ.ರಾಘವೇಂದ್ರ ಈ ವಿಷಯ ತಿಳಿಸಿದ್ದಾರೆ. ಕೋಸ್ಟಲ್ ಬರ್ತ್ ನಿರ್ಮಾಣದಿಂದ ಮತ್ಸೋದ್ಯಮಕ್ಕೆ ಪೂರಕ ವಾತಾವರಣ ಸಿಗಲಿದೆ. ಸಾಗರಮಾಲ ಯೋಜನೆಯಲ್ಲಿ ಬಂದರು ಸಂಪರ್ಕ ಕೂಡ ಆಗಲಿದ್ದು, ಮುಂದಿನ ದಿನಗಳಲ್ಲಿ ಗಂಗೊಳ್ಳಿ ಒಂದು ಅತ್ಯುತ್ತಮ ವಾಣಿಜ್ಯ ಕೇಂದ್ರವಾಗಿ ಹೊರಹೊಮ್ಮಲಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದ್ದಾರೆ.
ಅಲ್ಲದೇ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಣ್ಣ ಕೈಗಾರಿಕೋದ್ಯಮಗಳನ್ನು ಪ್ರೋತ್ಸಾಹಿಸಲು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ದಿ ನಿಗಮ ನಿಯಮಿತ ಇವರ ವತಿಯಿಂದ ಕೈಗಾರಿಕಾ ವಸಾಹತು (ಇಂಡಸ್ಟ್ರಿಯಲ್ ಟೌನ್‌ಶಿಪ್) ನಿರ್ಮಿಸಲು ಉಡುಪಿ ಜಿಲ್ಲಾಡಳಿತಕ್ಕೆ ಸ್ಥಳ ಗುರುತು ಮಾಡಲು ವಿನಂತಿಸಲಾಗಿದ್ದು, ಇದರಂತೆ ಸುಮಾರು ೧೯ ಎಕ್ರೆ ಸ್ಥಳವನ್ನು ಗುರುತಿಸಿ ಕೈಗಾರಿಕಾ ವಸಾಹತು ನಿರ್ಮಿಸಲು ಕ್ರಮಕೈಗೊಳ್ಳ ಲಾಗಿದೆ ಎಂದು ತಿಳಿಸಿದ್ದಾರೆ.
ಇವುಗಳಿಂದ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಸಾವಿರಾರು ಉದ್ಯೋಗ ಸೃಷ್ಠಿಯಾಗಲಿದೆ. ಈ ಎಲ್ಲಾ ಯೋಜನೆಗಳಿಗೆ ಸಹಕರಿಸಿದ ಕೇಂದ್ರ ಹಾಗೂ ರಾಜ್ಯದ ಸರಕಾರಗಳಿಗೆ ಸಂಸದ ಬಿ. ವೈ. ರಾಘವೇಂದ್ರ ಕೃತಜ್ಞತೆ ಸಲ್ಲಿಸಿದ್ದಾರೆ.