ಶಿರೂರು; ದನ, ಟೋಲ್ ಗೇಟ್ ಸಿಬ್ಬಂದಿಯನ್ನು ಉಳಿಸಲು ಹೋಗಿ ಆ್ಯಂಬುಲೆನ್ಸ್ ಪಲ್ಟಿಯಾಯಿತು: ಚಾಲಕ ರೋಶನ್ ಹೇಳಿಕೆ

ರೋಶನ್
ಬೈಂದೂರು : ಶಿರೂರು ಟೋಲ್ಗೇಟ್ನಲ್ಲಿ ಮಲಗಿದ್ದ ದನ ಹಾಗೂ ಬ್ಯಾರಿಕೇಡ್ ತೆಗೆಯುತ್ತಿದ್ದ ಸಿಬ್ಬಂದಿಯನ್ನು ಪಾರು ಮಾಡಲು ಮತ್ತು ಇವರಿಗೆ ಢಿಕ್ಕಿ ಹೊಡೆದು ವಾಹನ ಪಲ್ಟಿಯಾಗುವುದನ್ನು ತಡೆಯಲು ಮೊದಲೇ ಬ್ರೇಕ್ ಹಾಕಿದೆ. ಇದರ ಪರಿಣಾಮ ಆ್ಯಂಬುಲೆನ್ಸ್ ಅಪಘಾತಕ್ಕೀಡಾಗಿ ನಾಲ್ವರು ಮೃತ ಪಡುವಂತಾಯಿತು ಎಂದು ಆ್ಯಂಬುಲೆನ್ಸ್ ಚಾಲಕ ರೋಶನ್ ರೋಡಿಗ್ರಸ್ ತಿಳಿಸಿದ್ದಾರೆ.
ಶಿರೂರು ಟೋಲ್ ಗೇಟ್ನಲ್ಲಿ ಬುಧವಾರ ಸಂಜೆ ಸಂಭವಿಸಿದ ಅಪಘಾತ ದಿಂದ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆ್ಯಂಬುಲೆನ್ಸ್ ಚಾಲಕ ಮಾಧ್ಯಮದವರಿಗೆ ಅಪಘಾತಕ್ಕೆ ಕಾರಣವಾದ ಅಂಶವನ್ನು ಹೇಳಿದ್ದಾರೆ.
ರೋಗಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊನ್ನಾವರ ಆಸ್ಪತ್ರೆಯಿಂದ ಉಡುಪಿ ಆಸ್ಪತ್ರೆಗೆ ಆ್ಯಂಬುಲೆನ್ಸ್ ನಲ್ಲಿ ಕರೆದುಕೊಂಡು ಬರುತ್ತಿರುವಾಗ ಶಿರೂರ್ ಟೋಲ್ ಗೇಟ್ನಲ್ಲಿ ಮೊದಲು ಇಟ್ಟಿದ್ದ ಫೈಬರ್ ಬ್ಯಾರಿಕೇಡ್ಗಳನ್ನು ಸಿಬ್ಬಂದಿ ತಕ್ಷಣ ತೆಗೆಯುತ್ತಾರೆ. ಆದರೆ ಮುಂದುಗಡೆ ಇಟ್ಟಿದ್ದ ಬ್ಯಾರಿಕೇಡ್ ತೆಗೆಯಲು ಸಿಬ್ಬಂದಿ ಮುಂದಾಗಿದ್ದರು. ಅಲ್ಲದೆ ಅಲ್ಲೊಂದು ದನ ಕೂಡ ಮಲಗಿತ್ತು. ಸಿಬ್ಬಂದಿ, ದನ ಸಾಯುವುದನ್ನು ಹಾಗೂ ವಾಹನ ಪಲ್ಟಿಯಾಗುವುದನ್ನು ತಪ್ಪಿಸಲು ನಾನು ಮೊದಲೇ ಬ್ರೇಕ್ ಹಾಕಿದೆ. ಆದರೆ ನಿಯಂತ್ರಣ ತಪ್ಪಿದ ಆ್ಯಂಬುಲೆನ್ಸ್ ಅಪಘಾತಕ್ಕೀಡಾಗಿತ್ತು ಎಂದು ಅವರು ತಿಳಿಸಿದರು.
ಅಪಘಾತಕ್ಕೆ ಹೊಣೆ ಯಾರು?
ಶಿರೂರು ಟೋಲ್ನಲ್ಲಿ ಆ್ಯಂಬುಲೆನ್ಸ್ ಪಲ್ಟಿಯಾಗಿ ನಾಲ್ವರು ಮೃತಪಟ್ಟು ಐವರು ಗಾಯಗೊಂಡ ಘಟನೆಗೆ ಟೋಲ್ಗೆ ಸಂಬಂಧಪಟ್ಟವರ ಬೇಜವಾಬ್ದಾರಿ ವರ್ತನೆಯೇ ಕಾರಣ ಎಂಬುದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ಗಳು ಕೇಳಿಬರುತ್ತಿವೆ.
ಶಿರೂರು ಟೋಲ್ ಕೇಂದ್ರ ಬಳಿ ಹೆದ್ದಾರಿಯಲ್ಲಿ ಮಳೆ ನೀರು ನಿಂತಿದ್ದು ಟೋಲ್ ಪ್ರವೇಶಕ್ಕೂ ಮುಂಚೆ ನೀರಿನ ಮೇಲೆ ಸಾಗಿದ ಆ್ಯಂಬುಲೆನ್ಸ್ ನಿಯಂತ್ರಣ ಕಳೆದುಕೊಂಡಿರುವುದು, ಟೋಲ್ ಸಂಗ್ರಹ ದಾರಿಯ ರಸ್ತೆಯಲ್ಲಿ ಫೈಬರ್ ಬ್ಯಾರಿಕೇಡ್ ಅಡ್ಡವಿಟ್ಟಿರುವುದು, ರಸ್ತೆ ಮೇಲೆ ಜಾನುವಾರು ಮಲಗಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬರುತ್ತಿದೆ.
ಆ್ಯಂಬುಲೆನ್ಸ್ ಚಾಲಕ ಅತಿ ವೇಗದಿಂದ ಬಂದಿದ್ದ ಎನ್ನಲಾಗುತ್ತಿರುವುದು ಒಂದೆಡೆಯಾದರೆ ಟೋಲ್ ಸಂಬಂದಪಟ್ಟವರ ನಿರ್ಲ್ಯಕ್ಷ್ಯ ಕೂಡ ಸಾರ್ವಜನಿಕರ ಕೆಂಗೆಣ್ಣಿಗೆ ಗುರಿಯಾಗಿದೆ. ‘ತುರ್ತು ವಾಹನಗಳು ಸಂಚರಿಸುವ ದಾರಿಯಲ್ಲಿ ಟೋಲ್ ಗೇಟ್ ಸಿಬ್ಬಂದಿ ಎರಡೆರಡು ಕಡೆ ಬ್ಯಾರಿಕೇಡನ್ನು ಇಟ್ಟಿರು ತ್ತಾರೆ ಹಾಗೂ ದನ ಬಹಳ ಹೊತ್ತಿನಿಂದ ರಸ್ತೆಯಲ್ಲಿ ಮಲಗಿದ್ದರೂ ಸಹ ಅದರ ಬಗ್ಗೆ ಗಮನ ಹರಿಸದೆ ಇದ್ದು ಅಪಘಾತಕ್ಕೆ ನೇರ ಹೊಣೆಗಾರರಾಗಿರುತ್ತಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಆರೋಪಿಸಿದ್ದಾರೆ.
ಆದುದರಿಂದ ಉಡುಪಿ ಜಿಲ್ಲಾಧಿಕಾರಿಯವರು ಟೋಲ್ ಗೇಟ್ ಕಂಪೆನಿ ಯವರ ಮೇಲೆ ತಕ್ಷಣವೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ನಿಟ್ಟಿನಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಸಾವನ್ನಪ್ಪಿರುವ ಪ್ರತಿಯೊಬ್ಬರಿಗೂ ಕಂಪನಿಯವರಿಂದ ಕನಿಷ್ಠ 30 ಲಕ್ಷ ರೂ. ತುರ್ತು ಪರಿಹಾರವನ್ನು ಕೊಡಿಸ ಬೇಕೆಂದು ಅವರು ಆಗ್ರಹಿಸಿದ್ದಾರೆ.