ಉಡುಪಿ; ತಾಯಿಯನ್ನು ನಿಂದಿಸಿದಕ್ಕಾಗಿ ಯುವಕನ ಕೊಲೆ: ಇಬ್ಬರು ಆರೋಪಿಗಳ ಬಂಧನ

ಉಡುಪಿ: ಕುಡಿದ ಅಮಲಿನಲ್ಲಿ ತಾಯಿಯನ್ನು ನಿಂದಿಸಿದ ಎಂಬ ಕಾರಣಕ್ಕಾಗಿ ವ್ಯಕ್ತಿಯೊಬ್ಬರನ್ನು ಇಬ್ಬರು ಹೊಡೆದು ಕೊಲೆ ಮಾಡಿರುವ ಘಟನೆ ಇಂದ್ರಾಳಿ ರೈಲ್ವೆ ನಿಲ್ದಾಣದ ಸಮೀಪದ ರಸ್ತೆಯಲ್ಲಿ ಗುರುವಾರ ಸಂಜೆ ವೇಳೆ ನಡೆದಿದೆ.
ತಮಿಳುನಾಡು ಮೂಲದ ಕುಮಾರ್ (32) ಎಂಬವರು ಕೊಲೆಗೀಡಾಗಿದ್ದು, ಕೊಲೆ ಆರೋಪಿಗಳಾದ ತಮಿಳುನಾಡು ಮೂಲದ ಕುಟ್ಟಿ ಮತ್ತು ನವೀನ್ ಎಂಬವರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಗೋವಾಕ್ಕೆ ಹೋಗಲು ತಮಿಳುನಾಡಿನಿಂದ ರೈಲು ಮೂಲಕ ಹೊರಟು ಗುರುವಾರ ಬೆಳಗ್ಗೆ ಮಂಗಳೂರಿಗೆ ತಲುಪಿದ್ದ ಕುಟ್ಟಿ ಮತ್ತು ನವೀನ್, ಬಳಿಕ ಮಂಗಳೂರಿನ ಮೂಲಕ ಗೋವಾಕ್ಕೆ ತೆರಳಲೆಂದು ಉಡುಪಿಗೆ ಆಗಮಿಸಿದ್ದರು. ಈ ವೇಳೆ ರೈಲು ವಿಳಂಬವಿರುವ ಕಾರಣಕ್ಕೆ ಮದ್ಯ ಸೇವಿಸಲು ನಿಲ್ದಾಣದ ಸಮೀಪ ಇರುವ ಬಾರ್‌ಗೆ ಹೋಗಿದ್ದರು.
ರೈಲ್ವೇ ನಿಲ್ದಾಣದ ಬಳಿಯ ಹೊಟೇಲ್‌ನಲ್ಲಿ ಕಳೆದ 2 ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದ ಕುಮಾರ್, ಇದೇ ಬಾರ್‌ಗೆ ಮದ್ಯ ಸೇವಿಸಲು ಹೋಗಿದ್ದರು. ಅಲ್ಲಿ ಈ ಮೂವರು ಪರಸ್ಪರ ಪರಿಚಯಸ್ಥರಾದರು. ಮೂವರೂ ಮದ್ಯ ಸೇವನೆ ಮಾಡಿ ಅಲ್ಲಿಂದ ಹೊರ ಬಂದರು. ಹೊರಗಡೆ ಕ್ಷುಲ್ಲಕ ಕಾರಣಕ್ಕಾಗಿ ಇವರ ಮಧ್ಯೆ ವಾಗ್ವಾದ ನಡೆಯಿತ್ತೆನ್ನಲಾಗಿದೆ.
ಆಗ ಕುಮಾರ್, ಕುಟ್ಟಿ ಮತ್ತು ನವೀನ್ ಅವರ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿದ ಎಂದು ಆರೋಪಿಸಲಾಗಿದೆ. ಇದೇ ಸಿಟ್ಟಿನಲ್ಲಿ ಇವರಿಬ್ಬರು ಸೇರಿ ಕುಮಾರ್ ಹಲ್ಲೆ ನಡೆಸಿ, ಸೋಂಟೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆಂದು ತಿಳಿದುಬಂದಿದೆ.
ಕೂಡಲೇ ಸ್ಥಳದಲ್ಲಿದ್ದ ಸಾರ್ವಜನಿಕರು ಹಾಗೂ ರೈಲ್ವೆ ಪೊಲೀಸರು, ಸ್ಥಳೀಯ ಟ್ಯಾಕ್ಸಿ ಚಾಲಕರು ಆರೋಪಿಗಳನ್ನು ಹಿಡಿದು ಉಡುಪಿ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕುಮಾರ್ ಹೆಬ್ರಿ ಶಿವಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ. ಸ್ಥಳಕ್ಕೆ ಉಡುಪಿ ಡಿವೈಎಸ್ಪಿ ಶಿವಾನಂದ ನಾಯ್ಕ, ನಗರ ಠಾಣೆ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.







