ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಶೇ.33ರಷ್ಟು ರಾಜಕೀಯ ಮೀಸಲಾತಿ ಕಲ್ಪಿಸಲು ಶಿಫಾರಸ್ಸು

ವರದಿಯನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸುತ್ತಿರುವುದು
ಬೆಂಗಳೂರು, ಜು. 21: ‘ರಾಜ್ಯದಲ್ಲಿನ ಹಿಂದುಳಿದ ವರ್ಗಗಳಿಗೆ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶೇ.33ರಷ್ಟು ರಾಜಕೀಯ ಮೀಸಲಾತಿ ಕಲ್ಪಿಸುವುದನ್ನು ಮುಂದುವರಿಸಬೇಕು. ಪ್ರವರ್ಗ ಎ, ಬಿ ಮತ್ತು ಎಸ್ಸಿ-ಎಸ್ಟಿ ವರ್ಗದವರಿಗೆ ಒಟ್ಟಾರೆ ಮೀಸಲಾತಿ ಶೇ.50ರಷ್ಟು ಮೀರಬಾರದು' ಎಂದು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಕುರಿತು ಪರಿಶೀಲಿಸಲು ನೇಮಿಸಿದ್ದ ನ್ಯಾ.ಭಕ್ತವತ್ಸಲ ಆಯೋಗವು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.
ಗುರುವಾರ ನಗರದ ರೇಸ್ಕೋರ್ಸ್ ರಸ್ತೆಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧಿಕೃತ ನಿವಾಸದಲ್ಲಿ ಆಯೋಗದ ಸದಸ್ಯ ಸಿ.ಆರ್.ಚಿಕ್ಕಮಠ ಅವರು ಆಯೋಗದ ವರದಿಯನ್ನು ಮುಖ್ಯಮಂತ್ರಿಗೆ ಹಸ್ತಾಂತರಿಸಿದರು.
ಇತರೆ ಹಿಂದುಳಿದ ವರ್ಗಗಳಿಗೆ ಸೇರಿದ ವ್ಯಕ್ತಿಗಳಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಮೀಸಲಾತಿ ಒದಗಿಸುವುದನ್ನು ಪರಿಗಣಿಸಬೇಕು. ಎಲ್ಲ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ವಿಭಾಗಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ನಿಯಂತ್ರಣಕ್ಕೆ ತರಬೇಕು.
‘ಬಿಬಿಎಂಪಿ-2020ರ ಕಾಯ್ದೆ ಅನ್ವಯ ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳಿಗೆ ಮೂವತ್ತು ತಿಂಗಳ ಅಧಿಕಾರಾವಧಿ ಕಲ್ಪಿಸುವ ಸಂಬಂಧ 1976ರ ಕೆಎಂಸಿ ಕಾಯ್ದೆಯ ಕಲಂ 10ಕ್ಕೆ ಅಗತ್ಯ ತಿದ್ದುಪಡಿ ತರುವುದನ್ನು ಪರಿಗಣಿಸಬೇಕೆಂದು ಸಲಹೆ ನೀಡಲಾಗಿದೆ. ಕರ್ನಾಟಕದಲ್ಲಿ ಅಲ್ಪಸಂಖ್ಯಾತರು ಒಳಗೊಂಡಂತೆ ಹಿಂದುಳಿದ ವರ್ಗಗಳ ಜನಸಂಖ್ಯೆಯ ಪ್ರಮಾಣ ಶೇ.44.40ರಷ್ಟಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಈ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಿದ್ದು, ರಾಜಕೀಯವಾಗಿಯೂ ಮೀಸಲಾತಿ ಕಲ್ಪಿಸುವುದು ನ್ಯಾಯಸಮ್ಮತ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.
ಅಲ್ಲದೆ, ನಗರ ಸ್ಥಳೀಯ ಸಂಸ್ಥೆಗಳ ಒಟ್ಟು ಸ್ಥಾನಗಳ ಪೈಕಿ ಶೇ.33ರಷ್ಟು ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ನೀಡಬೇಕು. ಅಲ್ಪಸಂಖ್ಯಾತರ ಸಮುದಾಯದಲ್ಲಿ ಮುಸ್ಲಿಮ್ ಸಮುದಾಯವನ್ನು ಹೊರತುಪಡಿಸಿ ಬೇರೆ ಯಾರೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜಕೀಯ ಮೀಸಲಾತಿ ಸೌಲಭ್ಯ ಪಡೆದಿಲ್ಲ. ಶಿಕ್ಷಣ ಮತ್ತು ಉದ್ಯೋಗದಲ್ಲಿನ ಮೀಸಲಾತಿಯಡಿ ಪ್ರವರ್ಗ 2 ‘ಬಿ'ನಲ್ಲಿ ಕೇವಲ ಮುಸ್ಲಿಮ್ ಸಮುದಾಯವನ್ನು ಮಾತ್ರ ಪಟ್ಟಿ ಮಾಡಲಾಗಿದೆ. ಪ್ರವರ್ಗ ‘ಎ' ಅಡಿಯಲ್ಲಿಯೂ ಮುಸ್ಲಿಮ್ ಸಮುದಾಯಕ್ಕೆ 1996, 2001, 2010 ಹಾಗೂ 2015ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರಾತಿನಿಧ್ಯ ನೀಡಲಾಗಿದೆ.
ಆದುದರಿಂದ 2027 ಅಥವಾ 2028ರಲ್ಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುನ್ನ ರಾಜ್ಯ ಸರಕಾರವು ಹಿಂದುಳಿದ ವರ್ಗಗಳ ಪ್ರವರ್ಗ ‘ಎ' ಮತ್ತು ‘ಬಿ' ಅನ್ನು ಮತ್ತೆ ಎರಡು ವರ್ಗಗಳಾಗಿ ಪುನರ್ ವರ್ಗೀಕರಿಸಬೇಕೆಂದು ಸಮಿತಿ ಶಿಫಾರಸ್ಸು ಮಾಡಿದೆ.







